ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸುಳ್ಳು ಸುದ್ದಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಸಂಸ್ಥೆಗಳು ಪ್ರತಿಕ್ರಿಯಿಸದಿದ್ದರೆ ಸಂಸ್ಥೆಗಳ ಭಾರತೀಯ ಮುಖ್ಯಸ್ಥರನ್ನು ಕರೆಸಿ ಕಾಯ್ದೆಯಡಿ ವಿಚಾರಣೆ ನಡೆಸುತ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು(ಆ.02): ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದ ಸೈಬರ್ ಕಾಯ್ದೆ ಜತೆಗೆ ರಾಜ್ಯಕ್ಕೆ ಪ್ರತ್ಯೇಕ ಸೈಬರ್ ಕಾಯ್ದೆ ರೂಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಹೀಗಾಗಿ ಗೃಹ ಇಲಾಖೆ ಹಾಗೂ ಐಟಿ-ಬಿಟಿ ಇಲಾಖೆ ರಾಜ್ಯಕ್ಕೆ ಪ್ರತ್ಯೇಕ ಸೈಬರ್ ಕಾಯ್ದೆ ರೂಪಿಸಲು ಮುಂದಾಗಿವೆ. ಅದಕ್ಕಾಗಿ ಗೃಹ ಇಲಾಖೆ, ಐಟಿ-ಬಿಟಿ ಇಲಾಖೆ ಮತ್ತು ಸೈಬರ್ ಕಾನೂನಿನ ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಸೈಬರ್ ಕಾಯ್ದೆ ಜತೆಗೆ ರಾಜ್ಯಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಿ, ಸುಳ್ಳು ಸುದ್ದಿ ಹರಡುವುದನ್ನು ತಡೆಯಲಾಗುತ್ತದೆ ಎಂದರು.
ಸುಳ್ಳು ಸುದ್ದಿ ನಿಯಂತ್ರಣಕ್ಕೆ ಕಾನೂನು: ಸಚಿವ ಪರಮೇಶ್ವರ್
ಸದ್ಯ ಸೈಬರ್ ಅಪರಾಧಗಳಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುವುದು ಕಠಿಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡುವವರ ಪತ್ತೆ ಸಾಕಷ್ಟುಕಷ್ಟ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಾಮಾಜಿಕ ಜಾಲತಾಣದ ಮುಖ್ಯಸ್ಥರಿಗೆ ಪತ್ರ ಬರೆದರೆ ಅವರು ನಿರ್ಲಕ್ಷಿಸುತ್ತಿದ್ದಾರೆ. ಅಮೆರಿಕಾದಂತಹ ದೇಶಗಳಲ್ಲಿ ಅವರ ಸರ್ವರ್ ಇರುವುದರಿಂದ ಇಲ್ಲಿನ ಕಾನೂನುಗಳಿಗೆ ಅವರು ಸ್ಪಂದಿಸುತ್ತಿಲ್ಲ. ಹೀಗಾಗಿ ಹೊಸ ಕಾಯ್ದೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಮುಖ್ಯಸ್ಥರಿಗೆ ಬುಲಾವ್:
ಹೊಸ ಕಾಯ್ದೆ ರೂಪಿಸುವುದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳ ಸಾಮಾಜಿಕ ಜಾಲತಾಣಗಳ ಭಾರತೀಯ ಮುಖ್ಯಸ್ಥರನ್ನು ಕರೆದು ಮಾತುಕತೆ ಮಾಡಲು ಚಿಂತಿಸಲಾಗಿದೆ. ಅಲ್ಲದೆ, ಹೊಸ ಕಾಯ್ದೆ ಜಾರಿ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಸಂಸ್ಥೆಗಳು ಪ್ರತಿಕ್ರಿಯಿಸದಿದ್ದರೆ ಸಂಸ್ಥೆಗಳ ಭಾರತೀಯ ಮುಖ್ಯಸ್ಥರನ್ನು ವಿಚಾರಣೆಗೆ ಕರೆಯುವಂತಹ ಅವಕಾಶಗಳಿರಲಿವೆ ಎಂದರು.
ಸಾಮಾಜಿಕ ತಾಣಗಳ ಬಾಸ್ ಕರೆಸಿ ವಿಚಾರಣೆ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸುಳ್ಳು ಸುದ್ದಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಸಂಸ್ಥೆಗಳು ಪ್ರತಿಕ್ರಿಯಿಸದಿದ್ದರೆ ಸಂಸ್ಥೆಗಳ ಭಾರತೀಯ ಮುಖ್ಯಸ್ಥರನ್ನು ಕರೆಸಿ ಕಾಯ್ದೆಯಡಿ ವಿಚಾರಣೆ ನಡೆಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.