ಸಿ.ಟಿ.ರವಿ ಬಂಧನ ಕೇಸ್‌ನಲ್ಲಿ ಈಗ ರಾಜ್ಯಪಾಲರ ಪ್ರವೇಶ?

By Kannadaprabha News  |  First Published Jan 9, 2025, 6:29 AM IST

ರಾಜ್ಯಪಾಲ ಥಾವರ್‌ ಚಂದ್ ಗೆಹಲೋತ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ. ಆದರೆ, ಈ ಪತ್ರದ ಬಗ್ಗೆ ಸರ್ಕಾರದ ಮೂಲಗಳು ಖಚಿತಪಡಿಸಿಲ್ಲ.


ಬೆಂಗಳೂರು(ಜ.09):  ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಪ್ರಕರಣ ಸಂಬಂಧ ಅಮಾನವೀಯವಾಗಿ ನಡೆಸಿಕೊಂಡ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ರಾಜ್ಯಪಾಲ ಥಾವರ್‌ ಚಂದ್ ಗೆಹಲೋತ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ. ಆದರೆ, ಈ ಪತ್ರದ ಬಗ್ಗೆ ಸರ್ಕಾರದ ಮೂಲಗಳು ಖಚಿತಪಡಿಸಿಲ್ಲ.
ಪ್ರಕರಣವು ಜನಪ್ರತಿನಿಧಿಗೆ ಸಂಬಂಧಿಸಿದ ವಿಷಯವಾಗಿದ್ದು, ಮುಖ್ಯಮಂತ್ರಿಗಳ ಮಧ್ಯಪ್ರವೇಶ ಅಗತ್ಯವಾಗಿದೆ. ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ರಾಜಭವನಕ್ಕೆ ಆಗಮಿಸಿದ್ದ ಸಿ.ಟಿ.ರವಿ ನೇತೃತ್ವದ ನಿಯೋಗ ಲಿಖಿತ ದೂರು ಸಲ್ಲಿಸಿದ್ದು ಜನಪ್ರತಿನಿಧಿಯಾಗಿರುವ ನನ್ನನ್ನು ಅತ್ಯಂತ ಅಗೌರವ ಮತ್ತು ಅಮಾನವೀಯವಾಗಿ ಪೊಲೀಸರು ನಡೆಸಿಕೊಂಡಿದ್ದಾರೆ. ಅವರನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ತಮಗೆ ಕಳುಹಿಸಿಕೊಡಲಾಗಿದ್ದು, ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Tap to resize

Latest Videos

ಅಶ್ಲೀಲ ಪದ ಬಳಕೆ ಕೇಸ್: ಸಿಐಡಿಗೆ ಮೇಲ್ಮನೆ ಮಹಜರಿಗೆ ಅನುಮತಿ ನೀಡಲ್ಲ, ಹೊರಟ್ಟಿ

ಬೆಳಗಾವಿ ಅಧಿವೇಶನದ ವೇಳೆ ವಿಧಾನಪರಿಷತ್‌ನಲ್ಲಿ ನಡೆದ ಘಟನೆ ಬಳಿಕ ಸಿ.ಟಿ.ರವಿ ಅವರನ್ನು ಬಂಧಿಸಿದ ನಂತರ ಪೊಲೀಸರು ಒಂದು ರಾತ್ರಿ ಅಪಾಯಕಾರಿ ಪ್ರದೇಶದಲ್ಲಿ ತಿರುಗಾಡಿಸಿದ್ದಾರೆ. ಎಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬುದರ ಸಣ್ಣ ಸುಳಿವನ್ನೂ ನೀಡಲಿಲ್ಲ. ಪ್ರಭಾವಿ ಸಚಿವರ ನಿರ್ದೇಶನದ ಮೇರೆಗೆ ಪೊಲೀಸರು ಕಾರ್ಯ ನಿರ್ವಹಿಸಿದ್ದಾರೆ. ದೈಹಿಕ ಹಾಗೂ ಮಾನಸಿಕವಾಗಿಯೂ ಹಿಂಸೆ ನೀಡಿ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ಕ್ರಮ ಜರುಗಿಸಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ ಎನ್ನಲಾಗಿದೆ.

click me!