ಬಿಬಿಎಂಪಿ 7 ವಿಭಾಗ ಮಾಡಿ ವರದಿ ಸಲ್ಲಿಸಿದ ಗ್ರೇಟರ್ ಬೆಂಗಳೂರು ಸಮಿತಿ; ಜುಲೈನಲ್ಲಿ ಪಾಲಿಕೆ ಚುನಾವಣೆ!

Published : Feb 24, 2025, 06:41 PM ISTUpdated : Feb 24, 2025, 06:56 PM IST
ಬಿಬಿಎಂಪಿ 7 ವಿಭಾಗ ಮಾಡಿ ವರದಿ ಸಲ್ಲಿಸಿದ ಗ್ರೇಟರ್ ಬೆಂಗಳೂರು ಸಮಿತಿ; ಜುಲೈನಲ್ಲಿ ಪಾಲಿಕೆ ಚುನಾವಣೆ!

ಸಾರಾಂಶ

ಬೆಂಗಳೂರು ಮಹಾನಗರ ಪಾಲಿಕೆಯನ್ನು 7 ಕಾರ್ಪೊರೇಷನ್‌ಗಳಾಗಿ ವಿಂಗಡಿಸಿ ಗ್ರೇಟರ್ ಬೆಂಗಳೂರು ಮಾಡಲು ಶಾಸಕರ ಸಮಿತಿ ಶಿಫಾರಸ್ಸು ಮಾಡಿದೆ. ಇದರಿಂದ ಉತ್ತಮ ಆಡಳಿತ ಮತ್ತು ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಬೆಂಗಳೂರು (ಫೆ.24): ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೃಹತ್ ಬೆಂಗಳೂರು ಮಹಾನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವ ದಿಸೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯನ್ನು 7 ಕಾರ್ಪೊರೇಷನ್ ವಿಭಾಗಗಳನ್ನಾಗಿ ರಚನೆ ಮಾಡಿ ವರದಿಯನ್ನು ಸಿದ್ದಪಡಿಸಲಾಗಿದೆ. ಈ ವರದಿಯನ್ನು ಸೋಮವಾರ ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿಯು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಸಲ್ಲಿಸಿದರು.

ವಿಧಾನಸೌಧದ ಕರ್ನಾಟಕ ವಿಧಾನ ಮಂಡಲದ ಸಮಿತಿ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ, ಶಾಸಕ ರಿಜ್ಞಾನ್ ಅರ್ಷದ್ ಮಾತನಾಡಿ, ಗ್ರೇಟರ್ ಬೆಂಗಳೂರು ಕುರಿತು  ಸತತ 5 ತಿಂಗಳ ಪ್ರಯತ್ನದಿಂದ  ಸಮಿತಿಯ 20 ಸದಸ್ಯರ ನಡುವೆ ಅಧಿಕೃತ ಸಭೆ, ಸಮಾಲೋಚನೆಗಳನ್ನು ನಡೆಸಿ, ಸಂಘ ಸಂಸ್ಥೆಗಳು, ಸಾರ್ವಜನಿಕರು, ಆನ್ಲೈನ್, ಬ್ರ್ಯಾಂಡ್ ಬೆಂಗಳೂರು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ವರದಿಯನ್ನು ತಯಾರಿಸಲಾಗಿದೆ. ವರದಿಯು ವಿಧಾನಸಭೆಯ ಮುಂಬರುವ  ಅಧಿವೇಶನದಲ್ಲಿ ಚರ್ಚೆಗೆ ಬರಲಿದ್ದು, ಬಿಲ್ ಮಂಡನೆಯಾದ ನಂತರ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮುಂಚೂಣಿಯ 400ಕ್ಕೂ ಹೆಚ್ಚು ಕಂಪನಿಗಳು, ಸ್ಟಾರ್ಟ್ ಅಪ್ಗಳು, ಐಟಿ ಕಂಪನಿಗಳು ಇವೆ. ಭಾರತದ ಆರ್ಥಿಕತೆಗೆ ಬೆಂಗಳೂರು ನಗರ ಕೊಡುಗೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ನಗರದ ಜನತೆಗೆ ಉತ್ತಮ ಮೂಲಸೌಕರ್ಯ ಕಲ್ಪಿಸಲು ಹಾಗೂ ಉತ್ತಮ ಆಡಳಿತ ಒದಗಿಸುವ ಸಲುವಾಗಿ, ಪರ್ಯಾಯ ವ್ಯವಸ್ಥೆ ಆಗಬೇಕು ಎಂಬ ಉದ್ದೇಶವನ್ನು ಹೊಂದಿ ಈ ವರದಿಯನ್ನು ಸಿದ್ದಪಡಿಸಲಾಗಿದೆ. ಸದ್ಯ ಬಿಬಿಎಂಪಿ ಆಡಳಿತ ವೈಖರಿಯು ತೃಪ್ತಿದಾಯಕವಾಗಿಲ್ಲ ಹಾಗೂ  ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮೆಟ್ರೋ, ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ಬಿ ಮೊದಲಾದ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲ. ಹೀಗಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ ಅಸ್ತಿತ್ವಕ್ಕೆ ತರಲು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು, ಬೆಂಗಳೂರು ನಗರ ಉಸ್ತುವಾರಿ ಸಚಿವರು ಉಪಾಧ್ಯಕ್ಷರು ಆಗಿರುತ್ತಾರೆ ಎಂದರು.

ಇದನ್ನೂ ಓದಿ: ಬೆಂಗಳೂರು ಹಳದಿ ಮಾರ್ಗ ಮೆಟ್ರೋ: ಚಾಲಕ ರಹಿತ ರೈಲು ಪರೀಕ್ಷಾರ್ಥ ಸಂಚಾರ ಯಶಸ್ವಿ!

ಬೆಂಗಳೂರು ನಗರವು ಸುಮಾರು 875 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಸುಮಾರು 1.50 ಕೋಟಿ ಜನಸಾಂದ್ರತೆ ಹೊಂದಿದೆ. ಈಗಿರುವ ಮಹಾನಗರ ಪಾಲಿಕೆಯಿಂದ ಎಲ್ಲಾ ಹಂತಗಳಲ್ಲೂ ನಿಯಂತ್ರಣ ಸಾಧ್ಯವಿಲ್ಲ. ಒಂದು ಏಜೆನ್ಸಿಯಿಂದ ಇನ್ನೊಂದು ಏಜೆನ್ಸಿಯ ಸಹಕಾರವಿಲ್ಲ. ಈ ಸಮಸ್ಯೆಗಳನ್ನು ನಿವಾರಿಸಿ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯನ್ನು 100 ರಿಂದ 125 ವಾರ್ಡ್‌ಗಳಿಗೆ ಒಂದರಂತೆ ಕಾರ್ಪೋರೇಷನ್ ರಚಿಸಬೇಕಾಗುವುದು. ಈ ರೀತಿ ಸುಮಾರು 7 ಕಾರ್ಪೋರೇಶನ್‌ಗಳನ್ನು ರಚಿಸಲು ನಿರ್ಧರಿಸಲಾಗಿದೆ. ಎಷ್ಟು ಕಾರ್ಪೊರೇಷನ್‌ಗಳನ್ನು ರಚಿಸಬೇಕೆಂಬ ನಿರ್ಣಯವನ್ನು ಸರ್ಕಾರದ ವಿವೇಚನೆಗೆ ಬಿಡಲಾಗಿದೆ. ಮೇಯರ್ ಅವಧಿ 30 ತಿಂಗಳ ಅವಧಿ ಇರಬೇಕು ಎಂಬ ಶಿಫಾರಸ್ಸು ಸಹ ವರದಿಯಲ್ಲಿ ಮಾಡಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದಲ್ಲಿ ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ಬಿ, ಮೆಟ್ರೋ ರೈಲು ಮೊದಲಾದ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಲಿದೆ. ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ. 3 ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಸಲಹೆ ಮಾಡಲಾಗಿದೆ. ಬಿಬಿಎಂಪಿ ವಿಭಜನೆಯಾದರೂ ಬೆಂಗಳೂರಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಈ ರೀತಿಯೇ ಇರಬೇಕೆಂಬ ಶಿಫಾರಸ್ಸಿದೆ. ಬೇರೆ ಜಿಲ್ಲೆಯನ್ನು ಸೇರಿಸುವುದಿಲ್ಲ. ಕೆಎಂಸಿ ಕಾಯ್ದೆ ಪ್ರಕಾರ ಹೊಸ ಪಾಲಿಕೆ ರಚನೆಯಾಗುತ್ತದೆ. ಪಾಲಿಕೆ ಹತ್ತಿರದಲ್ಲಿರುವ ಅಭಿವೃದ್ಧಿ ಹೊಂದಿರುವ ಗ್ರಾಮಗಳನ್ನು ಸೇರಿಸಲು ಅವಕಾಶವಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಕನಕಪುರ ಬಂಡೆಗೆ ಡಿಚ್ಚಿ ಹೊಡೆದ ಉದ್ಯಮಿ ಮೋಹನ್‌ದಾಸ್ ಪೈ!

ಜೂನ್ 30 ರೊಳಗೆ ವಾರ್ಡ್‌ಗಳ ಗಡಿ ಗುರುತಿಸಬೇಕಿದೆ. ಅಷ್ಟರೊಳಗೆ ಹೊಸ ಪಾಲಿಕೆ, ವಾರ್ಡ್‌ಗಳು ರಚನೆ ಆಗಬೇಕು. ಬಳಿಕ ಮೀಸಲಾತಿ ನಿಗದಿಯಾಗಬೇಕು. ಇಷ್ಟೆಲ್ಲ ಕ್ರಿಯೆಗಳು ಪೂರ್ಣಗೊಂಡರೆ ಜುಲೈನಲ್ಲೇ ಪಾಲಿಕೆ ಚುನಾವಣೆ ನಡೆಸಬಹುದು ಎಂದು ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದರು. ಈ ಸಂದರ್ಭದಲ್ಲಿ  ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿಯ ಸದಸ್ಯರು ಹಾಗೂ ಶಾಸಕರಾದ ಎಸ್.ಟಿ.ಸೋಮಶೇಖರ್, ಪ್ರಿಯಕೃಷ್ಣ, ಎಂ.ಶಿವಣ್ಣ, ಶ್ರೀನಿವಾಸ್, ಜವರಾಯಿಗೌಡ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೂರುವರೆ ದಶಕಗಳಿಂದ ಇದ್ದ ಒಳ ಮೀಸಲಾತಿಗಾಗಿ ಹೋರಾಟಕ್ಕೆ ಜಯ ಸಿಕ್ಕಿದೆ: ಸಚಿವ ಮುನಿಯಪ್ಪ
ಮೈಸೂರು ಸಿಲಿಂಡರ್ ಸ್ಫೋಟದ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ: ಗೃಹ ಸಚಿವ ಪರಮೇಶ್ವರ್