
ಬೆಂಗಳೂರು [ಮಾ.18]: ರಾಜ್ಯದಲ್ಲಿ ಜನದಟ್ಟಣೆ ಉಂಟುಮಾಡುವ ಹಲವು ಕಡೆ ಮಾ.14ರಿಂದ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರವು ತನ್ನ ನಿರ್ಬಂಧವನ್ನು ದಂತ ವೈದ್ಯ ಕ್ಲಿನಿಕ್‌ಗಳಿಗೂ ವಿಸ್ತರಣೆ ಮಾಡಿದೆ. ಅಲ್ಲದೆ, ರೆಸ್ಟೋರೆಂಟ್‌ಗಳಲ್ಲಿ ಎ.ಸಿ. ಆಫ್ ಮಾಡಲು ಸೂಚಿಸಿದ್ದು, ಜಯದೇವ, ಕಿದ್ವಾಯಿಯಂತಹ ದೊಡ್ಡ ಆಸ್ಪತ್ರೆಗಳಿಗೆ ತೀರಾ ತುರ್ತು ಅಗತ್ಯವಿದ್ದರೆ ಮಾತ್ರ ಹೊರರೋಗಿಗಳು ಹೋಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟಾರೆ 11 ಮಂದಿಗೆ ಸೋಂಕು ತಗುಲಿದೆ. ನಾವು ಪ್ರಸ್ತುತ ಮೊದಲ ಹಾಗೂ ಎರಡನೇ ಹಂತದ ನಡುವೆ ಇದ್ದೇವೆ. ಎರಡನೇ ಹಂತದಲ್ಲಿ ನಿಯಂತ್ರಿಸದೆ ಮೂರನೇ ಹಂತಕ್ಕೆ ಸೋಂಕು ಮುಟ್ಟಿದ ನಂತರ ಸಾವಿರಾರು ಜನರಿಗೆ ಸೋಂಕು ತಗುಲಿ ನೂರಾರು ಮಂದಿ ಸಾವನ್ನಪ್ಪುತ್ತಿರುವ ಘಟನೆಗಳನ್ನು ವಿದೇಶದಲ್ಲಿ ನೋಡುತ್ತಿದ್ದೇವೆ. ಹೀಗಾಗಿ ಇಂತಹ ತಪ್ಪು ಕರ್ನಾಟಕದಲ್ಲಿ ಪುನರಾವರ್ತನೆಯಾಗಬಾರದು ಎಂಬ ಕಾರಣಕ್ಕೆ ಬೇರೆಯವರ ಅನುಭವದಿಂದ ನಾವು ಪಾಠ ಕಲಿಯುತ್ತಿದ್ದೇವೆ. ಜನರು ಜನದಟ್ಟಣೆಯ ಪ್ರದೇಶಗಳಿಗೆ ಹೋಗುವುದನ್ನು ತಡೆಯಲು ಇನ್ನಷ್ಟುಮಾರ್ಗಸೂಚಿ ಸಿದ್ಧಪಡಿಸಿದ್ದೇವೆ ಎಂದು ಹೇಳಿದರು.
ತುರ್ತು ಇದ್ದರೆ ಮಾತ್ರ ಆಸ್ಪತ್ರೆಗೆ ಹೋಗಿ:
ರಾಜ್ಯದಲ್ಲಿ ಹದಿನೇಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಂತೆ ಜಿಲ್ಲಾ ಆಸ್ಪತ್ರೆಗಳಿವೆ. ಅಲ್ಲದೆ ಉಳಿದ ಜಿಲ್ಲೆಗಳಲ್ಲೂ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಸ್ವಾಯತ್ತ ಸಂಸ್ಥೆಗಳಾಗಿರುವ ಕಿದ್ವಾಯಿ, ಜಯದೇವದಂತಹ ದೊಡ್ಡ ಆಸ್ಪತ್ರೆಗಳೂ ಇವೆ. ಇಂತಹ ಆಸ್ಪತ್ರೆಗಳಿಗೆ ತೀರಾ ತುರ್ತು ಅಗತ್ಯವಿಲ್ಲದಿದ್ದರೆ ಸಾರ್ವಜನಿಕರು ಹೊರರೋಗಿಗಳಾಗಿ ಹೋಗಬಾರದು ಎಂದು ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ಜಯದೇವ ಹೃದ್ರೋಗ ಆಸ್ಪತ್ರೆಗೆ ಮಂಗಳವಾರ ಒಂದೇ ದಿನ 1500 ಮಂದಿ ಹೊರರೋಗಿಗಳು ಭೇಟಿ ನೀಡಿದ್ದಾರೆ. ಇವರ ಜೊತೆ ಸಹಾಯಕರು ಸೇರಿ 2-3 ಸಾವಿರ ಮಂದಿ ಆಗಮಿಸಿದ್ದಾರೆ. ಇದರಿಂದ ಒಬ್ಬ ಸೋಂಕಿತರಿಂದ ಹೆಚ್ಚು ಮಂದಿಗೆ ಸುಲಭವಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ತೀರಾ ತುರ್ತು ಅಗತ್ಯವಿಲ್ಲದಿದ್ದರೆ ಯಾರೂ ಆಸ್ಪತ್ರೆಗಳಿಗೆ ಹೋಗಬೇಡಿ. 10-15 ದಿನ ವಿಳಂಬವಾಗಿ ಹೋದರೂ ನಮ್ಮ ಆರೋಗ್ಯಕ್ಕೆ ಸಮಸ್ಯೆಯಿಲ್ಲ ಎಂಬಂತಹವರು ಆಸ್ಪತ್ರೆಗಳಿಂದ ದೂರ ಉಳಿಯಿರಿ ಎಂದು ಕರೆ ನೀಡಿದರು.
ದಂತ ಚಿಕಿತ್ಸೆ ಕ್ಲಿನಿಕ್ ಬಂದ್:
ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳಿಂದಲೂ ಸೋಂಕು ಬೇಗ ಹರಡುವ ಸಾಧ್ಯತೆ ಇರುತ್ತದೆ. ಆಸ್ಪತ್ರೆಗಳಲ್ಲಿ ರೋಗಿಗಳನ್ನು ವೈದ್ಯರು ತೀರಾ ಹತ್ತಿರದಿಂದ ಉಪಚರಿಸಬೇಕಾಗುತ್ತದೆ. ಹೀಗಾಗಿ ಮಾ.31ರವರೆಗೆ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಹಾಗೂ ದಂತ ಚಿಕಿತ್ಸಾಲಯಗಳ ಸೇವೆಯನ್ನು ಬಂದ್ ಮಾಡುವಂತೆ ಸೂಚಿಸಲಾಗುವುದು. ಈ ಬಗ್ಗೆ ಸದ್ಯದಲ್ಲೇ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.
ರೆಸ್ಟೋರೆಂಟ್ ಎ.ಸಿ. ಆಫ್:
ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಕೊರೋನಾ ವೈರಾಣು ಹೆಚ್ಚು ಕಾಲ ಜೀವಿಸಿ ಹೆಚ್ಚು ಮಂದಿಗೆ ಹರಡುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರೆಸ್ಟೋರೆಂಟ್ ಮಾಲಿಕರ ಸಂಘದೊಂದಿಗೆ ಸಭೆ ನಡೆಸಲಾಗಿದೆ. ಈ ವೇಳೆ ಎಲ್ಲಾ ರೆಸ್ಟೋರೆಂಟ್‌ಗಳಲ್ಲೂ ನೀವು ಸೇವೆ ಮುಂದುವರೆಸಿ. ಆದರೆ, ಹವಾನಿಯಂತ್ರಿತ ವ್ಯವಸ್ಥೆ (ಎ.ಸಿ) ಬಂದ್ ಮಾಡಿ. ಜತೆಗೆ ಎರಡು ಕುರ್ಚಿಗಳ ನಡುವೆ ಕನಿಷ್ಠ ಮೂರೂವರೆ ಅಡಿ ಅಂತರ ಕಾಯ್ದುಕೊಳ್ಳಿ ಎಂದು ಸೂಚನೆ ನೀಡಲಾಗಿದೆ. ಅವರೂ ಸಹ ಸರ್ಕಾರದ ಸೂಚನೆ ಪಾಲಿಸಲು ಒಪ್ಪಿದ್ದಾರೆ ಎಂದು ಹೇಳಿದರು.
ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ‘ಹೆಲ್ತ್ ವಾರಿಯರ್ಸ್’ ಅಭಿಯಾನ
ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಯೋಧರಾದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ಫೇಸ್‌ಬುಕ್ ಹಾಗೂ ಟ್ವೀಟರ್‌ನಲ್ಲಿ ‘ಹೆಲ್ತ್ ವಾರಿಯರ್ಸ್’ (್ಫhಛಿa್ಝಠಿhಡಿa್ಟ್ಟಜಿಟ್ಟs) ಅಭಿಯಾನ ಹಮ್ಮಿಕೊಂಡಿದೆ.
ಹೆಲ್ತ್ ವಾರಿಯರ್ಸ್ ಹೆಸರಿನಲ್ಲಿ ಹ್ಯಾಶ್‌ಟ್ಯಾಗ್ ಕ್ರಿಯೇಟ್ ಮಾಡಿದ್ದು, ಸಾರ್ವಜನಿಕರು ರಾಜ್ಯದ ಜನರ ಹಿತದೃಷ್ಟಿಯಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸಲಾಂ ಹೇಳಬೇಕು. ನಮ್ಮ ಕಡೆಯಿಂದ ನೈತಿಕ ಬೆಂಬಲವನ್ನು ವ್ಯಕ್ತಿಪಡಿಸಿ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ಆತ್ಮಸ್ಥೈರ್ಯ ತುಂಬಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ