ಬಂಡೀಪುರ ಅರಣ್ಯ ಪ್ರದೇಶದೊಳಗೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಇಲ್ಲ, ನಿರ್ದಿಷ್ಟ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬೆಂಗಳೂರು (ಜ.08): ಬಂಡೀಪುರ ಅರಣ್ಯ ಪ್ರದೇಶದೊಳಗೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಇಲ್ಲ, ನಿರ್ದಿಷ್ಟ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ವಿಧಾನನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ದಿನದ 24 ಗಂಟೆಯೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಕೆಲ ಕಾಂಗ್ರೆಸ್ ನಾಯಕರ ಸಲಹೆಗೆ ಪ್ರತಿಕ್ರಿಯಿಸಿ, ಬಂಡೀಪುರದಲ್ಲಿ ರಾತ್ರಿ 9 ಗಂಟೆ ನಂತರ ವಾಹನಗಳ ಸಂಚಾರಕ್ಕೆ ನಿಷೇಧ ಇದೆ. ಆದರೆ ಎರಡು ಬಸ್‌ಗಳು ಮತ್ತು ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ ಒದಗಿಸಲಾಗಿದೆ. ಈ ಬಗ್ಗೆ ಪಕ್ಷದ ಮುಖಂಡರಿಗೆ ಮನದಟ್ಟು ಮಾಡಲಾಗುವುದು. ವನ್ಯಜೀವಿಗಳ ರಕ್ಷಣೆ ಜತೆಗೆ ಅಂತರ್ ರಾಜ್ಯಗಳ ಸಂಬಂಧವೂ ಮುಂದುವರಿಯುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕಾವೇರಿ ತೀರದ ವನ್ಯಜೀವಿ ವಿಸ್ಮಯದ ಸಾಕ್ಷ್ಯಚಿತ್ರ: ಕೋಟ್ಯಂತರ ಜೀವ ರಾಶಿಗಳಿಗೆ ಜೀವನದಿಯಾಗಿರುವ ಕಾವೇರಿ ಬೇಸಿಗೆಯಲ್ಲಿ ಹೇಗೆ ಕಾಣಿಸುತ್ತದೆ ಗೊತ್ತಿದೆಯೇ? ಕಾವೇರಿಯನ್ನೇ ನಂಬಿದ ವನ್ಯಜೀವಿಗಳು ಬೇಸಿಗೆಯಲ್ಲಿ ನೀರಿಗಾಗಿ ಪಡುವ ಪಡಿಪಾಟಲುಗಳೇನು? ಕಾವೇರಿ ನದಿ ತಪ್ಪಲಲ್ಲೇ ಇರುವ ಕಾವೇರಿ ಮತ್ತು ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ತಾಣದ ವನ್ಯಜೀವಿ ಸಂಪತ್ತುಗಳೇನು? ಇಷ್ಟೆಲ್ಲ ಏನುಗಳಿಗೆ ಉತ್ತರವಾಗಿ ವನ್ಯಜೀವಿ ತಜ್ಞರಾದ ಸರವಣ ಕುಮಾರ್ (ಸರ), ಡಾ. ಸಂಜಯ್‌ಗುಬ್ಬಿ ಅವರ ತಂಡ ‘ಕಾವೇರಿ ರಿವರ್ ಆಫ್ ಲೈಫ್’ ಹೆಸರಿನ ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದು, ಅದರ ವಿಶೇಷ ಸ್ಕ್ರೀನಿಂಗ್ ಏರ್ಪಡಿಸಲಾಗಿತ್ತು.
ಸತತ 4 ವರ್ಷಗಳ ಪ್ರಯತ್ನದ ಫಲವಾಗಿ ಕಾವೇರಿ ರಿವರ್ ಆಫ್ ಲೈಫ್ ಮೂಡಿಬಂದಿದೆ. ಕಾವೇರಿ ನದಿ, ಕಾವೇರಿ ಮತ್ತು ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ತಾಣಗಳಲ್ಲಿ ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆ, ಆನೆ, ಜಿಂಕೆ, ಕಾಡು ನಾಯಿ, ಕಪ್ಪೆಗಳು, ಪಕ್ಷಿ ಹೀಗೆ ಹಲವು ಜೀವ ವೈವಿಧ್ಯಗಳು, ಹಸಿರು ಕಳೆದುಕೊಂಡ ಅರಣ್ಯದಲ್ಲಿ ಅವುಗಳ ಜೀವನ ಶೈಲಿ ಹೇಗಿರುತ್ತದೆ ಎಂಬಂತಹ ಸೂಕ್ಷ್ಮ ಅಂಶಗಳನ್ನು ಕಣ್ಣಿಗೆ ಕಟ್ಟಿದಂತೆ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. ಅರಣ್ಯ, ವನ್ಯಜೀವಿ ಪ್ರೇಮಿಗಳಿಗೇ ತಿಳಿಯದ ಅನೇಕ ಅಂಶಗಳು ಸಾಕ್ಷ್ಯಚಿತ್ರದಲ್ಲಿದ್ದು, ಎಲ್ಲವನ್ನೂ ನೈಜವಾಗಿ ತೋರಿಸಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪಿಸಿಸಿಎಫ್ ಸುಭಾಷ್ ಮಾಲ್ಕಡೆ, ಸಂಸದ ಮತ್ತು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಚಲನಚಿತ್ರ ನಟ ದತ್ತಣ್ಣ ಇತರರು ವಿಶೇಷ ಸ್ಕ್ರೀನಿಂಗ್‌ನಲ್ಲಿ ಪಾಲ್ಗೊಂಡು ಸಾಕ್ಷ್ಯಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿನ್ ಪಂಚಾಳ ಕುಟುಂಬಕ್ಕೆ ₹10 ಲಕ್ಷ ಪರಿಹಾರ: ಸಚಿವ ಈಶ್ವರ್ ಖಂಡ್ರೆ
ಸ್ವಚ್ಛ ನೀರು ಕುಡಿಯುವ ಆನೆಗಳು: ಕರ್ನಾಟಕದಲ್ಲಿನ ಆನೆಗಳ ಪೈಕಿ ಅಂದಾಜು ಶೇ. 30ರಷ್ಟು ಆನೆಗಳು ಕಾವೇರಿ ನದಿ ಪಾತ್ರದ ಅರಣ್ಯ ಪ್ರದೇಶದಲ್ಲಿ ಕಾಣಸಿಗುತ್ತವೆ. ಅತಿ ಸೂಕ್ಷ್ಮ, ಗುಂಪಿನ ಪ್ರಾಣಿಯಾಗಿರುವ ಆನೆಗಳ ಜೀವನ ಶೈಲಿಯನ್ನು ಸಾಕ್ಷ್ಯಚಿತ್ರದಲ್ಲಿ ವಿವರವಾಗಿ ತೋರಿಸಲಾಗಿದೆ. ಮಳೆಗಾಲದಲ್ಲಿ ಯಥೇಚ್ಛ ನೀರು ಸಿಗುತ್ತದೆ. ಅದೇ ಬೇಸಿಗೆಯಲ್ಲಿ, ಅರಣ್ಯ ಪ್ರದೇಶದ ಹಸಿರೆಲ್ಲ ಮಾಯವಾಗಿ ಕಂದು ಬಣ್ಣಕ್ಕೆ ತಿರುಗುತ್ತದೆ ಹಾಗೂ ಅರಣ್ಯ ಪ್ರದೇಶದೊಳಗಿನ ನೀರಿನ ತೊರೆಗಳು ಬತ್ತಿ ಹೋಗುತ್ತವೆ. ಈ ಸಂದರ್ಭದಲ್ಲಿ ಆನೆಗಳು ಯಾವ ರೀತಿ ನೀರನ್ನು ಹುಡುಕಿಕೊಂಡು ಹೋಗುತ್ತವೆ, ಸ್ವಚ್ಛ ನೀರಿಗಾಗಿ ನೀರಿನ ಮೂಲಗಳ ದಡಗಳಲ್ಲಿ ಗುಂಡಿಯನ್ನು ತೋಡುವ ವಿಧಾನ ಹೀಗೆ ಹಲವು ವಿಚಾರಗಳನ್ನು ವಿವರಿಸಲಾಗಿದೆ.