ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಪುಟ್ಟಣ್ಣರವರ ರಾಜೀನಾಮೆಯಿಂದ ತೆರವಾಗಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಶೀಘ್ರದಲ್ಲಿ ಉಪ ಚುನಾವಣೆ ಘೋಷಣೆಯಾಗಲಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಎಂ.ಅಫೆä್ರೕಜ್ ಖಾನ್
ರಾಮನಗರ (ಜು.24) : ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಪುಟ್ಟಣ್ಣರವರ ರಾಜೀನಾಮೆಯಿಂದ ತೆರವಾಗಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಶೀಘ್ರದಲ್ಲಿ ಉಪ ಚುನಾವಣೆ ಘೋಷಣೆಯಾಗಲಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಕಳೆದ (2020ರ) ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಪುಟ್ಟಣ್ಣರವರು ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದರು. ಅದರಂತೆ 2023ರ ಮಾಚ್‌ರ್‍ನಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನ ಹಾಗೂ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರ ಕ್ಷೇತ್ರದ ಮತದಾರರು ಪುಟ್ಟಣ್ಣ ಅವರನ್ನು ತಿರಸ್ಕರಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಸುರೇಶ್‌ಕುಮಾರ್ ಅವರಿಗೆ ಮಣೆ ಹಾಕಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ದೇವೇಗೌಡರು ಸ್ಪಷ್ಟಪಡಿಸಲಿ: ಸಚಿವ ಚಲುವರಾಯಸ್ವಾಮಿ
ನಿಯಮಗಳ ಪ್ರಕಾರ ತೆರವಾಗಿರುವ ಎಂಎಲ್ಸಿ ಸ್ಥಾನಕ್ಕೆ 6 ತಿಂಗಳೊಳಗೆ ಉಪ ಚುನಾವಣೆ ನಡೆಸಬೇಕು. ಆದರೀಗ ಪುಟ್ಟಣ್ಣರವರು ರಾಜೀನಾಮೆ ಸಲ್ಲಿಸಿ 4 ತಿಂಗಳು ಕಳೆದಿದ್ದು, ಕೇವಲ 2 ತಿಂಗಳಷ್ಟೇ ಬಾಕಿ ಉಳಿದಿದೆ. ಸೆಪ್ಟೆಂಬರ್‌ನೊಳಗೆ ಉಪಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ(BJP-JDS alliance)ಗೆ ಅಡಿಪಾಯ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಲೇ ನಾಲ್ಕು ಬಾರಿ ಗೆಲುವು ಸಾಧಿಸಿರುವ ಪುಟ್ಟಣ್ಣ ಅವರೇ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ನಿಶ್ಚಿತವಾಗಿದ್ದು, ಈಗಾಗಲೇ ಕ್ಷೇತ್ರಾದ್ಯಂತ ಸಂಚರಿಸಿ ಮತದಾರ ಶಿಕ್ಷಕರನ್ನು ಭೇಟಿಯಾಗಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ ಜೆಡಿಎಸ್ನಿಂದ ಪ್ರಬಲ ಆಕಾಂಕ್ಷಿಯಾಗಿದ್ದರೆ, ಬಿಜೆಪಿ ಅಭ್ಯರ್ಥಿ ಯಾರೆಂಬುದರ ಸುಳಿವೇ ಇಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯೇ ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿಗೆ ಅಡಿಪಾಯ ಹಾಕುವ ಸಾಧ್ಯತೆಗಳಿವೆ.
2002ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಪುಟ್ಟಣ್ಣ ಅವರು, ನಾಲ್ಕು ಬಾರಿ ನಿರಂತರವಾಗಿ ಗೆಲ್ಲುವ ಮೂಲಕ ಈ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಿದರೆ ಪುಟ್ಟಣ್ಣರವರು ಗೆಲುವಿಗಾಗಿ ಹೆಚ್ಚಿನ ಬೆವರು ಸುರಿಸಬೇಕಾಗುತ್ತದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರವು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಮೂರು ಜಿಲ್ಲೆಗಳಿಂದ 5 ಲೋಕಸಭಾ ಹಾಗೂ 36 ವಿಧಾನಸಭಾ ಕ್ಷೇತ್ರಗಳಿವೆ. 2020ರ ಚುನಾವಣೆ ಸಮಯದಲ್ಲಿ 4 ಬಿಜೆಪಿ, 1 ಕಾಂಗ್ರೆಸ್ ಲೋಕಸಭಾ ಸದಸ್ಯರಿದ್ದರು. ರಾಜರಾಜೇಶ್ವರಿ ಕ್ಷೇತ್ರ ಹೊರತು ಪಡಿಸಿ 14 ಬಿಜೆಪಿ, 14 ಕಾಂಗ್ರೆಸ್ , 6 ಜೆಡಿಎಸ್ ಹಾಗೂ 1 ಪಕ್ಷೇತರ ಶಾಸಕರು ಇದ್ದರು.
ಆದರೀಗ ಬಿಜೆಪಿ-4, ಕಾಂಗ್ರೆಸ್-1 ಲೋಕಸಭಾ ಸದಸ್ಯರಿದ್ದರೆ, ಕಾಂಗ್ರೆಸ್-18, ಬಿಜೆಪಿ-17, ಜೆಡಿಎಸ್-1 ಶಾಸಕರನ್ನು ಹೊಂದಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಶಕ್ತಿ ವೃದ್ಧಿಸಿಕೊಂಡಿದ್ದರೆ, ಜೆಡಿಎಸ್ ಬಲ ಪೂರ್ಣ ಪ್ರಮಾಣದಲ್ಲಿ ಕುಸಿದಿದೆ.
ಪಕ್ಷಾಂತರದ ಕಳಂಕ ಹೊತ್ತಿರುವ ಪುಟ್ಟಣ್ಣ ಮೊದಲು ಕಾಂಗ್ರೆಸ್‌ನಲ್ಲೇ ಇದ್ದವರು. ಡಿ.ಕೆ.ಶಿವಕುಮಾರ್ ಜತೆಗಿನ ವಿರಸದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರ್ಪಡೆಗೊಂಡು ಮೂರು ಬಾರಿ ಎಂಎಲ್ಸಿಯಾದವರು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿರವರ ಆಪ್ತ ವಲಯದಿಂದಲೂ ದೂರ ಸರಿದು ಬಿಜೆಪಿ ಸೇರಿದ ಅವರು 2020ರ ಚುನಾವಣೆಯಲ್ಲಿ ನಾಲ್ಕನೇ ಬಾರಿ ಆಯ್ಕೆಯಾದರು. ಈಗ ಪುಟ್ಟಣ್ಣ ಅವರಿಗೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದು ಹೆಚ್ಚಿನ ಬಲ ತಂದುಕೊಟ್ಟಿದೆ. ಆದರೂ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹವಣಿಸುತ್ತಿವೆ. ಜೆಡಿಎಸ್ನಿಂದ ಎ.ಪಿ.ರಂಗನಾಥ್ ಪ್ರಚಾರ ಆರಂಭಿಸಿದ್ದರೆ, ಬಿಜೆಪಿಯಿಂದ ಆಕಾಂಕ್ಷಿಗಳು ಯಾರೂ ಮುಂದೆ ಬಂದಿಲ್ಲ. ಉಭಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸುತ್ತವೆಯೋ ಅಥವಾ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆಯೋ ಎಂಬುದು ಕುತೂಹಲ ಮೂಡಿಸಿದೆ.
ಜೆಡಿಎಸ್- ಬಿಜೆಪಿ ಮೈತ್ರಿ: ಎಚ್‌ಡಿ ದೇವೇಗೌಡರ ನಿಲುವು ಏನು?
ಬಿಜೆಪಿ ಮತ್ತು ಜೆಡಿಎಸ್ನಿಂದ ಯಾರಾದರೂ ಸ್ಪರ್ಧಿಸಲಿ ಅಥವಾ ಮೈತ್ರಿ ಅಭ್ಯರ್ಥಿಯಾದರು ಕಣಕ್ಕಿಳಿಯಲಿ. ಶಿಕ್ಷಣ ಕ್ಷೇತ್ರ ಹಾಗೂ ಸಂಸ್ಥೆಗಳ ಸಮಸ್ಯೆಗೆ ಪರಿಹಾರ, ಶಿಕ್ಷಕರ ವೈಯಕ್ತಿಕ ಕುಂದು-ಕೊರತೆಗಳಿಗೆ ಸ್ಪಂದನೆ, ಕಳೆದ 3 ಅವಧಿಯಲ್ಲಿ ಮಾಡಿದ ಸಾಧನೆಯೇ ನನಗೆ ಶ್ರೀರಕ್ಷೆ.
- ಪುಟ್ಟಣ್ಣ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಬೇಕೋ ಅಥವಾ ಪಕ್ಷದಿಂದ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕೋ ಎಂಬ ವಿಚಾರ ಇನ್ನೂ ಚರ್ಚೆ ಹಂತದಲ್ಲಿದೆ. ಪಕ್ಷದ ಮಾಧ್ಯಮಿಕ ಶಿಕ್ಷಕರ ಸಂಘ ಬಿಜೆಪಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಿದೆ. ಡಾ.ಅಪ್ಪಾಜಿಗೌಡರು ಆಕಾಂಕ್ಷಿಯಾಗಿದ್ದು, ಇನ್ನೂ ಅಧಿಕೃತಗೊಂಡಿಲ್ಲ.
- ಅಶ್ವತ್ಥ ನಾರಾಯಣಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ
ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು 3 ಬಾರಿ ಪ್ರತಿನಿಧಿಸಿದ ವ್ಯಕ್ತಿ ನಾಲ್ಕನೇ ಬಾರಿಯೂ ಗೆದ್ದ ಮೇಲೆ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡುತ್ತಾ ಪಕ್ಷ ಹಾಗೂ ಶಿಕ್ಷಕರಿಗೆ ದ್ರೋಹ ಮಾಡುತ್ತಲೇ ಇದ್ದಾರೆ. ಈ ಕ್ಷೇತ್ರ ಬೇಡವೆಂದು ತಿರಸ್ಕರಿಸಿ ಹೋದ ಆ ವ್ಯಕ್ತಿ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದಾರೋ ಗೊತ್ತಿಲ್ಲ. ಎರಡು ಮೂರು ತಿಂಗಳಿಂದ ಶಿಕ್ಷಕರನ್ನು ಭೇಟಿ ಮಾಡುತ್ತಿದ್ದೇನೆ. ನನ್ನ ಶಕ್ತಿ, ಸಾಮರ್ಥ್ಯದ ಬಗ್ಗೆ ಶಿಕ್ಷಣ ರಂಗ ಮತ್ತು ಶಿಕ್ಷಕರಿಗೆ ವಿಶ್ವಾಸವಿದೆ. ಜೆಡಿಎಸ್-ಬಿಜೆಪಿ ಹೊಂದಾಣಿಕೆ ಬಗ್ಗೆ ಗೊತ್ತಿಲ್ಲ. ನಾನು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ.
- ಎ.ಪಿ.ರಂಗನಾಥ, ಜೆಡಿಎಸ್ ಟಿಕೆಟ್ ಆಕಾಂಕ್ಷಿ