ತಕ್ಷಣದಿಂದ ಜಾರಿಯಾಗುವಂತೆ ಯಾವುದೇ ಮಾಹಿತಿಯನ್ನೂ ಸಚಿವ ಸಂಪುಟ ಸಭೆ ಮುಂದೆ ಮಂಡಿಸದೆ ನೇರವಾಗಿ ರಾಜ್ಯಪಾಲರಿಗೆ ನೀಡುವಂತಿಲ್ಲ. ಈವರೆಗೆ ರಾಜ್ಯಪಾಲರು ಬರೆದಿರುವ ಪತ್ರಗಳಿಗೂ ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಿ ಸಭೆ ಅನುಮತಿಸಿದರೆ ಮಾತ್ರ ಮಾಹಿತಿ ಅಥವಾ ವಿವರಣೆ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಬೆಂಗಳೂರು(ಸೆ.27): ರಾಜ್ಯಪಾಲರು ಅಥವಾ ರಾಜ್ಯಪಾಲರ ಸಚಿವಾಲಯವು ಸರ್ಕಾರದಿಂದ ವಿವರಣೆ, ವರದಿ ಸೇರಿದಂತೆ ಯಾವುದೇ ಮಾಹಿತಿ ಕೇಳಿದರೂ ಅಧಿಕಾರಿಗಳು ನೇರವಾಗಿ ನೀಡುವಂತಿಲ್ಲ. ಸಚಿವ ಸಂಪುಟ ಸಭೆಯು ಪರಿಶೀಲಿಸಿ ಅನುಮತಿಸಿದ ಮಾಹಿತಿಯನ್ನು ಮಾತ್ರ ರಾಜ್ಯಪಾಲರಿಗೆ ನೀಡಬೇಕು' ಎಂದು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.
ತನ್ಮೂಲಕ ತಕ್ಷಣದಿಂದ ಜಾರಿಯಾಗುವಂತೆ ಯಾವುದೇ ಮಾಹಿತಿಯನ್ನೂ ಸಚಿವ ಸಂಪುಟ ಸಭೆ ಮುಂದೆ ಮಂಡಿಸದೆ ನೇರವಾಗಿ ರಾಜ್ಯ ಪಾಲರಿಗೆ ನೀಡುವಂತಿಲ್ಲ. ಈವರೆಗೆ ರಾಜ್ಯಪಾಲರು ಬರೆದಿರುವ ಪತ್ರಗಳಿಗೂ ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಿ ಸಭೆ ಅನುಮತಿಸಿದರೆ ಮಾತ್ರ ಮಾಹಿತಿ ಅಥವಾ ವಿವರಣೆ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ತನ್ಮೂಲಕ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ನಡೆಯುತ್ತಿದ್ದ ಗುದ್ದಾಟ ಮತ್ತೊಂದು ಹಂತಕ್ಕೆ ತಲುಪಿದೆ.
ರಾಜ್ಯಪಾಲರ ಷಡ್ಯಂತ್ರಕ್ಕೆ ನಾವು ಬಲಿಯಾಗಲ್ಲ: ಸಚಿವ ಆರ್.ಬಿ.ತಿಮ್ಮಾಪುರ
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, 'ಎಚ್.ಡಿ.ಕುಮಾರಸ್ವಾಮಿ ಮತ್ತಿತರರ ವಿರುದ್ದದ ಲೋಕಾಯುಕ್ತ ತನಿಖೆಗೆ ಅನುಮತಿ ನೀಡುವ ಕಡತಗಳು ಎಂಟು ತಿಂಗಳಿಂದ ಕಾನೂನು ಬಾಹಿರವಾಗಿ ರಾಜಭವನದಲ್ಲೇ ಇವೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದಾಗ ಈ ಮಾಹಿತಿ ಸೋರಿಕೆ ಹೇಗೆ ಆಯಿತು ಎಂದು ಸರ್ಕಾರಕ್ಕೆವಿವರಣೆ ಕೋರಿದ್ದಾರೆ. ತನಿಖೆಯಲ್ಲಿ ರಾಜಭವನದ ಸಚಿವಾಲಯದಲ್ಲೇ ಎಂಟು ತಿಂಗಳಿಂದ ಕಡತಗಳು ಇರುವುದು ಹಾಗೂ ರಾಜಭವನದ ಸಚಿವಾಲಯದಿಂದಲೇ ಸೋರಿಕೆಯಾಗಿರುವುದು ಬಯಲಾಗಿದೆ. ಹೀಗಿದ್ದರೂ ಸರ್ಕಾರ, ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಗೂಬೆ ಕೂರಿಸಲು ಯತ್ನಿಸಿದ್ದರು' ಎಂದು ಕಿಡಿಕಾರಿದ್ದಾರೆ.
ಇಂತಹ ಕಾರಣಗಳಿಗಾಗಿಯೇ ಸಚಿವ ಸಂಪುಟ ಈ ನಿರ್ಧಾರ ಮಾಡಿದೆ. ರಾಜ್ಯಪಾಲರು ಮೇಲಿಂದ ಮೇಲೆ ಒಂದು ರೀತಿಯಲ್ಲಿ ಅಸಹನೆಯ ವರ್ತನೆ ತೋರಿ ಪತ್ರ ಬರೆಯುತ್ತಿದ್ದಾರೆ. ಮಾಹಿತಿಗಳನ್ನು ತಕ್ಷಣವೇ ಕಳುಹಿಸಬೇಕು, ಶೀಘ್ರ ಕಳುಹಿಸಬೇಕು ಎಂದೆಲ್ಲಾ ಸೂಚನೆ ನೀಡುತ್ತಿದ್ದಾರೆ. ಜತೆಗೆ ವಿನಾಕಾರಣ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಹೀಗಾಗಿ ರಾಜಭವನಕ್ಕೆ ಯಾವುದೇ ಮಾಹಿತಿ ನೀಡಬೇಕಿದ್ದರೂ ಸಚಿವ ಸಂಪುಟ ಸಭೆಯ ಗಮನಕ್ಕೆ ತರುವುದು ಕಡ್ಡಾಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಮುಡಾ ಪ್ರಕರಣ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ? ಮುಂದಿರುವ ಆಯ್ಕೆಗಳೇನು?
ಅನಿವಾರ್ಯವಿದ್ದರೆ ಮಾತ್ರ ಮಾಹಿತಿ:
ರಾಜಭವನ ಹಾಗೂ ಸರ್ಕಾರದ ನಡುವಿನ ಯಾವುದೇ ಪತ್ರ ವ್ಯವಹಾರಕ್ಕೂ ಇದೇ ನಿಯಮ ಅನ್ವಯ. ಈಗಾಗಲೇ ಅವರು ಬರೆದಿರುವ ಪತ್ರಗಳಿಗೆ ಉತ್ತರ ನೀಡದಿದ್ದರೆ ಅಂತಹವುಗಳನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅಧಿಕಾರಿಗಳು ಅನುಮತಿ ಪಡೆಯಬೇಕು. ಮಾಹಿತಿ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಸಂಪುಟ ನಿರ್ಧಾರ ಮಾಡಲಿದೆ. ಅನಿವಾರ್ಯವಾಗಿದ್ದರೆ ಮಾತ್ರ ಮಾಹಿತಿ ನೀಡುತ್ತೇವೆ ಎಂದರು.
ಸಚಿವ ಸಂಪುಟ ಸಭೆಯು ನನಗೆ ಯಾವುದೇ ಸಲಹೆ ನೀಡಿಲ್ಲ ಎಂಬ ರಾಜ್ಯ ಪಾಲರ ಹೇಳಿಕೆಗೆ, ಎತ್ತರದ ಅಧಿಕಾರದಲ್ಲಿ ಇರುವವರಿಗೆ ಯಾವ ಭಾಷೆಯ ಮೂಲಕ ಬರೆಯಬೇಕಿತ್ತೋ ಆ ರೀತಿ ಬರೆದಿದ್ದೀವೆ. ಅವರು ಸಲಹೆ ನೀಡಿಲ್ಲ ಎಂದರೆ ನಾವು ಏನೂ ಹೇಳಲಾಗಲ್ಲ ಎಂದು ಸೂಚ್ಯವಾಗಿ ಹೇಳಿದರು.