ಲಿಂಗಾಯತ ಸ್ವಾಮೀಜಿಗಳ ಬೇಡಿಕೆಗಳಿಗೆ ತಥಾಸ್ತು ಎಂದ ಸಿಎಂ ಸಿದ್ದರಾಮಯ್ಯ!

Published : Feb 24, 2025, 04:47 PM ISTUpdated : Feb 24, 2025, 06:25 PM IST
ಲಿಂಗಾಯತ ಸ್ವಾಮೀಜಿಗಳ ಬೇಡಿಕೆಗಳಿಗೆ ತಥಾಸ್ತು ಎಂದ ಸಿಎಂ ಸಿದ್ದರಾಮಯ್ಯ!

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟಕ್ಕೆ ಸರ್ಕಾರದ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದ್ದಾರೆ.

ಬೆಂಗಳೂರು (ಫೆ.24): ರಾಜ್ಯದಲ್ಲಿ ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದ್ದು, ಪೂಜ್ಯರ ಬೇಡಿಕೆಗಳಲ್ಲಿ ಸಾಧ್ಯ ಇರುವವಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಲಿಂಗಾಯತ ಸ್ವಾಮೀಜಿಗಳು, ಸಚಿವರು, ಶಾಸಕರು, ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದೆ. ಬಸವಣ್ಣನವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದ್ದು ನಮ್ಮದೇ ಕಾಂಗ್ರೆಸ್ ಸರ್ಕಾರ. ಬಸವಣ್ಣನವರ ವಿಚಾರ ಮತ್ತು ಹೋರಾಟ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಪೂರಕ. ಜಾತಿವಾದಿ ಪಟ್ಟಭದ್ರರಿಗೆ ಬಸವಣ್ಣನವರ ವಿಚಾರಗಳು ಹಿಡಿಸಲ್ಲ. ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನವರನ್ನು ವಿರೋಧಿಸಲು ಸಾಧ್ಯವಿಲ್ಲ. ಅದಕ್ಕೇ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಜಾತಿ ವ್ಯವಸ್ಥೆ ಬಹಳ ಗಟ್ಟಿಯಾಗಿ ಬೇರೂರಿದೆ. ಇದಕ್ಕೆ ಪಟ್ಟಭದ್ರರು ನೀರು ಗೊಬ್ಬರ ಹಾಕುತ್ತಿದ್ದಾರೆ. ಜಾತ್ಯತೀತ, ಸಮ ಸಮಾಜ ನಿರ್ಮಾಣ ಮಾಡಲು ಬಸವಣ್ಣನವರ ಹೋರಾಟ ಪೂರಕ. ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಜಾತಿ ಜಡತ್ವ, ಆರ್ಥಿಕ ಜಡತ್ವ ಇರುವ ಸಮಾಜದಲ್ಲಿ ಚಲನೆ ಸಾಧ್ಯವಿಲ್ಲ.  ಬಸವಣ್ಣನವರ ವಿಚಾರಗಳೇ ಅಂಬೇಡ್ಕರ್ ವಿಚಾರಗಳಾಗಿದ್ದು ಇವೆಲ್ಲವೂ ಸಂವಿಧಾನದಲ್ಲಿ ಅಡಕವಾಗಿವೆ. ಗೋರುಚ ಅಧ್ಯಕ್ಷತೆಯಲ್ಲಿ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿದ್ದು ನಾವು. ಅನುಭವ ಮಂಟಪ ಮೊದಲ ಪ್ರಜಾಪ್ರಭುತ್ವದ ವೇದಿಕೆ. ಯಾರ ಒತ್ತಾಯವೂ ಇಲ್ಲದ ವೇಳೆಯಲ್ಲೇ ನಮ್ಮ ಸರ್ಕಾರ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿತ್ತು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ತಿಳಿಸಿದರು.

ಇದನ್ನೂ ಓದಿ: ಫೆ.27ರಿಂದ ಮಾ.3ರವರೆಗೆ ವಿಧಾನಸೌಧದಲ್ಲಿ ಪುಸ್ತಕ ಮೇಳ: ಸಾರ್ವಜನಿಕರಿಗೆ ಮುಕ್ತ ಅವಕಾಶ!

ಸ್ವಾಮೀಜಿಗಳ ನಿಯೋಗದ ಬೇಡಿಕೆಗಳು..

  • ಸಾಂಸ್ಕೃತಿಕ ನಾಯಕ ಎಂದು ಘೋಷಿತರಾಗಿರುವ ಬಸವೇಶ್ವರರ ವಿಚಾರಧಾರೆ ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ಕೊಡಬೇಕು. ಮುಂದಿನ 4 ವರ್ಷಗಳ ಬಜೆಟ್ ನಲ್ಲಿ ತಲಾ 100 ಕೋಟಿಯಂತೆ ಒಟ್ಟು ರೂ 500 ಕೋಟಿ ಅನುದಾನ ನೀಡಬೇಕು.
  • ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಸವಣ್ಣನ ಬೃಹತ್ ಪ್ರತಿಮೆ ಪ್ರತಿಷ್ಠಾಪಿಸಬೇಕು.
  • ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಅಕ್ಷರಧಾಮದ ಮಾದರಿಯಲ್ಲಿ ಬೃಹತ್ 'ಶರಣ ದರ್ಶನ' ಕೇಂದ್ರ ಸ್ಥಾಪಿಸಿ,  ಅಲ್ಲಿ, ಉದ್ಯಾನ, ಗ್ರಂಥಾಲಯ, ಅತಿಥಿಕೇಂದ್ರ, ದಾಸೋಹ ಭವನ, ಸಭಾಂಗಣ ನಿರ್ಮಿಸಿ ಪ್ರವಾಸಿ ತಾಣವನ್ನಾಗಿಸಬೇಕು.
  • ಎಲ್ಲ ಶರಣರ ಜನ್ಮ ಸ್ಥಳ, ಐಕ್ಯಸ್ಥಳ ಹಾಗೂ ಇತರೆ ಸ್ಮಾರಕಗಳ ರಕ್ಷಣೆಗಾಗಿ 'ಪ್ರತ್ಯೇಕ ಶರಣ ಸ್ಮಾರಕ ರಕ್ಷಣೆ ಪ್ರಾಧಿಕಾರ' ರಚಿಸಬೇಕು.
  • ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಸದ್ಬಳಕೆಯಾಗಲು ಅಲ್ಲಿಯೇ 'ವಚನ ವಿಶ್ವವಿದ್ಯಾಲಯ' ಮತ್ತು ಸಂಶೋಧನ ಕೇಂದ್ರ ಆರಂಭಿಸಬೇಕು.
  • ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 'ಬಸವಭವನ' ನಿರ್ಮಿಸಿ, ಅಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು.
  • ವಚನ ಸಾಹಿತ್ಯ ಸಂಗ್ರಹ, ಪ್ರಕಟಣೆ, ಮರು ಪ್ರಕಟಣೆ, ಹಸ್ತಪ್ರತಿಗಳ ದಾಖಲೀಕರಣ, ಶರಣ ಕ್ಷೇತ್ರಗಳ ಅಧ್ಯಯನ ಮತ್ತು ದಾಖಲೀಕರಣ, ವಿಚಾರಸಂಕಿರಣ, ಸಮ್ಮೇಳನಗಳು, ವಚನಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ ಚಟುವಟಿಕೆಗಳನ್ನು ನಡೆಸಲು ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರಕ್ಕಾಗಿಯೇ ಇರುವ ಸಂಸ್ಥೆಗಳಿಗೆ ಅನುದಾನ ಒದಗಿಸಬೇಕು ಎಂದರು.
  • ಮುಂದಿನ 5 ವರ್ಷಗಳಲ್ಲಿ 500 ಕೋಟಿ ಅನುದಾನ ಒದಗಿಸುವ ಮೂಲಕ ಸಾಂಸ್ಕೃತಿಕ ನಾಯಕ ಬಸವಣ್ಣ ಅವರನ್ನು ಮುಂಬರುವ ಪೀಳಿಗೆಗಳಿಗೆ ಪರಿಚಯಿಸುವುದಕ್ಕೆ ಸಂಬಂಧಿಸಿದ ಈ ಕಾರ್ಯಯೋಜನೆಗಳಿಗೆ ಚಾಲನೆ ನೀಡಿ, ಇತಿಹಾಸ ಸದಾ ನೆನಪಿಸಿಕೊಳ್ಳುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೆ KSRTC ಬಸ್‌ಗೆ ಮಸಿ ಬಳಿದ ಮರಾಠಿ ಪುಂಡರು; ಸಂಧಾನಕ್ಕಿಳಿದ ಸಾರಿಗೆ ಸಚಿವರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!