Good News To Labours : ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಸರ್ಕಾರಿ ಬಸ್‌ಪಾಸ್‌: ಹೆಬ್ಬಾರ್‌

By Suvarna News  |  First Published Dec 12, 2021, 8:49 AM IST
  • ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಸರ್ಕಾರಿ ಬಸ್‌ಪಾಸ್‌
  • ನೋಂದಾಯಿತ ಕಾರ್ಮಿಕರಿಗಷ್ಟೇ ಯೋಜನೆಯ ಲಾಭ
  •  50 ಕಿ.ಮೀ. ವ್ಯಾಪ್ತಿಯಲ್ಲಿ ಉಚಿತ ಸಂಚಾರಕ್ಕೆ ಅವಕಾಶ?

ಬೆಂಗಳೂರು(ಡಿ.12): ನೋಂದಾಯಿತ ಕಾರ್ಮಿಕರಿಗೆ ಕೆಲಸದ ಸ್ಥಳಗಳಿಗೆ ತೆರಳಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(Bangalore Metropolitan Transport Corporation) (ಬಿಎಂಟಿಸಿ) ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಆರಂಭಿಸಲಾಗಿರುವ ಪಾಸ್‌ ನೀಡುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದ್ದು, ಶೀಘ್ರದಲ್ಲೇ ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ ವಿತರಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಘೋಷಿಸಿದ್ದಾರೆ.

ಯೋಜನೆ ವ್ಯಾಪ್ತಿ, ಪಾಸ್‌ ದೂರ ಮಿತಿ ಕುರಿತು ಅಂತಿಮ ಹಂತದ ಮಾತುಕತೆಗಳು ಕಾರ್ಮಿಕ ಇಲಾಖೆ(Department of Labor) ಮತ್ತು ಕೆಎಸ್‌ಆರ್‌ಟಿಸಿ(KSRTC) ನಡುವೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ರಾಜ್ಯದ ಕಾರ್ಮಿರಿಗೆ ಉಚಿತ ಸಾರಿಗೆ ಸೌಲಭ್ಯ ಭಾಗ್ಯ ದೊರೆಯಲಿದೆ. ಈಗಾಗಲೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಲ್ಯಾಣ ಮಂಡಳಿಯ ನೊಂದಾಯಿತ ಕಾರ್ಮಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಪಾಸ್‌ ಸೌಲಭ್ಯ ನೀಡಲಾಗಿದೆ. ಮುಂದಿನ ಹಂತದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Latest Videos

undefined

ಬಡವರ ಮಕ್ಕಳಿಗೆ ಉಚಿತ ಬಸ್‌ಪಾಸ್‌

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ರಾಜ್ಯದ ಎಲ್ಲ ಕಾರ್ಮಿಕರಿಗೂ ಪಾಸ್‌ ವಿತರಣೆ ದೊಡ್ಡಮಟ್ಟದ ಯೋಜನೆಯಾಗಿದ್ದು, ರಿಯಾಯಿತಿ ಕಷ್ಟವೆಂದು ಸಾರಿಗೆ ಸಂಸ್ಥೆಗಳು ಹಿಂದೇಟು ಹಾಕಿದ್ದವು. ಕಾರ್ಮಿಕ ಇಲಾಖೆಯಿಂದಲೇ ಶೇ.100ರಷ್ಟುಮೊತ್ತವನ್ನು ಪಾವತಿಸಿಯಾದರೂ ರಾಜ್ಯದಾದ್ಯಂತ ಜಾರಿ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಬಸ್ ಸೇವೆ ಜಾರಿಗೆ ಕಾರ್ಮಿಕ ಇಲಾಖೆ ಮುಂದಡಿ ಇರಿಸಿತ್ತು. ಈ ಸಂದರ್ಭದಲ್ಲಿ ಇಲಾಖೆಯು ಶೇ.80ರಷ್ಟನ್ನು ತಾನು ಭರಿಸುವ ಭರವಸೆ ನೀಡಿತ್ತು, ಇನ್ನುಳಿದ ಶೇ.20ರಷ್ಟನ್ನು ರಿಯಾಯಿತಿ ನೀಡುವುದು ಅಥವಾ ಸಾರಿಗೆ ಇಲಾಖೆಯೇ ಭರಿಸುವ ಪ್ರಸ್ತಾವನೆಯನ್ನು ಇರಿಸಿತ್ತು. ಆರಂಭಿಕ ಹಂತದಲ್ಲಿ ಈ ಪ್ರಸ್ತಾವನೆಗೆ ಮೌಖಿಕ ಸಮ್ಮತಿ ಸೂಚಿಸಿದ್ದ ಸಾರಿಗೆ ಇಲಾಖೆ ಇದೀಗ "ತನ್ನ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಶೇ.20 ರಿಯಾಯ್ತಿ ಅಥವಾ ತಾನು ಭರಿಸುವುದು ಅಸಾಧ್ಯ" ಎಂದು ತಿಳಿಸಿದೆ. ಹೀಗಾಗಿ ಶ್ರಮಿಕ ವರ್ಗದ ಏಳಿಗೆಯ ಏಕಮೇವ ಉದ್ದೇಶದಿಂದ ಜಾರಿ ಮಾಡಲಾಗುತ್ತಿರುವ ಈ ಯೋಜನೆ ಅನುಷ್ಠಾನದ ಖಡಕ್ ನಿರ್ಧಾರ ಕೈಗೊಂಡಿರುವ ಕಾರ್ಮಿಕ ಸಚಿವರು, ಶೇ.100ರಷ್ಟು ಮೊತ್ತವನ್ನು ಪಾವತಿಸಿಯಾದರೂ ರಾಜ್ಯದಾದ್ಯಂತ ಜಾರಿ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಕಾರ್ಮಿಕರು ಪ್ರತಿ ನಿತ್ಯ ಕೆಲಸಕ್ಕೆಂದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುತ್ತಿದ್ದು, ಕನಿಷ್ಠ 150 ರಿಂದ 200 ರೂ. ವ್ಯಯಿಸಬೇಕಾಗಿದೆ. ಕಾರ್ಮಿಕರು ಪಡೆಯುವ ಕೂಲಿ ಮೊತ್ತದ ಬಹುಭಾಗವನ್ನು ಸಾರಿಗೆಗೆ ವ್ಯಯಿಸುತ್ತಿದ್ದಾರೆ. ಕಟ್ಟಡ ಕಾರ್ಮಿಕರ ಅನುಕೂಲಕ್ಕಾಗಿ ಉಚಿತ ಸಾರಿಗೆ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ. ಕಾರ್ಮಿಕ ಕಲ್ಯಾಣ ಮಂಡಳಿಯ ನೊಂದಾಯಿತ ಕಾರ್ಮಿಕರು ಈ ಯೋಜನೆ ಲಾಭ ಪಡೆಯಬಹುದು ಎಂದು ಹೇಳಿದ್ದಾರೆ.

ಕೊರೋನಾ ಮೊದಲನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಸಂಘಟಿತ, ಅಸಂಘಟಿತ ಸೇರಿದಂತೆ ಎಲ್ಲ ಶ್ರಮಿಕ ವರ್ಗಕ್ಕೆ ಹಲವು ಯೋಜನೆಗಳ ಮೂಲಕ ಸಾಂತ್ವನ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಕೊರೋನಾ ನಂತರ ಕಾರ್ಮಿಕ ಅದಾಲತ್‌(Labor Adalat)ನಂತಹ ಐತಿಹಾಸಿಕ ಕಾರ್ಯಕ್ರಮ ಜಾರಿ ಮಾಡಿ ಇಲಾಖೆಯು ಶ್ರಮಿಕನಿಗೆ ಇನ್ನಷ್ಟು ಹತ್ತಿರವಾಯಿತು. ಇಲಾಖೆಯು ಜನಪರ ಧೋರಣೆಯನ್ನು ಮುಂದುವರೆಸಿದೆ ಎಂದು ವಿವರಿಸಿದ್ದಾರೆ.

ಶೀಘ್ರ ಜಾರಿ ದಿನಾಂಕ ನಿಗದಿ:

ಯೋಜನೆ ತ್ವರಿತ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಕೆಎಸ್‌ಆರ್‌ಟಿಸಿ(KSRTC) ಈಶಾನ್ಯ, ವಾಯವ್ಯ ಸಾರಿಗೆ ಸಂಸ್ಥೆಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಅಂತಿಮ ದರಪಟ್ಟಿನೀಡಲು ಕೋರಲಾಗಿದ್ದು, ಮತ್ತೊಂದು ಸುತ್ತಿನ ಸಭೆಯ ಬಳಿಕ ಪಾಸ್‌ ಯೋಜನೆ ಜಾರಿ ದಿನಾಂಕ ನಿಗದಿಯಾಗಲಿದೆ ಎಂದು ಕಾರ್ಮಿಕ ಇಲಾಖೆ ಆಯುಕ್ತರು ತಿಳಿಸಿದ್ದಾರೆ.


50 ಕಿ.ಮೀ ಮಿತಿ?

ಕಾರ್ಮಿಕರಿಗೆ ಬಿಎಂಟಿಸಿಯಿಂದ ನೀಡಿರುವ ಪಾಸ್‌ನಲ್ಲಿ ಯಾವುದೇ ಮಿತಿ ಇಲ್ಲ. ನಗರದಾದ್ಯಂತ ಬಿಎಂಟಿಸಿ (ಸಾಮಾನ್ಯ ಬಸ್‌) ಬಸ್‌ಗಳಲ್ಲಿ ಸಂಚರಿಸಬಹುದು. ಆದರೆ. ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ನಲ್ಲಿ ನಿರ್ದಿಷ್ಟ ದೂರದ ಮಿತಿ ವಿಧಿಸಲಾಗುತ್ತಿದೆ. ಕಾರ್ಮಿಕ ವಾಸವಿರುವ ಸ್ಥಳದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲು ಚರ್ಚಿಸಲಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. ರಾಜ್ಯದ ಶ್ರಮಿಕ ವರ್ಗದ ಕ್ಷೇಮಕ್ಕೆ ಶ್ರಮಿಸುತ್ತಿರುವ ಕಾರ್ಮಿಕ ಇಲಾಖೆಯ  ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.  

click me!