ವಿಮಾ ಕಂಪನಿಗಳು ಬೆಳೆಹಾನಿ ಸಮೀಕ್ಷೆಯಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಹೀಗಾಗಿ ಅಧಿಕಾರಿಗಳು ಡ್ರೋನ್ ತಂತ್ರಜ್ಞಾನ ಬಳಸಿ ಬೆಳೆಹಾನಿ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಿದ ಸಂತೋಷ್ ಲಾಡ್
ಧಾರವಾಡ(ಜು.02): ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದ್ದು, ಶೇ.10ರಷ್ಟುಮಾತ್ರ ಬಿತ್ತನೆ ಆಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬರ ಘೋಷಣೆ ಬಗ್ಗೆ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿದೆ. ಈ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ವಿಮಾ ಕಂಪನಿಗಳು ಬೆಳೆಹಾನಿ ಸಮೀಕ್ಷೆಯಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಹೀಗಾಗಿ ಅಧಿಕಾರಿಗಳು ಡ್ರೋನ್ ತಂತ್ರಜ್ಞಾನ ಬಳಸಿ ಬೆಳೆಹಾನಿ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಿದರು.
ರೈತರು ಆತಂಕ ಪಡುವ ಅಗತ್ಯವಿಲ್ಲ: ಸಚಿವ
ಜತೆಗೆ ಡ್ರೋನ್ ಮೂಲಕ ಬೆಳೆಹಾನಿ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ ಅವರೊಂದಿಗೆ ಚರ್ಚಿಸಿ, ಈ ಬಗ್ಗೆ ಚಿಂತನೆ ನಡೆಸುವಂತೆ ಸರ್ಕಾರದ ಗಮನ ಸೆಳೆಯುವುದಾಗಿ ಲಾಡ್ ಹೇಳಿದರು.
ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು, ನದಿ ಸೇರಲಿರುವ ಜಿಲ್ಲೆಯ ಬೆಣ್ಣೆಹಳ್ಳದ 3 ಟಿಎಂಸಿ ಹಾಗೂ ಬೇಡ್ತಿ ಹಳ್ಳದ 7 ಟಿಎಂಸಿ ನೀರು ಸದ್ಬಳಕೆ ಮಾಡುವ ಬಗ್ಗೆ ಚಿಂತನೆ ನಡೆಸಬೇಕಿದೆ. ಈ ಬಗ್ಗೆ ಸರ್ಕಾರ ಸಭೆ ನಡೆಸಿದ್ದು, ನೀರು ಸದ್ಬಳಕೆ ಮಾಡುವ ಕುರಿತು ಪ್ರಯತ್ನ ನಡೆಯಲಿದೆ ಎಂದು ಸಂತೋಷ್ ಲಾಡ್ ತಿಳಿಸಿದರು.