ಕುರುಬರ ಹೋರಾಟಕ್ಕೆ ಕುರಿಗಳು ಸಾಥ್: ತಹಸೀಲ್ದಾರ್ ಕಚೇರಿ ಆವರಣದೊಳಗೆ ಪ್ರತಿಭಟನೆ!

By Govindaraj S  |  First Published Dec 23, 2023, 9:59 AM IST

ಕುರುಬ ಸಮುದಾಯವನ್ನ ಎಸ್ಟಿಗೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಕುರುಬ ಸಮುದಾಯದವರು ಅಫಜಲಪುರ ತಹಸೀಲ್ದಾರ್ ಕಚೇರಿ ಆವರಣದೊಳಗೆ ಕುರಿಗಳನ್ನು ನುಗ್ಗಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. 


ಕಲಬುರಗಿ (ಡಿ.23): ಕುರುಬ ಸಮುದಾಯವನ್ನ ಎಸ್ಟಿಗೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಕುರುಬ ಸಮುದಾಯದವರು ಅಫಜಲಪುರ ತಹಸೀಲ್ ಕಚೇರಿ ಆವರಣದೊಳಗೆ ಕುರಿಗಳನ್ನು ನುಗ್ಗಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಅಲ್ಲದೇ ಕುರುಬ ಸಮಾಜದ ಮುಖಂಡ ಜೆಎಂ ಕೊರಬು ಸೇರಿದಂತೆ ಹಲವರು ಉರುಳು ಸೇವೆ ಪ್ರತಿಭಟನೆ ಮಾಡಿ ಗಮನ ಸೆಳೆದರು. ತಹಸೀಲ್ ಕಛೇರಿ ಆವರಣದೊಳಗೆ ನೂರಾರು ಕುರಿಗಳು ನುಗ್ಗಿಸಿದ್ದರಿಂದ ಅಧಿಕಾರಿಗಳೂ ಬೆಚ್ಚಿ ಬೀಳುವಂತಾಯಿತು.  ಪ್ರತಿಭಟನೆಗೂ ಮುನ್ನ ಅಫಜಲಪುರ ಪಟ್ಟಣದ ಅಮೋಘ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಬೃಹತ್ ಬಹಿರಂಗ ಸಭೆ ಆಯೋಜಿಸಲಾಗಿತ್ತು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಗಿನೆಲೆ ಕನಕ ಗುರುಪೀಠ ತಿಂಥಣಿಯ ಶ್ರೀ ಸಿದ್ಧರಾಮಾನಂದ ಸ್ವಾಮೀಜಿಗಳು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಕುರುಬ ಸಮಾಜ ಎಸ್.ಟಿಯಲ್ಲಿ ಇತ್ತು. ಆದರೆ ಕೆಲ ಕುತಂತ್ರಿಗಳಿಂದ ಈಗ 2ಎ ದಲ್ಲಿ ಇದ್ದೇವೆ. ಕಳೆದ 40-50 ವರ್ಷಗಳಿಂದ ನಮ್ಮ ಹಕ್ಕು ನಮಗೆ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಹಕ್ಕಿಗಾಗಿ ನಾವು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು. ನಮಗೆ ಸರ್ಕಾರದಿಂದ ಸಿಗಬೇಕಾದ ಹಕ್ಕುಗಳು ಸಿಗದಿದ್ದಾಗ ಹೋರಾಟದ ಮೂಲಕ ಪಡೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಿ. ನಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಸರ್ಕಾರಿ ನೌಕರಿಯಲ್ಲಿ ಇತರೆ ಸಮಾಜದವರಿಂದ ಆಗುತ್ತಿರುವ ಅನ್ಯಾಯ ತಪ್ಪಿಸಬೇಕಾದರೆ ಎಸ್.ಟಿ ಬೇಕೇ ಬೇಕು. 

Latest Videos

undefined

ಸಿಎಂ ಸಿದ್ದರಾಮಯ್ಯ 7 ಸ್ಟಾರ್ ಹೋಟೆಲ್‌ನಲ್ಲಿ ಮಲಗಿಲ್ಲ: ಸಚಿವ ಚಲುವರಾಯಸ್ವಾಮಿ

ಕೇಂದ್ರ ಸರ್ಕಾರದಿಂದ ನಮ್ಮ ಸರ್ಕಾರಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಗೊಂಡ ಅಂದ್ರೂ ಒಂದೇ ಕುರುಬ ಅಂದ್ರೂ ಒಂದೇ. ಹೀಗಾಗಿ ಕೇಂದ್ರ ಈಗಾಗಲೇ ಗೊಂಡ ಎಸ್ ಟಿ ಯಲ್ಲಿದ್ದು. ಅದರ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಎಸ್ ಟಿ ಗೆ ಸೇರ್ಪಡೆ ಮಾಡಬೇಕು. 4 ಬಾರಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕುಲಶಾಸ್ತ್ರ ಅಧ್ಯಯನದ ವರದಿ ಕಳುಹಿಸಿದ್ದರೂ ಸಹ ರಾಜ್ಯದ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಸಂಸದರು, ಮಾಜಿ ಶಾಸಕರು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತಹ ಗೋಜಿಗೆ ಹೋಗಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಸಮಾಜಕ್ಕೆ ಎಸ್.ಟಿ ನೀಡದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕುರುಬ ಸಮಾಜದ ಮುಖಂಡರ ಜೆ.ಎಂ.ಕೊರಬು ಮಾತನಾಡಿ, ನಮ್ಮ ಮುಂದಿನ ಪೀಳಿಗೆಗೆ ಸುಸೂತ್ರವಾದ ದಾರಿ ಮಾಡಿಕೊಡಬೇಕಾಗಿದೆ. ಆದ್ದರಿಂದ ನಮ್ಮ ಸಮಾಜಕ್ಕೆ ಈ ಹಿಂದಿನಂತೆ ಎಸ್ ಟಿ ಗೆ ಸೇರ್ಪಡೆ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಉಪಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆ ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರ್ಪಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ಸಮೇತ ಕಳುಹಿಸಿದ್ರೂ ಸಹ ಇಲ್ಲಿವರೆಗೂ ಸೇರ್ಪಡೆ ಮಾಡಿಲ್ಲ. ಹೀಗಾಗಿ ನಮ್ಮ ಹಕ್ಕು ನಾವು ಪಡೆಯಲು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೇಕಾದರೆ ಹೋರಾಟ ನಡೆಸಿ ಕೇಂದ್ರ ಸರ್ಕಾರದ ಒತ್ತಡ ಹಾಕೋಣ. ಆದರೆ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಲ್ಲ. ಬಿಜೆಪಿ ನಾಯಕರು ನಿರಂತರವಾಗಿ ಕುರುಬ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೃಹತ್ ಪ್ರತಿಭಟನೆ: ಬಹಿರಂಗ ಸಭೆಯ ನಂತರ ಅಮೋಘಸಿದ್ದೇಶ್ವರ ದೇವಸ್ಥಾನದಿಂದ ತಹಸೀಲ್ ಕಛೇರಿವರೆಗೆ ಬೃಹತ್ ಪ್ರತಿಭಟನೆ ನಡೆಯಿತು. ನೂರಾರು ಕುರಿಗಳನ್ನು ತಹಸೀಲ್ ಕಛೇರಿ ಆವರಣದೊಳಗೆ ನುಗ್ಗಿಸಿ ವಿನೂತನ ಪ್ರತಿಭಟನೆ ನಡೆಸಿದರು. ಕುರುಬರ ಹೋರಾಟಕ್ಕೆ ಕುರಿಗಳೂ ಕೈ ಜೋಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಗಮನ ಸೆಳೆಯಿತು. 

ಜನಸಂದಣಿ ಇರುವೆಡೆ ಎಲ್ಲರೂ ಮಾಸ್ಕ್‌ ಧರಿಸಿ: ಸಚಿವ ದಿನೇಶ್‌ ಗುಂಡೂರಾವ್‌

ಉರುಳು ಸೇವೆ: ಇದಲ್ಲದೇ ಕುರುಬ ಸಮಾಜದ ಮುಖಂಡರಾದ ಜೆಎಂ ಕೊರಬು ಸೇರಿದಂತೆ ಹಲವರು ಉರುಳು ಸೇವೆಯ ಮೂಲಕ ಪ್ರತಿಭಟನೆ ನಡೆಸಿದರು. ಕುರುಬರನ್ನು ಎಸ್ಟಿಗೆ ಸೇರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ್ತೆವೆ ಎನ್ನುವ ಎಚ್ಚರಿಕೆ ಸಂದೇಶವನ್ನು ಪ್ರತಿಭಟನಾಕಾರರು ಕೇಂದ್ರ ಸರಕಾರಕ್ಕೆ ನೀಡಿದರು.  ಹೋರಾಟದಲ್ಲಿ ಜಿಲ್ಲಾ ಕುರುಬ ಸಮಾಜ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಅಫಜಲಪುರ ತಾಲೂಕ ಕುರಬ ಸಮಾಜ ಅಧ್ಯಕ್ಷ ಬೀರಣ್ಣ ಪೂಜಾರಿ, ವಕೀಲರಾದ ಕೆ.ಜಿ.ಪೂಜಾರಿ, ರಮೇಶ ಪೂಜಾರಿ, ಸಾಯಬಣ್ಣ ಪೂಜಾರಿ, ಅರ್ಜುನ ಪೂಜಾರಿ, ಕರೆಪ್ಪ ಮಲ್ಲಬಾದ, ಎನ್.ಆರ್.ಸಾಸನೂರ, ನಿಂಗಗುಂಡ ಪೂಜಾರಿ, ಮಲ್ಲಪ್ಪ ಹೂವಿನಳ್ಳಿ, ರೇವಣಸಿದ್ದ ಚಿಂಚೋಳಿ ಸೇರಿದಂತೆ ಅನೇಕರಿದ್ದರು.

click me!