Ukraine ಯುದ್ಧದಲ್ಲಿ ಮೃತನಾದ ನವೀನ್‌ ಮನೆಗೆ ರಾಜ್ಯಪಾಲರ ಭೇಟಿ, ಸಾಂತ್ವನ

Kannadaprabha News   | Asianet News
Published : Mar 25, 2022, 02:00 AM IST
Ukraine ಯುದ್ಧದಲ್ಲಿ ಮೃತನಾದ ನವೀನ್‌ ಮನೆಗೆ ರಾಜ್ಯಪಾಲರ ಭೇಟಿ, ಸಾಂತ್ವನ

ಸಾರಾಂಶ

ರಾಜ್ಯಪಾಲ ತಾವರಚಂದ್‌ ಗೆಹ್ಲೋತ್‌ ಗುರುವಾರ ತಾಲೂಕಿನ ಚಳಗೇರಿಗೆ ಭೇಟಿ ನೀಡಿ ಉಕ್ರೇನ್‌ ಯುದ್ಧದಲ್ಲಿ ಮೃತನಾದ ನವೀನ ತಂದೆ ಶೇಖರಪ್ಪ ಗ್ಯಾನಗೌಡ್ರ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನಿಮ್ಮ ಕಷ್ಟಸುಖಗಳಿಗೆ ಸದಾ ಸ್ಪಂದಿಸುವೆ. 

ರಾಣಿಬೆನ್ನೂರು (ಮಾ.25): ರಾಜ್ಯಪಾಲ ತಾವರಚಂದ್‌ ಗೆಹ್ಲೋತ್‌ (Governor Thawar Chand Gehlot) ಗುರುವಾರ ತಾಲೂಕಿನ ಚಳಗೇರಿಗೆ ಭೇಟಿ ನೀಡಿ ಉಕ್ರೇನ್‌ (Ukrain) ಯುದ್ಧದಲ್ಲಿ ಮೃತನಾದ ನವೀನ (Naveen) ತಂದೆ ಶೇಖರಪ್ಪ ಗ್ಯಾನಗೌಡ್ರ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನಿಮ್ಮ ಕಷ್ಟಸುಖಗಳಿಗೆ ಸದಾ ಸ್ಪಂದಿಸುವೆ. ನವೀನ್‌ ಅಗಲಿಕೆ ತೀವ್ರ ನೋವಿನ ವಿಷಯ, ರಾಜ್ಯಪಾಲ ಹುದ್ದೆಯಿಂದ ವಿಶ್ರಾಂತಿ ಪಡೆದ ಬಳಿಕವೂ ಸದಾ ನಿಮ್ಮೊಂದಿಗಿರುವೆ ಎಂದು ಭರವಸೆ ನೀಡಿದರು.

ಓರ್ವ ಪ್ರತಿಭಾವಂತ ಯುವಕ ನಿಧನವಾಗಿದ್ದು ಶೋಚನೀಯ ಸಂಗತಿ. ಮಾ. 21ರಂದು ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಿದ ದಿನವೇ ಬರಬೇಕಿತ್ತು. ಆದರೆ ಮಧ್ಯಪ್ರದೇಶದಲ್ಲಿ ಮೊದಲೇ ಕಾರ್ಯಕ್ರಮ ನಿಗದಿಯಾದ ಕಾರಣ ಬರಲು ಸಾಧ್ಯವಾಗಲಿಲ್ಲ ಎಂದರು. ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಮೈಸೂರಿನಲ್ಲಿ ನವೀನ್‌ ಸಹೋದರನಿಗೆ ಚಿನ್ನದ ಪದಕವನ್ನು ತಾವೇ ಪ್ರದಾನ ಮಾಡಿದ್ದನ್ನು ಸ್ಮರಿಸಿಕೊಂಡರು. ನವೀನ್‌ ಅಗಲಿಕೆ ಬೇಸರದ ಸಂಗತಿಯಾದರೂ ರಾಜ್ಯ ಹಾಗೂ ದೇಶ ನಿಮ್ಮೊಂದಿಗೆ ಇರುತ್ತದೆ ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ರಾಜ್ಯಪಾಲರು ತಮಗೆ ಧೈರ್ಯ ತುಂಬಿದರು ಎಂದು ನವೀನ್‌ ತಂದೆ ಶೇಖರಗೌಡ ಗ್ಯಾನಗೌಡ್ರ ತಿಳಿಸಿದರು.

ರಾಜ್ಯಪಾಲರು ಗುರುವಾರ ದಾವಣಗೆರೆಯಿಂದ ರಸ್ತೆ ಮಾರ್ಗವಾಗಿ ಮಧ್ಯಾಹ್ನ 2.20 ಗಂಟೆಗೆ ಚಳಗೇರಿಗೆ ಆಗಮಿಸಿ ನವೀನ್‌ ತಂದೆ ಶೇಖರಗೌಡ ಗ್ಯಾನಗೌಡರ್‌ ಹಾಗೂ ತಾಯಿ ವಿಜಯಲಕ್ಷ್ಮಿ ಅವರೊಂದಿಗೆ ಮಾತುಕತೆ ನಡೆಸಿದರು. ಮನೆಗೆ ಆಗಮಿಸುತ್ತಿಂದಂತೆ ಹೊರ ಆವರಣದಲ್ಲಿದ್ದ ನವೀನ್‌ ಭಾವಚಿತ್ರಕ್ಕೆ ನಮಿಸಿದ ರಾಜ್ಯಪಾಲರು, ಮನೆಯಿಂದ ಹೊರಡುವಾಗ ಶೇಖರಪ್ಪ ಅವರಿಗೆ ಬಾಗಿ ನಮಿಸಿದರು, ಶೇಖರಗೌಡ ರಾಜ್ಯಪಾಲರ ಕಾಲಿಗೆ ಎರಗಿ ನಮಿಸಿದರು. ಈ ವೇಳೆ ಗ್ರಾಮದ ಕಟಗಿಹಳ್ಳಿಮಠದ ಡಾ. ಮಹಾಂತೇಶ ಸ್ವಾಮಿಗಳು, ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣನವರ, ಜಿಪಂ ಸಿಇಒ ಮಹಮ್ಮದ್‌ ರೋಶನ್‌, ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್‌ಪಿ ವಿಜಯಕುಮಾರ ಸಂತೋಷ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಸೀೕಲ್ದಾರ್‌ ಜಿ. ಶಂಕರ್‌ ಇತರರು ಇದ್ದರು.

Naveen Dead Body ದೇಹ ತರಿಸಿದ ಪ್ರಧಾನಿ ಮೋದಿ, ಸಿಎಂಗೆ ವಿಧಾನಸಭೆ ಅಭಿನಂದನೆ!

ಉಕ್ರೇನ್‌ ಯುದ್ಧದಲ್ಲಿ ಮೃತರಾಗಿದ್ದ ನವೀನ್‌: ಉಕ್ರೇನ್‌ ದೇಶದ ಕಾರ್ಕಿವ್‌ ನಗರದಲ್ಲಿ 4ನೇ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನವೀನ್‌ ಮಾ. 1ರಂದು ಶೆಲ್‌ ದಾಳಿಗೆ ತುತ್ತಾಗಿ ಮೃತರಾಗಿದ್ದರು. ಪಾರ್ಥಿವ ಶರೀರವನ್ನು ಮಾ. 21 ರಂದು ಸ್ವಗ್ರಾಮಕ್ಕೆ ತರಲಾಗಿತ್ತು. ತರುವಾಯು ದಾವಣಗೆರೆಯ ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಹಸ್ತಾಂತರಿಸಲಾಗಿತ್ತು.

ನವೀನ್‌ ದೇಹ ಸಂರಕ್ಷಿಸುವುದು ಆದ್ಯತೆಯಾಗಿತ್ತು: ಉಕ್ರೇನ್‌ನಲ್ಲಿ ಮೃತಪಟ್ಟವಿದ್ಯಾರ್ಥಿ ನವೀನ್‌ ಮೃತದೇಹ 21 ದಿನಗಳ ಬಳಿಕವೂ ಕೆಡದಂತೆ ಹಾಗೂ ಯುದ್ಧ ಭೂಮಿಯಿಂದ ತಂದಿರುವುದನ್ನು ಪವಾಡಸದೃಶ ಎಂದು ಸಿಎಂ ಬಣ್ಣಿಸಿದರು. ನವೀನ್‌ ದೇಹವನ್ನು ಯಾವ ರೀತಿ ತರಲಾಯಿತು ಎಂಬುದನ್ನು ವಿವರಿಸಿದ ಅವರು, ನವೀನ್‌ಗೆ ನೇರವಾಗಿ ಶೆಲ್‌ ಬಡಿದಂತೆ ಕಂಡುಬಂದಿಲ್ಲ. ಪಕ್ಕದ ಕಟ್ಟಡದ ಮೇಲೆ ಶೆಲ್‌ ದಾಳಿಯಾಗಿ ತಲೆಗೆ ಏಟು ಬಿದ್ದು ನವೀನ್‌ ಮೃತಪಟ್ಟಿದ್ದಾನೆ. ಅದಾದ ತಕ್ಷಣ ಪ್ರಧಾನಿಗಳೂ ಪೋಷಕರೊಂದಿಗೆ ಮಾತನಾಡಿದರು. ಮೊದಲು ನವೀನ್‌ ದೇಹ ಸಂರಕ್ಷಿಸುವುದು ನಮ್ಮ ಆದ್ಯತೆಯಾಗಿತ್ತು.

ನಿರಂತರ ಸಂಪರ್ಕ ಸಾಧಿಸಿ ಆ ಕೆಲಸ ಮಾಡಿದೆವು. ಮೃತ ದೇಹ ಒಂದು ಕಡೆ, ಶವಾಗಾರ ಇನ್ನೊಂದು ಕಡೆ ಇತ್ತು. ಶವವನ್ನು ಎಂಬಾಲ್ಮಿಂಗ್‌ ಮಾಡುವುದು ಮಹತ್ವದ್ದಾಗಿತ್ತು. ಜೈಶಂಕರ್‌ ಅವರು ಮೊದಲು ಆ ಭಾಗದಲ್ಲಿ ರಾಜತಾಂತ್ರಿಕರಾಗಿ ಕೆಲಸ ಮಾಡಿದ್ದರಿಂದ ಅಲ್ಲೆಲ್ಲ ಪರಿಚಯವಿತ್ತು. ಪ್ರಧಾನಿಗಳ ಸೂಚನೆ ಮೇರೆಗೆ ಅಲ್ಲಿಯ ಅಂತ್ಯಕ್ರಿಯೆ ನೆರವೇರಿಸುವ ಸಂಸ್ಥೆ ಹಿಡಿದು ಮೊದಲು ನವೀನ್‌ ದೇಹ ಸುರಕ್ಷಿತವಾಗಿ ಇಡುವ ಕಾರ್ಯ ಮಾಡಲಾಯಿತು. ಫ್ರೀಜರ್‌ನಲ್ಲಿ ಇಟ್ಟು ದೇಹ ಎಲ್ಲೂ ಕೆಡದಂತೆ ಸಂರಕ್ಷಿಸುವ ಕಾರ್ಯ ಮಾಡಲಾಗಿತ್ತು. ನಾನೂ ಪ್ರಧಾನಿ, ವಿದೇಶಾಂಗ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೆ. 

ದೇಶದಲ್ಲಿ ಜನಸಂಖ್ಯೆ ಸ್ಪೋಟ ಮುಂದುವರಿದಿದೆ: ಥಾವರ್ ಚಂದ್ ಗೆಹ್ಲೋಟ್

ಘಟನೆ ನಡೆದ ಸ್ಥಳದಲ್ಲಿ ಬಾಂಬಿಂಗ್‌ ನಡೆಯುತ್ತಿರುವುದರಿಂದ ಸಮಸ್ಯೆಯಾಗಿತ್ತು. ಪೋಲೆಂಡ್‌ ಪಶ್ಚಿಮದ ಭಾಗದಲ್ಲಿ ಇನ್ನೂ ಬಾಂಬಿಂಗ್‌ ನಡೆಯುತ್ತಿದೆ. ಬರುವ ಮಾರ್ಗದಲ್ಲಿ ಬಾಂಬಿಂಗ್‌ ನಡೆಯುತ್ತಿದ್ದರೂ ಅಲ್ಲಿಂದ ಪ್ಯಾಕಿಂಗ್‌ ಮಾಡಿ ವಾಸ್ರೋವಾಕ್ಕೆ ನವೀನ್‌ ದೇಹ ತಂದು ಅಲ್ಲಿಂದ ಪ್ಯಾಕಿಂಗ್‌ ಮಾಡಿ ದುಬೈಗೆ ತರಲಾಯಿತು. ಅಲ್ಲಿ ದಾಖಲೆ ಪರಿಶೀಲಿಸಿ ಮತ್ತೊಮ್ಮೆ ದೇಹ ಪ್ಯಾಕಿಂಗ್‌ ಮಾಡಿ ಇಲ್ಲಿಗೆ ತರಲಾಗಿದೆ. ಈ ಅಸಾಧ್ಯವಾದ ಕೆಲಸವನ್ನು ಪ್ರಧಾನಿಗಳು ಮಾಡಿ ತೋರಿಸಿದ್ದಾರೆ. ಯುದ್ಧ ಭೂಮಿಯಿಂದ ಸೈನಿಕರನ್ನು ತರುವುದೇ ಕಷ್ಟವಿರುವಾಗ ಪವಾಡದ ರೀತಿಯಲ್ಲಿ ನವೀನ್‌ ದೇಹ ತರಲಾಗಿದೆ. ಆ ಮೂಲಕ ನವೀನ್‌ ತಾಯಿಯ ಭಾವನೆಯನ್ನು ಪ್ರಧಾನಿಗಳು ಗೌರವಿಸಿದ್ದಾರೆ ಎಂದು ಸಿಎಂ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!