‘ಗೃಹಲಕ್ಷ್ಮಿ’ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಅದರ ನೋಂದಣಿ ಕಾರ್ಯ ಜು.19ರಂದು ಪ್ರಾರಂಭವಾಗಿದೆ. ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಬೆಂಗಳೂರು ಒನ್‌ಗಳಲ್ಲಿ ನೋಂದಣಿ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಜು.19ರಿಂದ ಪ್ರಾರಂಭವಾಗಿರುವ ಈ ಕಾರ್ಯದಲ್ಲಿ ಹಾವೇರಿ ಜಿಲ್ಲೆಯಲ್ಲಿ 3,94,790 ಮನೆಯೊಡತಿಯರ ಪೈಕಿ 3,29,258 ಅಂದರೆ ಶೇ.83ರಷ್ಟು ನೋಂದಣಿ ಮಾಡಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ(ಆ.09): ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಗೆ ನೋಂದಣಿ ಕಾರ್ಯ ಜು.19ರಿಂದ ಪ್ರಾರಂಭವಾಗಿದ್ದು, ರಾಜ್ಯದಲ್ಲಿ ಈವರೆಗೆ ಶೇ.76ರಷ್ಟು ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಗ್ರಾಮೀಣ ಭಾಗದಲ್ಲಿ ಶೇ.80ರಷ್ಟು ಗೃಹಿಣಿಯರು ನೋಂದಣಿ ಮಾಡಿಸಿದ್ದರೆ, ನಗರ ಭಾಗದಲ್ಲಿ ಶೇ.69ರಷ್ಟು ಮಹಿಳೆಯರು ಯೋಜನೆಗೆ ತಮ್ಮ ಹೆಸರು ನೋಂದಾಯಿಸಿದ್ದಾರೆ. ಆ ಮೂಲಕ ಗ್ರಾಮೀಣ ಮಹಿಳೆಯರು ನಗರವಾಸಿಗಳನ್ನು ಹಿಂದಿಕ್ಕಿದ್ದಾರೆ. ಇನ್ನು ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆ (ಶೇ.83) ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ನಗರ ಜಿಲ್ಲೆ ಕೊನೆಯ (ಶೇ.61) ಸ್ಥಾನದಲ್ಲಿದೆ.
‘ಗೃಹಲಕ್ಷ್ಮಿ’ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಅದರ ನೋಂದಣಿ ಕಾರ್ಯ ಜು.19ರಂದು ಪ್ರಾರಂಭವಾಗಿದೆ. ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಬೆಂಗಳೂರು ಒನ್‌ಗಳಲ್ಲಿ ನೋಂದಣಿ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಜು.19ರಿಂದ ಪ್ರಾರಂಭವಾಗಿರುವ ಈ ಕಾರ್ಯದಲ್ಲಿ ಹಾವೇರಿ ಜಿಲ್ಲೆಯಲ್ಲಿ 3,94,790 ಮನೆಯೊಡತಿಯರ ಪೈಕಿ 3,29,258 ಅಂದರೆ ಶೇ.83ರಷ್ಟು ನೋಂದಣಿ ಮಾಡಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ, ಬಿಬಿಎಂಪಿ ಅಧಿಕಾರಿಗಳು ತಲಾ 2000 ಜನರನ್ನು ಕರೆತರಬೇಕು; ಎನ್.ಆರ್. ರಮೇಶ್ ಆರೋಪ
ಬೆಂಗಳೂರು ನಗರ ಜಿಲ್ಲೆಯ 11,45,169 ಮನೆ ಯಜಮಾನತಿಯರ ಪೈಕಿ 6,95,285 (ಶೇ.61)ರಷ್ಟುಮಹಿಳೆಯರು ಮಾತ್ರ ನೋಂದಣಿ ಮಾಡಿಸಿದ್ದಾರೆ. ಈ ಮೂಲಕ ಗೃಹಲಕ್ಷ್ಮೇ ನೋಂದಣಿಯಲ್ಲಿ ಶೇಕಡಾವಾರು ಪ್ರಮಾಣದಲ್ಲಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇನ್ನು, ಧಾರವಾಡ ಜಿಲ್ಲೆಯಲ್ಲಿ 4,04,848 ಜನರ ಪೈಕಿ ಈವರೆಗೆ 3,09,138 ಮನೆಯ ಯಜಮಾನತಿಯರು ನೋಂದಣಿ ಮಾಡಿಸಿದ್ದಾರೆ. ಈ ಮೂಲಕ ಜಿಲ್ಲೆಯ ಸಾಧನೆ ಶೇ.76ರಷ್ಟಾಗಿದೆ.
ಇನ್ನುಳಿದಂತೆ ಮಂಡ್ಯ, ಚಿಕ್ಕಮಗಳೂರು-ಶೇ.82, ಚಾಮರಾಜನಗರ, ಚಿತ್ರದುರ್ಗ, ಗದಗ ಶೇ.81, ಹಾಸನ, ಉತ್ತರ ಕನ್ನಡ-ಶೇ.80, ಬಾಗಲಕೋಟೆ, ಕೊಪ್ಪಳ, ತುಮಕೂರು-ಶೇ.79, ಬೆಳಗಾವಿ, ಬೀದರ, ಮೈಸೂರು, ಶಿವಮೊಗ್ಗ-ಶೇ.78, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ-ಶೇ.77, ವಿಜಯಪುರ-ಶೇ.76, ವಿಜಯನಗರ-ಶೇ.75, ದಕ್ಷಿಣ ಕನ್ನಡ, ಕಲಬುರಗಿ, ಕೊಡಗು-ಶೇ.74, ಉಡುಪಿ, ಯಾದಗಿರಿ ಜಿಲ್ಲೆಗಳಲ್ಲಿ ಶೇ.73ರಷ್ಟುನೋಂದಣಿಯಾಗಿದೆ.
ರಾಜ್ಯದಲ್ಲೆಷ್ಟು ನೋಂದಣಿ:
ಇಡೀ ರಾಜ್ಯದಲ್ಲಿ 1,30,01,915 ಮನೆಯೊಡತಿಯರ ಪೈಕಿ ಈವರೆಗೆ 1 ಕೋಟಿಗೂ ಹೆಚ್ಚು ಜನ ನೋಂದಣಿ ಮಾಡಿಸಿದ್ದಾರೆ. ಇದರಿಂದಾಗಿ ಒಟ್ಟು ಶೇ.76ರಷ್ಟು ಗೃಹಿಣಿಯರು ನೋಂದಣಿ ಮಾಡಿಸಿದಂತಾಗಿದೆ. ಇನ್ನು ಗೃಹಲಕ್ಷ್ಮೇ ಯೋಜನೆಯಡಿ ನೋಂದಣಿ ಮಾಡಿಸುವಲ್ಲಿ ಗ್ರಾಮೀಣಿಗರು ನಗರವಾಸಿಗಳನ್ನು ಹಿಂದಿಕ್ಕಿದ್ದಾರೆ. 92,18,854 ಗ್ರಾಮೀಣ ಜನರ ಪೈಕಿ, 73,70,448 (ಶೇ.80) ಮಹಿಳೆಯರು ನೋಂದಣಿ ಮಾಡಿಸಿದ್ದರೆ, ನಗರ ಪ್ರದೇಶದ 41,43,061 ಮನೆಯೊಡತಿಯರ ಪೈಕಿ ಈವರೆಗೆ 28,40,232 (ಶೇ.69) ಗೃಹಿಣಿಯರು ನೋಂದಣಿ ಮಾಡಿಸಿದ್ದಾರೆ. ಈ ಮೂಲಕ ನೋಂದಣಿ ವಿಷಯದಲ್ಲಿ ಗ್ರಾಮೀಣಿಗರೇ ಮುಂದಿದ್ದಾರೆ.
ಈಗ ತಾಂತ್ರಿಕ ಸಮಸ್ಯೆಯಿಲ್ಲ:
ಆರಂಭದ ಮೊದಲ ಒಂದು ವಾರ ಸರ್ವರ್ ಸೇರಿದಂತೆ ವಿವಿಧ ತಾಂತ್ರಿಕ ಸಮಸ್ಯೆಯಿಂದ ನೋಂದಣಿ ಸುಸೂತ್ರವಾಗಿ ನಡೆಯುತ್ತಿರಲಿಲ್ಲ. ಆದರೀಗ ಯಾವುದೇ ಸಮಸ್ಯೆಯಿಲ್ಲ. ಎಲ್ಲರೂ ಸುಲಲಿತವಾಗಿ ನೋಂದಣಿ ಮಾಡಿಸುತ್ತಿದ್ದಾರೆ. ನೋಂದಣಿಗೆ ಇದೇ ಕೊನೆ ದಿನ ಎಂದೇನೂ ಈವರೆಗೂ ಸರ್ಕಾರ ತಿಳಿಸಿಲ್ಲ. ನಮಗೆ ಬರೀ ಟಾರ್ಗೆಟ್ ನೀಡಿದ್ದಾರಷ್ಟೆ. ನೋಂದಣಿ ಜಾಸ್ತಿಯಾದರೆ ಮುಂದಿನ ವಾರದ ಅಂಕಿ-ಸಂಖ್ಯೆ ಬದಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
‘ಗೃಹಲಕ್ಷ್ಮಿ’ ಯೋಜನೆಯಡಿ ನೋಂದಣಿಗೆ ಕೆಲ ದಿನ ತಾಂತ್ರಿಕ ಸಮಸ್ಯೆ ಕಾಡುತ್ತಿತ್ತು. ಆದರೆ, ಈಗ ಯಾವ ಸಮಸ್ಯೆಯೂ ಇಲ್ಲ. ಉತ್ತಮವಾಗಿ ನೋಂದಣಿ ನಡೆಯುತ್ತಿದೆ. ಪ್ರತಿದಿನ ಸಾವಿರಾರು ಜನ ನೋಂದಣಿ ಮಾಡಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯ ಸಾಧನೆ ಶೇ.76ರ ಷ್ಟಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಮಧ್ಯಮ ವರ್ಗದವರಿಗೆ ಸಿಗುವಂತೆ ಮಾಡಲು ಚಿಂತನೆ : ಲಕ್ಷ್ಮಿ ಹೆಬ್ಬಾಳ್ಕರ್
ಈವರೆಗೆ ರಾಜ್ಯದಲ್ಲಿ 1.03 ಕೋಟಿ ನೋಂದಣಿ: ಹೆಬ್ಬಾಳ್ಕರ್
ಬೆಂಗಳೂರು: ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2000 ರು. ನೀಡುವ ಗೃಹಲಕ್ಷ್ಮೇ ಯೋಜನೆಗೆ ಆ.8ರವರೆಗೆ 1.03 ಕೋಟಿ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
‘ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇರಿಸಿರುವ ಮಹತ್ವಾಕಾಂಕ್ಷಿ ಯೋಜನೆಗೆ ಇವತ್ತಿನವರೆಗೆ 1.03 ಕೋಟಿ ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಬೆಲೆ ಏರಿಕೆಯ ಹೊರೆಯನ್ನು ಇಳಿಸಲು ಹಾಗೂ ಕುಟುಂಬ ನಿರ್ವಹಣೆ ಮಾಡಲು ಮಹಿಳೆಯರಿಗೆ ಈ ಯೋಜನೆ ಆಸರೆಯಾಗಲಿದೆ’ ಎಂದು ಸಚಿವರು ಹೇಳಿದ್ದಾರೆ.