Gruha Jyoti Scheme: ಆಗಸ್ಟ್‌ ಮೊದಲನೇ ದಿನದಿಂದಲೇ ಶೂನ್ಯ ಬಿಲ್‌ ವಿತರಣೆ ಶುರು

Published : Aug 02, 2023, 05:43 AM IST
Gruha Jyoti Scheme: ಆಗಸ್ಟ್‌ ಮೊದಲನೇ ದಿನದಿಂದಲೇ ಶೂನ್ಯ ಬಿಲ್‌ ವಿತರಣೆ ಶುರು

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯಡಿ ಆಗಸ್ಟ್‌ ಮೊದಲ ದಿನವೇ ಮೀಟರ್‌ ರೀಡಿಂಗ್‌ ಮೂಲಕ ಅರ್ಹರಿಗೆ ಶೂನ್ಯ ಬಿಲ್‌ ನೀಡುವ ಕೆಲಸವನ್ನು ಎಸ್ಕಾಂಗಳ ಸಿಬ್ಬಂದಿ ಶುರು ಮಾಡಿದ್ದಾರೆ. 

ಬೆಂಗಳೂರು (ಆ.02): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯಡಿ ಆಗಸ್ಟ್‌ ಮೊದಲ ದಿನವೇ ಮೀಟರ್‌ ರೀಡಿಂಗ್‌ ಮೂಲಕ ಅರ್ಹರಿಗೆ ಶೂನ್ಯ ಬಿಲ್‌ ನೀಡುವ ಕೆಲಸವನ್ನು ಎಸ್ಕಾಂಗಳ ಸಿಬ್ಬಂದಿ ಶುರು ಮಾಡಿದ್ದಾರೆ. ಈ ರೀತಿ ವಿತರಿಸುತ್ತಿರುವ ಬಿಲ್‌ ಅನ್ನೂ ಸಹ ಬೆಸ್ಕಾಂ ಬಿಡುಗಡೆ ಮಾಡಿದೆ. ಕಳೆದ ತಿಂಗಳ ಬಿಲ್‌ಗಿಂತ ಮುಂಭಾಗದ ಬಿಲ್‌ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯಿಲ್ಲ. ಆದರೆ ಕೆಲವು ಹೊಸ ಕಲಂಗಳ ಸೇರ್ಪಡೆ ಮಾಡಿ ಒಟ್ಟು ಮೊತ್ತ ಹಾಗೂ ಗೃಹ ಜ್ಯೋತಿಯಡಿ ಸಬ್ಸಿಡಿ ಉಳಿದ ಪಾವತಿ ಮಾಡಬೇಕಿರುವ ಮೊತ್ತಗಳ ಪ್ರತ್ಯೇಕ ಪಟ್ಟಿಗಳನ್ನು ಒದಗಿಸಲಾಗಿದೆ.

ಇನ್ನು ಬಿಲ್‌ನ ಹಿಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಇಂಧನ ಸಚಿವ ಕೆ.ಜೆ.ಜಾಜ್‌ರ್‍ ಅವರ ಫೋಟೋ ಮುದ್ರಿಸಲಾಗಿದೆ. ಜತೆಗೆ ಮಧ್ಯ ಭಾಗದಲ್ಲಿ ‘ಗೃಹಜ್ಯೋತಿ’ ಲೋಗೋ ಮುದ್ರಿಸಲಾಗಿದ್ದು, ಹಿಂದಿನ ಬಿಲ್‌ಗಳ ರೀತಿಯಲ್ಲೇ ವಿವಿಧ ಸ್ಲಾ್ಯಬ್‌ಗಳ ದರ ಪಟ್ಟಿಹಾಗೂ ಸಲಹೆ-ಸೂಚನೆಗಳನ್ನು ನೀಡಲಾಗಿದೆ.

ಸಿದ್ದುಗೆ ಪತ್ರ ಬರೆದಿದ್ದಕ್ಕೆ ಕ್ಷಮೆ ಕೇಳಿಲ್ಲ: ಶಾಸಕ ಬಿ.ಆರ್‌.ಪಾಟೀಲ್‌

ಹೊಸ ಬಿಲ್‌ನಲ್ಲಿ ಏನಿದೆ?: ಹಿಂದಿನ ಬಿಲ್‌ಗಳ ಮಾದರಿಯಲ್ಲೇ ಬಿಲ್‌ ವಿವರ, ಗೃಹಜ್ಯೋತಿ ನೋಂದಣಿ ದಿನಾಂಕ, ಹಿಂದಿನ ವರ್ಷದ ಸರಾಸರಿ ಬಳಕೆ, ಅರ್ಹ ಪ್ರಮಾಣ, ರೀಡಿಂಗ್‌ ದಿನಾಂಕ, ವಿದ್ಯುತ್‌ ಬಳಕೆಯ ವಿವರ (ಯುನಿಟ್‌ಗಳಲ್ಲಿ), ನಿಗದಿತ ಶುಲ್ಕ, ವಿದ್ಯುತ್‌ ಶುಲ್ಕ, ಇಂಧನ ಹೊಂದಾಣಿಕೆ ಶುಲ್ಕ, ತೆರಿಗೆ ಸೇರಿ ಒಟ್ಟು ಪಾವತಿಸಬೇಕಾದ ಮೊತ್ತವನ್ನು ಉಪ ಮೊತ್ತ-1 (ಸಬ್‌ ಟೋಟಲ್‌-1) ಎಂಬ ಪಟ್ಟಿಯಲ್ಲಿ ಒಟ್ಟು ಮೊತ್ತವಾಗಿ ನೀಡಲಾಗಿದೆ.

ಎರಡನೇ ಪಟ್ಟಿಯಲ್ಲಿ ಗೃಹ ಜ್ಯೋತಿ ಅನುದಾನದ ಸಬ್ಸಿಡಿ ಎಂದು ಬರೆದು ನಿಗದಿತ ಶುಲ್ಕ, ವಿದ್ಯುತ್‌ ಶುಲ್ಕ (ಗೃಹ ಜ್ಯೋತಿ ಅರ್ಹ ಪ್ರಮಾಣಕ್ಕೆ ಮಾತ್ರ), ಇಂಧನ ಹೊಂದಾಣಿಕೆ ಶುಲ್ಕ ಹಾಗೂ ತೆರಿಗೆಗಳನ್ನು ಲೆಕ್ಕ ಹಾಕಿ ಉಪ ಮೊತ್ತ-2 (ಸಬ್‌ ಟೋಟಲ್‌-2) ಹೆಸರಿನಲ್ಲಿ ನಮೂದಿಸಲಾಗಿದೆ. ಮೊದಲ ಪಟ್ಟಿಯಲ್ಲಿನ ಒಟ್ಟು ಮೊತ್ತವನ್ನು ಉಪ ಮೊತ್ತ-2 ರಲ್ಲಿ ಕಳೆದು ಉಳಿದದ್ದನ್ನು ಅಂತಿಮ ಬಿಲ್‌ ಮೊತ್ತ ಎಂದು ತೋರಿಸಲಾಗುತ್ತದೆ. ಈ ಮೊತ್ತ ಶೂನ್ಯ ಇರಲಿ ಅಥವಾ ಎಷ್ಟೇ ಇರಲಿ ಅಷ್ಟುಮೊತ್ತವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.

ಬಿಲ್‌ 2214 ರು. ಪಾವತಿಸಬೇಕಾಗಿದ್ದು 183 ರು.: ಉದಾಹರಣೆಗೆ ಬೆಸ್ಕಾಂ ಗ್ರಾಹಕರೊಬ್ಬರಿಗೆ 172 ಯುನಿಟ್‌ ವಿದ್ಯುತ್‌ ಬಳಕೆಯ ಮೊದಲ ದಿನ ನೀಡಿರುವ ಬಿಲ್‌ನ್ನು ಬಿಡುಗಡೆ ಮಾಡಿದೆ. ಗ್ರಾಹಕ 2022-23ನೇ ಸಾಲಿನಲ್ಲಿ ಪ್ರತಿ ತಿಂಗಳು ಸರಾಸರಿ 139 ಯುನಿಟ್‌ ವಿದ್ಯುತ್‌ ಬಳಕೆ ಮಾಡಿದ್ದಾರೆ. ಇವರಿಗೆ 153 ಯುನಿಟ್‌ವರೆಗೆ ಗೃಹ ಜ್ಯೋತಿಯಡಿ ಉಚಿತವಾಗಿ ಪಡೆಯಲು ಅರ್ಹವಿರುವ ಬಗ್ಗೆ ಬಿಲ್‌ನಲ್ಲಿ ತಿಳಿಸಲಾಗಿದೆ. ಅವರು ಜು.1 ರಿಂದ ಆ.1ರ ವೇಳೆಗೆ 172 ಯುನಿಟ್‌ ವಿದ್ಯುತ್‌ ಬಳಕೆ ಮಾಡಿದ್ದಾರೆ. ಜತೆಗೆ 5 ಕೆ.ವಿ. ಸ್ಯಾಂಕ್ಷನ್‌ ಲೋಡ್‌ನ ಸಂಪರ್ಕವಾಗಿದ್ದರಿಂದ ಪ್ರತಿ ಕೆ.ವಿಗೆ 110 ರು.ಗಳಂತೆ 550 ರು. ನಿಗದಿತ ಶುಲ್ಕ, 172 ಯುನಿಟ್‌ಗೆ 7 ರು.ಗಳಂತೆ 1,204 ರು., ಇಂಧನ ಹೊಂದಾಣಿಕೆ ಶುಲ್ಕ 352 ರು., 108.36 ರು. ತೆರಿಗೆ ಸೇರಿದಂತೆ 2,214 ರು. ಬಿಲ್‌ ಬಂದಿದೆ.

ಆದರೆ, ಗೃಹ ಜ್ಯೋತಿ ಯೋಜನೆ ಅನ್ವಯವಾಗಿರುವುದರಿಂದ ನಿಗದಿತ ಶುಲ್ಕ 550 ರು., ಅರ್ಹ 153 ಯುನಿಟ್‌ಗಳಿಗೆ 7 ರು.ಗಳಂತೆ 1,071 ರು., 313 ರು. ಇಂಧನ ಹೊಂದಾಣಿಕೆ ಶುಲ್ಕ, 96 ರು. ತೆರಿಗೆ ಸೇರಿ 2,031 ರು. ಉಳಿತಾಯವಾಗಲಿದೆ. ಉಳಿದ ಬಾಕಿ 183 ರು. ಮಾತ್ರ ಪಾವತಿಸಬೇಕು ಎಂದು ಬಿಲ್‌ನಲ್ಲಿ ತಿಳಿಸಲಾಗಿದೆ. ಅದೇ ರೀತಿ ಕೆಲವು ಬಿಲ್‌ಗಳಲ್ಲಿ 696 ರು., 346 ರು., ಹೀಗೆ ಕಡಿಮೆ ಬಿಲ್‌ ಬಂದಿರುವವರಿಗೆ ಜೀರೋ ಬಿಲ್‌ ನೀಡಲಾಗಿದೆ. ಕಳೆದ ವರ್ಷದ ಸರಾಸರಿ ಬಳಕೆಯ ಶೇ.10ರಷ್ಟುಮಾತ್ರ ಉಚಿತ ಇರಲಿದೆ. ಹೀಗಾಗಿ ಗ್ರಾಹಕರೊಬ್ಬರಿಗೆ 695 ರು. ಬಂದಿದ್ದರೆ ಅರ್ಹ ಮಿತಿಗೆ ಮೀರಿ ಬಳಕೆ ಮಾಡಿರುವುದಕ್ಕೆ 1 ರು. ಬಿಲ್‌ ಪಾವತಿಸುವಂತೆ ಸೂಚಿಸಲಾಗಿದೆ.

ಶಾಸಕರ ಅತೃಪ್ತಿ ಬೆನ್ನಲ್ಲೇ ಸಿಎಂ ಸಿದ್ದು-ಪರಮೇಶ್ವರ್‌ ರಹಸ್ಯ ಸಭೆ

ಬಿಲ್‌ ಹಿಂದೆ ಸೂಚನೆಗಳು: ಇನ್ನು ಬಿಲ್‌ ಹಿಂಭಾಗದಲ್ಲಿ ಹಿಂದಿನ ಬಿಲ್‌ಗಳ ಮಾದರಿಯಲ್ಲೇ ಸಲಹೆ ಸೂಚನೆ ನೀಡಲಾಗಿದೆ. ವಿದ್ಯುತ್‌ ಶುಲ್ಕ ಬಾಕಿ ಹಾಗೂ ಬಡ್ಡಿ ಹಾಕುವುದನ್ನು ತಪ್ಪಿಸಲು ವಾಯಿದೆಯೊಳಗೆ ಹಣ ಪಾವತಿಸಬೇಕು. ವಾಯಿದೆಯೊಳಗೆ ಬಿಲ್‌ ಪಾವತಿಸದ್ದಿರೆ ಇದನ್ನೇ ವಿದ್ಯುತ್‌ ಸರಬರಾಜು ನಿಲ್ಲಿಸುವ ಹದಿನೈದು ದಿನಗಳ ನೋಟಿಸ್‌ ಎಂದು ಪರಿಗಣಿಸಬೇಕು ಎಂಬಿತ್ಯಾದಿ ಸಲಹೆ ಸೂಚನೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌