Kundapra kannada habba: ಕುಂದಾಪುರ ಭಾಷೆ ಅಧ್ಯಯನ ಪೀಠಕ್ಕೆ ಅನುದಾನ ; ಜಯಪ್ರಕಾಶ್‌ ಹೆಗ್ಡೆ

By Kannadaprabha News  |  First Published Jul 24, 2023, 5:39 AM IST

  ಮಂಗಳೂರು ವಿವಿಯಲ್ಲಿರುವ ಕುಂದಾಪುರ ಭಾಷೆಯ ಅಧ್ಯಯನ ಪೀಠಕ್ಕೆ ಅನುದಾನ ಮತ್ತು ಸಮಿತಿ ರಚನೆ ಸಂಬಂಧ ಒಂದು ವಾರದಲ್ಲಿ ನಿರ್ಧಾರವಾಗುವ ನಿರೀಕ್ಷೆಯಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ತಿಳಿಸಿದರು.


ಬೆಂಗಳೂರು (ಜು.25) :  ಮಂಗಳೂರು ವಿವಿಯಲ್ಲಿರುವ ಕುಂದಾಪುರ ಭಾಷೆಯ ಅಧ್ಯಯನ ಪೀಠಕ್ಕೆ ಅನುದಾನ ಮತ್ತು ಸಮಿತಿ ರಚನೆ ಸಂಬಂಧ ಒಂದು ವಾರದಲ್ಲಿ ನಿರ್ಧಾರವಾಗುವ ನಿರೀಕ್ಷೆಯಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ತಿಳಿಸಿದರು.

ಭಾನುವಾರ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ‘ವಿಶ್ವ ಕುಂದಾಪ್ರ ಕನ್ನಡ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Tap to resize

Latest Videos

ಕುಂದಾಪುರ ಭಾಷೆ ಅಧ್ಯಯನ ಪೀಠಕ್ಕೆ ಅನುದಾನ ನೀಡುವಂತೆ ಮಂಗಳೂರು ವಿಶ್ವವಿದ್ಯಾಲಯ ಸರ್ಕಾರಕ್ಕೆ ಪತ್ರ ಬರೆದಿದೆ. ಈ ವಿಚಾರ ಸರ್ಕಾರ ಮಟ್ಟದಲ್ಲಿ ಬಾಕಿ ಉಳಿದಿದೆ. ಪ್ರಸ್ತುತ ಅರೆಭಾಷೆ ಹಾಗೂ ಕುಂದಾಪುರ ಭಾಷೆಯ ಅಧ್ಯಯನ ಪೀಠಕ್ಕೆ ಸಂಬಂಧಿಸಿ ಕಮಿಟಿ ರಚನೆಯಾದ ಬಳಿಕ ಅಗತ್ಯವಿರುವ ಅನುದಾನ ಸಿಗುವ ಸಾಧ್ಯತೆಗಳಿವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಇಂದು ಕುಂದಾಪ್ರ ಕನ್ನಡ ಹಬ್ಬ; ಎಲ್ಲಿ ? ಎಷ್ಟೊತ್ತಿಗೆ? ಇಲ್ಲಿದೆ ಮಾಹಿತಿ

ಕಾರ್ಯಕ್ರಮ ಉದ್ಘಾಟಿಸಿದ ಕಂಬಳ ಧುರೀಣ ಬಾರ್ಕೂರು ಶಾಂತರಾಮ ಶೆಟ್ಟಿಮಾತನಾಡಿ, ಯಾವುದೇ ಸ್ಥಳದಲ್ಲಿ ಜೀವನ ಕಟ್ಟಿಕೊಂಡಿದ್ದರೂ ನಮ್ಮ ಮನೆ ಮಕ್ಕಳಿಗೆ ಕುಂದಾಪುರ ಕನ್ನಡವನ್ನು ಕಲಿಸಿಕೊಡಿ. ಇಲ್ಲದಿದ್ದರೆ ಹತ್ತು ವರ್ಷದ ಬಳಿಕ ಭಾಷೆ ಉಳಿಯುವುದು ಕಷ್ಟವಾಗಲಿದೆ ಎಂದು ಎಚ್ಚರಿಸಿದರು.ಬೆಂಗಳೂರು, ಬೆಳಗಾವಿ ಭಾಗಕ್ಕೆ ಹೋಗಿ ಬಂದ ನಮ್ಮವರೇ ನಮ್ಮ ಭಾಷೆ ಆಡದಿರುವುದು ಬೇಸರ ಮೂಡಿಸುತ್ತದೆ. ಮಕ್ಕಳಿಗೆ ನಮ್ಮ ಭಾಷೆ ಕಲಿಸೋಣ, ಅವರಲ್ಲಿ ಅಭಿಮಾನ ಮೂಡಿಸೋಣ. ಹಾಗಾದಲ್ಲಿ ಮಾತ್ರ ಕುಂದಾಪ್ರ ಕನ್ನಡ ಹಬ್ಬಕ್ಕೆ ಮಹತ್ವ ಬರಲಿದೆ ಎಂದರು.

ಕುಂದಾಪುರ ಶಾಸಕರಾದ ಕಿರಣ್‌ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ದೀಪಕ್‌ ಶೆಟ್ಟಿಬಾರ್ಕೂರು, ಗೌರವಾಧ್ಯಕ್ಷ ಪ್ರಮೋದ್‌ಚಂದ್ರ ಭಂಡಾರಿ ಇದ್ದರು.

ಹಿರಿಯರಾದ ರೇಖಾ ಬಿ.ಬನ್ನಾಡಿ, ಉಪೇಂದ್ರ ಶೆಟ್ಟಿ, ಕವಿ ಎಚ್‌.ಡುಂಡಿರಾಜ್‌ ಅವರ ಭಾಷೆಯ ಬಹು ಆಯಾಮದ ಬಗ್ಗೆ ಮಾತನಾಡಿದರು.

ಹಿರಿಯ ಸಂಸ್ಕೃತಿ ಸಂಶೋಧಕರಾದ ಪ್ರೊ. ಎ.ವಿ. ನಾವಡ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ದಂಪತಿಗೆ ‘ಊರಗೌರವ’ ಪುರಸ್ಕಾರ ನೀಡಿ ಗೌರವಿಸಲಾಯಿತು. ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಪ್ರಮೋದ್‌ ಬಿ.ಶೆಟ್ಟಿ, ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬಂಟರ ಸಂಘದ ಅಧ್ಯಕ್ಷ ಎಂ.ಮುರಳೀಧರ ಹೆಗ್ಡೆ ಇದ್ದರು.

ಭಾಷಾ ಪ್ರೀತಿ ನಿರಂತರ; ರಿಷಬ್‌

ಚಿತ್ರನಟ, ನಿದೇರ್ಶಕ ರಿಷಬ್‌ ಶೆಟ್ಟಿಮಾತನಾಡಿ, ಕುಂದಾಪುರದಿಂದ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದಿದ್ದೇವೆ. ಆದರೆ, ನಮ್ಮ ಭಾಷೆ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ, ಅದು ನಿರಂತರ ಎಂದರು.ವೈಯಕ್ತಿಕವಾಗಿ ಕುಂದಾಪುರ ಹಾಗೂ ಬೆಂಗಳೂರಿನ ನಡುವೆ ಉತ್ತಮ ನಂಟಿದೆ. ನಮಗೆ ಜೀವ ನೀಡಿದ್ದು ಕುಂದಾಪುರ, ಜೀವನ ಕೊಟ್ಟಿದ್ದು ಬೆಂಗಳೂರು. ಕುಂದಾಪುರ ಭಾಷೆಯಲ್ಲಿ ಮಾತನಾಡಿದರೆ ಕೊಚ್ಚಕ್ಕಿ ಅನ್ನಕ್ಕೆ ಮೀನು ಸಾರು ಹಾಕಿ ಊಟ ಮಾಡಿದಷ್ಟುಸಂತೋಷ ಆಗುತ್ತದೆ ಎಂದರು. ಇದೇ ವೇಳೆ ಸರ್ಕಾರಿ ಶಾಲೆಗಳಿಗೆ ಮೊದಲ ಪ್ರಾಮುಖ್ಯತೆ ನೀಡಿ, ಅಗತ್ಯವಿರುವ ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ಮಾಧ್ಯಮದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಮಿನಿ ಕುಂದಾಪ್ರ ಸೃಷ್ಟಿ!

ಉದ್ಯಾನ ನಗರಿ ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ ಭಾನುವಾರ ಮಿನಿ ಕುಂದಾಪುರ ಸೃಷ್ಟಿಯಾಗಿತ್ತು. ‘ಹೋಯ್‌ ಕುಂದಾಪ್ರ ಹಬ್ಬ ಭಾರೀ ಗಡ್ಜ್‌ ಅಂಬ್ರಲೇ’.. ಒಳ್ಳೇ ಗಮ್ಮತ್‌ ಆಯ್‌್ಕ.. ಎಂಬ ಮಾತುಗಳೇ ಕೇಳಿಬರುತ್ತಿತ್ತು. ಹಬ್ಬದಲ್ಲಿ ಕುಂದಾಪುರದ ಸಮಗ್ರ ಸಂಸ್ಕೃತಿ ಕಂಡು ಬಂದಿತು. ಯಕ್ಷಗಾನ, ಮೀನು ಮಾರಾಟ, ಹೋಳಿ ಕುಣಿತದ ಕಾರ್ಯಕ್ರಮ, ಕಂಬಳದ ಪ್ರತಿಕೃತಿ ಗ್ರಾಮೀಣ ಬದುಕು ಅನಾವರಣಗೊಂಡಿತ್ತು.

 

ಜುಲೈ 23ರಿಂದ ಕುಂದಾಪ್ರ ಕನ್ನಡ ಹಬ್ಬ, ಬೆಂಗಳೂರಿನಲ್ಲಿ ಕುಂದಾಪುರ ಕನ್ನಡಿಗರ ಸಮಾಗಮ

ಮಕ್ಕಳಿಗಾಗಿ ಸೈಕಲ್‌ ಟೈರ್‌ ಸ್ಪರ್ಧೆ, ಹೂವು ನೆಯ್ಯುವುದು, ಮಹಿಳೆಯರಿಗಾಗಿ ಹಲಸಿನ ಕೊಟ್ಟೆಕೊಟ್ಟುವುದು, ಮಡ್ಲು ನೆಯ್ಯುವ ಸ್ಪರ್ಧೆ, ದಂಪತಿಗಳಿಗೆ ಅಡಕೆ ಹಾಳೆ ಓಟ, ಹಣೆಬೊಂಡ ಓಟ, ಗಿರ್ಗಿಟ್ಲೆ, ಚಿತ್ರಕಲೆ ಸ್ಪರ್ಧೆ ನಡೆಯಿತು. ಬಾಣಸಿಗರು ಹಾಲುಬಾಯಿ, ಕೊಟ್ಟೆಕಡಬು, ಗೋಲಿಬಜೆ, ಬನ್ಸ್‌, ಎಳ್‌ ಬಾಯ್‌್ರ, ಹೆಸ್ರು ಬಾಯ್‌್ರ ವಿವಿಧ ಪಾನಕ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ಲಿ ಸಾರು, ಜಿಲೇಬಿ, ಮಿಠಾಯಿ ತಯಾರಿಸಿದ್ದರು.

click me!