ಕೋಲಾರ ಜಿಲ್ಲೆ ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಶೌಚಗುಂಡಿಗೆ ಇಳಿಸಿದ ಪ್ರಕರಣ ನೆನಪಿ ನಿಂದ ಮಾಸುವ ಮುನ್ನವೇ ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೇ ಮಕ್ಕಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿರುವ ಘಟನೆ ನಡೆದಿದೆ.
ಬೆಂಗಳೂರು (ಡಿ.23): ಕೋಲಾರ ಜಿಲ್ಲೆ ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಶೌಚಗುಂಡಿಗೆ ಇಳಿಸಿದ ಪ್ರಕರಣ ನೆನಪಿ ನಿಂದ ಮಾಸುವ ಮುನ್ನವೇ ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೇ ಮಕ್ಕಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿರುವ ಘಟನೆ ನಡೆದಿದೆ. ಘಟನೆ ಬೆನ್ನಲ್ಲೇ ಶಾಲೆಯ ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಕಿಯು ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ವಿಡಿಯೋ ವೈರಲ್ ಆಗಿದ್ದು, ಆಕ್ರೋಶಗೊಂಡ ಮಕ್ಕಳ ಪೋಷಕರು ಶುಕ್ರವಾರ ಶಾಲೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಇದರ ಬೆನ್ನಲ್ಲೇ ಪ್ರಕರಣ ರಾಜಕೀಯ ತಿರುವು ಕೂಡ ಪಡೆದುಕೊಂಡಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್, ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್ ಸೇರಿದಂತೆ ವಿವಿಧ ರಾಜಕೀಯ ನಾಯಕರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ದೂರು ಸ್ವೀಕರಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಾಗಿ ಹೇಳಿದರು.ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಶಾಲೆಯ ಮುಕ್ಯ ಶಿಕ್ಷಕಿ ಲಕ್ಷಿದೇವಮ್ಮ ಅವರನ್ನುಅಮಾನತುಗೊಳಿಸಿದ್ದು, ಮತ್ತೆ ಇಂತಹ ಘಟನೆಗಳು ನಡೆಯದಂತೆ ಕ್ರಮವಹಿಸುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
undefined
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯ
ಶಾಲೆಯಲ್ಲಿ ನಡೆದಿದ್ದೇನು?: ಅಂದ್ರಹಳ್ಳಿಯ ಸರ್ಕಾರಿ ಶಾಲೆಯ ಶೌಚಾಲಯವನ್ನು ಇಬ್ಬರು ವಿದ್ಯಾರ್ಥಿಗಳು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಶುಕ್ರವಾರ ಬೆಳಗ್ಗೆಯಿಂದಲೇ ವೈರಲ್ ಆಗಿತ್ತು. ಓರ್ವ ವಿದ್ಯಾರ್ಥಿ ಶೌಚಾಲಯಕ್ಕೆ ಸ್ವಚ್ಛತಾ ದ್ರಾವಣ ಹಾಕುತ್ತಿರುವುದು, ಮತ್ತೊಬ್ಬ ವಿದ್ಯಾರ್ಥಿ ಪೊರಕೆಯಲ್ಲಿ ಉಜ್ಜುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು. ಇದು ಬೆಳಕಿಗೆ ಬಂದ ಬೆನ್ನಲ್ಲೇ ಶಾಲೆ ಮುಂದೆ ಜಮಾಯಿಸಿದ ಆ ಶಾಲೆಯ ಮಕ್ಕಳ ನೂರಾರು ಪೋಷಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಕರು ಸ್ಪಂದಿಸದಿದ್ದಾಗ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸಿದ್ದರಾಮಯ್ಯ ಯುನಿಫಾರಂಗೆ ಹಿಜಾಬ್ ಜೋಡಿಸುತ್ತಾರೋ ಅಥವಾ ಕಡ್ಡಾಯ ಅನ್ನೋದು ತಗೀತಾರೋ?: ಸಿ.ಟಿ.ರವಿ
ಮುಖ್ಯ ಶಿಕ್ಷಕಿ ಅಮಾನತು: ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದ್ರಹಳ್ಳಿ ಶಾಲೆ ಮುಖ್ಯ ಶಿಕ್ಷಕಿ ಲಕ್ಷಿ ದೇವಮ್ಮ ಅವರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಉತ್ತರ ವಲಯ ಉಪನಿರ್ದೇಶಕ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸ್ಥಳೀಯ ಬಿಇಒ ಆಂಜಿನಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವಂತಿಲ್ಲ ಎಂದು ಇಲಾಖೆ ಸ್ಪಷ್ಟ ಸೂಚನೆ ನೀಡಿದ್ದರೂ ಇಲ್ಲಿನ ಶಿಕ್ಷಕರು ನಿಯಮ ಉಲ್ಲಂಘಿಸಿದ್ದಾರೆ. ಇದನ್ನು ಇಲಾಖೆಯ ಡಿಡಿಪಿಐ ಮತ್ತು ಆಯುಕ್ತರ ಗಮನಕ್ಕೆ ತರಲಾಗಿದ್ದು, ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ವಹಿಸಲಾಗುವುದು ಎಂದರು.