ಹೈಕೋರ್ಟ್ ಅನುಮತಿಸುತ್ತಿದ್ದಂತೆ ಬಿಬಿಎಂಪಿ ವಾರ್ಡ್ ಮರು ವಿಂಗಡಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಬಿಬಿಎಂಪಿ ಹೊರಭಾಗದಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಇಳಿಕೆ ಮಾಡಲು ನಿರ್ಧರಿಸಿದೆ. ಹಾಲಿ 243 ವಾರ್ಡ್‌ಗಳ ಸಂಖ್ಯೆಯು 225ಕ್ಕೆ ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗಿರೀಶ್ ಗರಗ
ಬೆಂಗಳೂರು (ಜು.23) : ಹೈಕೋರ್ಟ್ ಅನುಮತಿಸುತ್ತಿದ್ದಂತೆ ಬಿಬಿಎಂಪಿ ವಾರ್ಡ್ ಮರು ವಿಂಗಡಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಬಿಬಿಎಂಪಿ ಹೊರಭಾಗದಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಇಳಿಕೆ ಮಾಡಲು ನಿರ್ಧರಿಸಿದೆ. ಹಾಲಿ 243 ವಾರ್ಡ್‌ಗಳ ಸಂಖ್ಯೆಯು 225ಕ್ಕೆ ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹಿಂದಿನ ಬಿಜೆಪಿ ಸರ್ಕಾರವು 198 ಇದ್ದ ಬಿಬಿಎಂಪಿ ವಾರ್ಡ್‌ಗಳನ್ನು ಜನಸಂಖ್ಯೆ ಆಧಾರವಾಗಿಟ್ಟುಕೊಂಡು 243 ವಾರ್ಡ್‌ಗಳಿಗೆ ಹೆಚ್ಚಿಸಿತ್ತು. ಈ ಕ್ರಮದಿಂದಾಗಿ ಬಿಬಿಎಂಪಿ ಹೊರಭಾಗದಲ್ಲಿನ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿತ್ತು. ಇದನ್ನು ಕಾಂಗ್ರೆಸ್ ಆಗ ಆಕ್ಷೇಪಿಸಿತ್ತು. ವಾರ್ಡ್ ಮರುವಿಂಗಡಣೆ ಸಮರ್ಪಕವಾಗಿಲ್ಲ ಎಂದು ಬಿಜೆಪಿಗೆ ಅನುಕೂಲವಾಗುವಂತೆ ಮಾಡಲಾಗಿದೆ ಎಂದೂ ಆರೋಪಿಸಲಾಗಿತ್ತು. ಇದೀಗ ಬಿಜೆಪಿ ಶಾಸಕರಿರುವ ಕ್ಷೇತ್ರ ವ್ಯಾಪ್ತಿಯಲ್ಲಿನ ವಾರ್ಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ. ಅದರಂತೆ ಬಿಜೆಪಿ ಶಾಸಕರಿರುವ 8 ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಇಳಿಕೆ ಮಾಡಿ, 225 ವಾರ್ಡ್‌ಗಳನ್ನು ರಚಿಸುವ ಕಾರ್ಯಕ್ಕೆ ಮುಂದಾಗಲಾಗಿದೆ.
ಬಿಬಿಎಂಪಿ ಚುನಾವಣೆ ಮಾಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್
8 ಕ್ಷೇತ್ರಗಳಲ್ಲಿ 98 ವಾರ್ಡ್‌ಗಳು:
ಬಿಬಿಎಂಪಿ(BBMP Wards) ವ್ಯಾಪ್ತಿಯಲ್ಲಿ 27 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಬಿಜೆಪಿ ಸರ್ಕಾರ ನಡೆಸಿದ್ದ ವಾರ್ಡ್ ಪುನರ್ ವಿಂಗಡಣೆ ವೇಳೆ ಬಿಜೆಪಿ ಶಾಸಕರಿರುವ 8 ಕ್ಷೇತ್ರಗಳಲ್ಲಿಯೇ 98 ವಾರ್ಡ್‌ಗಳನ್ನು ರಚಿಸಲಾಗಿತ್ತು. ಉಳಿದ 19 ಕ್ಷೇತ್ರಗಳಲ್ಲಿ 145 ವಾರ್ಡ್‌ಗಳು ಇವೆ. ಇದು ಆಗ ಕಾಂಗ್ರೆಸ್‌ನ ಅಸಮಾಧಾನಕ್ಕೆ ಕಾರಣವಾಗಿತ್ತು. ಈಗ ತಾನೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈ 98 ವಾರ್ಡ್‌ಗಳಲ್ಲಿ ಕನಿಷ್ಠ 15 ವಾರ್ಡ್‌ಗಳನ್ನು ಕಡಿಮೆ ಮಾಡಲು ಉದ್ದೇಶಿಸಿದೆ. ಉಳಿದ ಕ್ಷೇತ್ರಗಳಲ್ಲಿ 3 ವಾರ್ಡ್‌ಗಳನ್ನು ಕಡಿತಗೊಳಿಸಲಾಗುತ್ತದೆ. ಈ ಬಗ್ಗೆ ವಾರ್ಡ್ ಮರುವಿಂಗಡಣೆಗಾಗಿ ರಚಿಸಲಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ್ ಸಮಿತಿಗೂ ಸೂಚಿಸಲಾಗಿದ್ದು, ವಾರ್ಡ್ ಗಡಿ ನಿರ್ಧಾರದ ಸಂದರ್ಭದಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆ ಮಾಡುವಂತೆಯೂ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಜನಸಂಖ್ಯೆ ಲೆಕ್ಕ ಹಾಕಲು ಕ್ರಮ
ವಾರ್ಡ್ ಮರುವಿಂಗಡಣೆಯನ್ನು ಜನಸಂಖ್ಯೆ ಆಧಾರದಲ್ಲಿ ಮಾಡಲಾಗಿದೆ. 35 ಸಾವಿರ ಜನರ ಸರಾಸರಿಯನ್ನಿಟ್ಟುಕೊಂಡು ವಾರ್ಡ್‌ಗಳನ್ನು ರಚಿಸಲಾಗಿದೆ. ಆದರೆ, 20ಕ್ಕೂ ಹೆಚ್ಚಿನ ವಾರ್ಡ್‌ಗಳ ಜನಸಂಖ್ಯೆ 31 ಸಾವಿರಕ್ಕಿಂತ ಕಡಿಮೆಯಿದೆ. ಅಂತಹ ವಾರ್ಡ್‌ಗಳು ಬಿಜೆಪಿ ಶಾಸಕರಿರುವ ಕ್ಷೇತ್ರ ವ್ಯಾಪ್ತಿಯಲ್ಲಿದ್ದರೆ, ಅದಕ್ಕೆ ಬೇರೆ ವಾರ್ಡ್‌ನ ಭೂಭಾಗ ಸೇರಿಸಿ ವಾರ್ಡ್‌ಗಳ ಸಂಖ್ಯೆ ಇಳಿಕೆ ಮಾಡುವ ಯೋಚನೆಯನ್ನೂ ಮಾಡಲಾಗಿದೆ.
ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಲು ಆಯೋಗ ರಚಿಸಿದ ಸರ್ಕಾರ
ಕ್ಷೇತ್ರ ಮಟ್ಟದಲ್ಲಿ ಆಪರೇಷನ್ ಹಸ್ತ
ಶತಾಯಗತಾಯ ಬಿಬಿಎಂಪಿಯ ಚುಕ್ಕಾಣಿ ಹಿಡಿಯಲೇಬೇಕೆಂದು ಕಾಂಗ್ರೆಸ್ ಪಣತೊಟ್ಟಿದೆ. ಹೀಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಕುರಿತಂತೆ ಜನರಿಗೆ ತಿಳಿ ಹೇಳುವಂತೆ ವಾರ್ಡ್ ಮಟ್ಟದ ನಾಯಕರಿಗೆ ಸೂಚಿಸಲಾಗಿದೆ. ಅದರ ಜತೆಗೆ ಬಿಜೆಪಿಯಲ್ಲಿ ಪ್ರಭಾವಿಯಾಗಿರುವ ಹಾಗೂ ಮಾಜಿ ಕಾರ್ಪೋರೇಟರ್‌ಗಳನ್ನು ಕಾಂಗ್ರೆಸ್‌ನತ್ತ ಸೆಳೆಯಲಾಗುತ್ತಿದೆ. ಅದರ ಆರಂಭಿಕ ಹಂತವಾಗಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿಯ ಮಾಜಿ ಕಾರ್ಪೋರೇಟರ್‌ಗಳು ಹಾಗೂ ನಾಯಕರು ಸೇರಿ 7 ಮಂದಿಯನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಇದಾದ ನಂತರ ಬಿಜೆಪಿ ಶಾಸಕರಿರುವ ಇತರ ಕ್ಷೇತ್ರಗಳಲ್ಲಿ ಆಪರೇಷನ್ ಹಸ್ತ ಮಾಡಲು ನಿರ್ಧರಿಸಲಾಗಿದೆ.