ಐತಿಹಾಸಿಕ ಹಂಪಿ ನೆಲದಲ್ಲಿ ನಡೆದ ಜಿ-20 ರಾಷ್ಟ್ರಗಳ ಶೆರ್ಪಾ ಶೃಂಗಸಭೆಗೆ ವಿಧ್ಯುಕ್ತ ತೆರೆ ಬಿದ್ದಿದೆ. ಸದಸ್ಯ ರಾಷ್ಟ್ರಗಳ ಒಮ್ಮತದಿಂದ ವಿಶ್ವದ ಆರ್ಥಿಕ ಬೆಳವಣಿಗೆ ಕುರಿತು ಕರಡು ಕೂಡ ಸಿದ್ಧಗೊಂಡಿದೆ.
ಕೃಷ್ಣ ಎನ್.ಲಮಾಣಿ
ಹೊಸಪೇಟೆ (ಜು.16): ಐತಿಹಾಸಿಕ ಹಂಪಿ ನೆಲದಲ್ಲಿ ನಡೆದ ಜಿ-20 ರಾಷ್ಟ್ರಗಳ ಶೆರ್ಪಾ ಶೃಂಗಸಭೆಗೆ ವಿಧ್ಯುಕ್ತ ತೆರೆ ಬಿದ್ದಿದೆ. ಸದಸ್ಯ ರಾಷ್ಟ್ರಗಳ ಒಮ್ಮತದಿಂದ ವಿಶ್ವದ ಆರ್ಥಿಕ ಬೆಳವಣಿಗೆ ಕುರಿತು ಕರಡು ಕೂಡ ಸಿದ್ಧಗೊಂಡಿದೆ. ರಾಜಸ್ಥಾನ, ಕೇರಳ ಬಳಿಕ ಹಂಪಿಯಲ್ಲಿ ನಡೆದ ಸಭೆಯಲ್ಲಿ ದೇಶ-ವಿದೇಶದ 125 ಪ್ರತಿನಿಧಿಗಳು ಒಮ್ಮತದೊಂದಿಗೆ ಕರಡು ರಚಿಸಿದ್ದಾರೆ. ಹಲವು ಸುತ್ತಿನ ಚರ್ಚೆಗಳ ಬಳಿಕ ಸುಸ್ಥಿರ ಅಭಿವೃದ್ಧಿ, ಹಸಿರು ಆರ್ಥಿಕ ವಲಯ, ತಂತ್ರಜ್ಞಾನ, ಡಿಜಿಲೀಕರಣ, ಮಹಿಳಾ ಮುಂದಾಳತ್ವದ ಅಭಿವೃದ್ಧಿ, ಬಡ ರಾಷ್ಟ್ರಗಳಿಗೆ ನೆರವು, ಅಂತಾರಾಷ್ಟ್ರೀಯ ಶಾಂತಿ, ಭಯೋತ್ಪಾದನೆ ನಿಗ್ರಹ, ಮಾನವ ಕಳ್ಳ ಸಾಗಣೆ ತಡೆ, ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟಕ್ಕೆ ತಡೆ ಕುರಿತು ಮಹತ್ವದ ಕರಡು ಸಿದ್ಧಪಡಿಸಲಾಗಿದೆ.
undefined
ಐತಿಹಾಸಿಕ ಹಂಪಿ ಸ್ಮಾರಕಗಳ ವೈಭವ: ಹಂಪಿಯ ಐತಿಹಾಸಿಕ ಸ್ಮಾರಕಗಳು ದೇಶ-ವಿದೇಶಗಳ 125 ಪ್ರತಿನಿಧಿಗಳ ಮನಸೂರೆಗೊಂಡಿವೆ. ಮೊದಲ ಬಾರಿಗೆ ಬಂದ ಶೆರ್ಪಾಗಳು ಇದೊಂದು ಅವಿಸ್ಮರಣೀಯ ಎಂದು ಅನುಭವ ಹಂಚಿಕೊಂಡಿದ್ದಾರೆ. ಕುಟುಂಬ ಸಮೇತ ಮತ್ತೊಮ್ಮೆ ಹಂಪಿಗೆ ಭೇಟಿ ನೀಡುವ ವಾಗ್ದಾನ ಮಾಡಿದ್ದಾರೆ.
ನಮ್ಮ ಸರ್ಕಾರ ಭದ್ರವಾಗಿದೆ, ಕೊಟ್ಟಭರವಸೆ ಈಡೇರಿಸುತ್ತಿದೆ: ಸಚಿವ ಖಂಡ್ರೆ
ಹಂಪಿ ಬೈ ನೈಟ್: ಹಂಪಿಯ ಸ್ಮಾರಕಗಳನ್ನು ವಿದ್ಯುದೀಪಾಲಂಕಾರ ಮಾಡಿ, ಎದುರು ಬಸವಣ್ಣ ದೇವಾಲಯ ಮತ್ತು ವಿಜಯ ವಿಠ್ಠಲ ದೇವಾಲಯದ ಬಳಿ ನಡೆಸಿದ ಧ್ವನಿ ಮತ್ತು ಬೆಳಕು ಕಾರ್ಯಕ್ರಮಗಳು ಪ್ರತಿನಿಧಿಗಳ ಮನ ಗೆದ್ದಿದೆ. ಈ ಕಾರ್ಯಕ್ರಮ ರೂಪಿಸಿದವರಿಗೇ ಸ್ವತಃ ಭಾರತೀಯ ಶೆರ್ಪಾ ಅಮಿತಾಬ್ ಕಾಂತ್ ಥ್ಯಾಂಕ್ಸ್ ಹೇಳಿದ್ದಾರೆ. ಈ ಕಾರ್ಯಕ್ರಮ ರೂಪಿಸಿದ ಪುರಾತತ್ವ, ಪ್ರವಾಸೋದ್ಯಮ ಇಲಾಖೆಗಳು, ವಿಜಯನಗರ ಜಿಲ್ಲಾಡಳಿತ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಭಿನಂದನೆ ಸಲ್ಲಿಸುವೆ ಎಂದಿದ್ದಾರೆ.
ಬಡ ರಾಷ್ಟ್ರಗಳ ಪರ ಧ್ವನಿ: ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳಿಗೆ ಹೆಗಲು ನೀಡಿ ಅಭಿವೃದ್ಧಿಗೆ ಸಹಕಾರ ನೀಡಲು ಹಂಪಿ ಶೆರ್ಪಾ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ. ಬರೀ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪರ ಒಲವು ತೋರದೆ, ಅಭಿವೃದ್ಧಿಶೀಲ, ಬಡ ಮತ್ತು ಅಭಿವೃದ್ಧಿಪರ ರಾಷ್ಟ್ರಗಳಿಗೂ ಸುಸ್ಥಿರ ಅಭಿವೃದ್ಧಿಯ ಮಾರ್ಗದರ್ಶನ ನೀಡಿ, ಜಾಗತಿಕ ಹಿಂಜರಿತಕ್ಕೆ ಕೊನೆ ಹಾಡಲು ಹಂಪಿ ಶೆರ್ಪಾ ಸಭೆಯಲ್ಲಿ ಸುದೀರ್ಘ ಚರ್ಚಿಸಿ ಕರಡು ರೂಪಿಸಲಾಗಿದೆ.
ಮಹಾನವಮಿ ದಿಬ್ಬ, ಪುಷ್ಕರಣಿ, ಹಜಾರರಾಮ ದೇವಾಲಯ, ಕಮಲ್ ಮಹಲ್, ಗಜಶಾಲೆ, ವಿಜಯವಿಠ್ಠಲ ಮಂದಿರ, ಕಲ್ಲಿನ ರಥ, ಸಂಗೀತ ಮಂಟಪಗಳನ್ನು ವೀಕ್ಷಿಸಿದ ಪ್ರತಿನಿಧಿಗಳು, ಇದೊಂದು ಅದ್ಭುತ ಪಾರಂಪರಿಕ ಪ್ರಪಂಚ ಎಂದು ಉದ್ಗರಿಸಿದ್ದಾರೆ. ಹಂಪಿಯಲ್ಲಿ ನಡೆದ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ವಿದೇಶಿ ಪ್ರತಿನಿಧಿಗಳ ಮನಸೂರೆಗೊಂಡಿದೆ. ಹಂಪಿಯಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಪಡೆ ಸಭೆ ಮತ್ತು ಶೆರ್ಪಾಗಳ ಶೃಂಗಸಭೆ ಯಶಸ್ವಿಯಾಗಿದ್ದು, ಈ ನೆಲದ ಪರಂಪರೆ ಮೂಲಕ ಭಾರತೀಯ ಸಂಸ್ಕೃತಿಯನ್ನು ಜಗತ್ತಿನ ಎದುರು ಹಂಪಿ ಎತ್ತಿ ಹಿಡಿದಿದೆ.
ಭವಿಷ್ಯದತ್ತ ಚರ್ಚೆ: ಮುಕ್ತ ಜಾಗತಿಕ ವಹಿವಾಟು, ಸುಸ್ಥಿರ ಅಭಿವೃದ್ಧಿ, ಮುಂದಿನ ಪೀಳಿಗೆಗಾಗಿ ಆಧುನಿಕ ನಗರಿಗಳ ನಿರ್ಮಾಣ, ಜಾಗತಿಕ ಆರ್ಥಿಕ ಸಹಕಾರ, ಜಾಗತಿಕ ವಹಿವಾಟು, ಅಂತಾರಾಷ್ಟ್ರೀಯ ಕಾನೂನು, ಭ್ರಷ್ಟಾಚಾರ ಹೋಗಲಾಡಿಸಲು ಕರಡು ಸಿದ್ಧಪಡಿಸಲಾಗಿದೆ. ಹಣಕಾಸು ವಹಿವಾಟಿಗೆ ಕ್ರಿಪ್ಟೋ ಕರೆನ್ಸಿ ಕುರಿತು ರೂಪುರೇಷೆ ಸಿದ್ಧಪಡಿಸಲಾಗಿದೆ.
ದಿಲ್ಲಿಯಲ್ಲಿ ಘೋಷಣೆ: ದಿಲ್ಲಿಯಲ್ಲಿ ನಡೆಯಲಿರುವ ಶೃಂಗಸಭೆಗೆ ಕರಡು ಸಿದ್ಧ ಮಾಡಲಾಗಿದೆ. ಹಂಪಿ ನೆಲದಲ್ಲಿ ವಿಶ್ವದ ಆರ್ಥಿಕ ಬೆಳವಣಿಗೆ ಕುರಿತು ಚರ್ಚೆ ನಡೆದು, ಅಂತಿಮ ರೂಪ ನೀಡಲಾಗಿದೆ. ಆಯಾ ದೇಶದ ಪ್ರಧಾನಿ, ರಾಷ್ಟ್ರಪತಿಗಳು ದಿಲ್ಲಿ ಶೃಂಗಸಭೆಯಲ್ಲಿ ಭಾಗವಹಿಸಿ ಘೋಷಣೆ ಮಾಡಲಿದ್ದಾರೆ.
ಕುಡಿಯೋದಕ್ಕೇ ನೀರಿಲ್ಲ, ತ.ನಾಡಿಗೆ ಕೊಡೋದು ಹೇಗೆ?: ಸಚಿವ ಚಲುವರಾಯಸ್ವಾಮಿ
ಹಂಪಿಗೆ ಈ ಹಿಂದೆ 20 ಬಾರಿ ಭೇಟಿ ನೀಡಿರುವೆ. ಆದರೆ ಈ ಬಾರಿ ಪಡೆದ ಅನುಭವ ಅಭೂತಪೂರ್ವವಾದುದು. ವಿಶ್ವ ಪಾರಂಪರಿಕ ಸ್ಥಳಗಳಾದ ಅಂಕೂರ್‌ವಾಟ್ ಸೇರಿ ಇತರ ಯಾವುದೇ ಪ್ರವಾಸಿ ತಾಣಗಳಿಗಿಂತಲೂ ಹಂಪಿ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂದು ಜಿ-20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಹಂಪಿಯ ಐತಿಹಾಸಿಕತೆ ಬಗ್ಗೆ ಕೊಂಡಾಡಿದ್ದಾರೆ. ಇದು ನನಗೆ ಅತೀವ ಸಂತಸ ತಂದಿದೆ.
- ಅಮಿತಾಬ್ ಕಾಂತ್, ಭಾರತೀಯ ಶೆರ್ಪಾ