
ವಿಧಾನಸಭೆ (ಜು.16) : ಸಕ್ಕರೆ ಕಾರ್ಖಾನೆಗಳಲ್ಲಿ ರೈತರು ನೀಡುವ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂಬ ದೂರುಗಳಿವೆ. ಹೀಗಾಗಿ ರಾಜ್ಯದಲ್ಲಿನ ಎಲ್ಲ 74 ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಪ್ರಶ್ನೋತ್ತರ ಕಲಾಪದ ವೇಳೆ ಸಕ್ಕರೆ ಕಾರ್ಖಾನೆಗಳಿಂದಾಗುತ್ತಿರುವ ಸಮಸ್ಯೆ ಕುರಿತಂತೆ ಕಾಂಗ್ರೆಸ್‌ನ ಭರಮಗೌಡ ಆಲಗೌಡ ಕಾಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಕ್ಕರೆ ಕಾರ್ಖಾನೆಗಳ ಕುರಿತಂತೆ ಸಾಕಷ್ಟುದೂರುಗಳು ಬರುತ್ತಿವೆ. ಸಕ್ಕರೆ ಕಾರ್ಖಾನೆಗಳಲ್ಲಿ ರೈತರು ನೀಡುವ ಕಬ್ಬಿನ ತೂಕದಲ್ಲಿ ಸಾಕಷ್ಟುವ್ಯತ್ಯಾಸ ಬರುತ್ತಿದೆ ಎಂಬ ದೂರುಗಳಿವೆ. ಅದನ್ನು ನಿವಾರಿಸಲು ಎಲ್ಲ ಕಾರ್ಖಾನೆಗಳಿಗೆ ಇಲಾಖೆ ವತಿಯಿಂದಲೇ ತೂಕದ ಯಂತ್ರಗಳ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲಿ ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಹಣಕಾಸಿನ ಲಭ್ಯತೆಯನ್ನಾಧರಿಸಿ ತೂಕದ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.
ಕಬ್ಬು ಬೆಳಗಾರರಿಗೆ ಸಿಹಿ ಸುದ್ದಿ: ಎಫ್‌ಆರ್‌ಪಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ
ಅದಕ್ಕೂ ಮುನ್ನ ಮಾತನಾಡಿದ ಭರಮಗೌಡ ಆಲಗೌಡ ಕಾಗೆ, ಕಾಗವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿರಗುಪ್ಪಿ ಶುಗರ್ ವರ್ಕ್ಸ್, ಉಗಾರ್ ಶುಗರ್ ವರ್ಕ್ಸ್, ಅಥಣಿ ಶುಗರ್ ಕಾರ್ಖಾನೆಗಳಿವೆ. ಅವುಗಳಲ್ಲಿ ಅಥಣಿ ಶುಗರ್ ಕಾರ್ಖಾನೆಯಿಂದ ಹೊರಬರುವ ಕೊಳಚೆ ನೀರನ್ನು ನೇರವಾಗಿ ಹೊಳೆಗೆ ಹರಿಸಲಾಗುತ್ತಿದೆ. ಇದರಿಂದ ಸುತ್ತಲಿನ ಗ್ರಾಮಗಳ ಅಂತರ್ಜಲವೂ ಹಾಳಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಕಾರ್ಖಾನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅದಕ್ಕುತ್ತರಿಸಿದ ಶಿವಾನಂದ ಪಾಟೀಲ್, ಉಗಾರ್ ಶುಗರ್ ವರ್ಕ್ಸ್ ಕಾರ್ಖಾನೆಯೂ ಈ ಹಿಂದೆ ಕೊಳಚೆ ನೀರು ಶುದ್ಧೀಕರಿಸದೆ ಹೊರಗೆ ಬಿಡುತ್ತಿರುವುದರ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ 3 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ. ಇದೀಗ ಅಥಣಿ ಶುಗರ್ ಕಾರ್ಖಾನೆ ವಿರುದ್ಧ ದೂರು ಬಂದಿದ್ದು, ಕೂಡಲೇ ಅಲ್ಲಿ ಪರಿಶೀಲನೆ ನಡೆಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಒಂದು ವೇಳೆ ಕೊಳಚೆ ನೀರನ್ನು ಜಲ ಮೂಲಗಳಿಗೆ ಹರಿಸುತ್ತಿರುವುದು ಕಂಡು ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಇತರ ಕಾರ್ಖಾನೆಗಳಿಗೂ ಇದು ಅನ್ವಯವಾಗಲಿದೆ ಎಂದರು.
ರೈತರ ಕಬ್ಬಿನ ಬಾಕಿ 400 ಕೋಟಿ: ಸಕ್ಕರೆ ಸಚಿವ ಶಿವಾನಂದ ಪಾಟೀಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ