ಸರ್ಕಾರಿ ಪಿಯು ಮಕ್ಕಳಿಗೆ ಸಿಇಟಿ, ನೀಟ್‌ ತರಬೇತಿ

By Web DeskFirst Published Sep 4, 2018, 10:46 AM IST
Highlights

ಲಕ್ಷಗಟ್ಟಲೆ ಫೀ ನೀಡಿ ಖಾಸಗೀ ಕಾಲೇಜುಗಳಿಗೆ ಸೇರಲಾಗದೆ, ಸರಕಾರಿ ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ನೀಟ್ ಹಾಗೂ ಸಿಇಟಿಯಂಥ ಪ್ರವೇಶ ಪರೀಕ್ಷೆಗಳಿಗೆ ಸರಕಾರವೇ ತರಬೇತಿ ನೀಡಲಿದೆ.

 ಬೆಂಗಳೂರು: ಪದವಿಪೂರ್ವ ತರಗತಿಗಳ ಎಂಜಿನಿಯರಿಂಗ್‌, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ‘ಜ್ಞಾನ ತರಂಗ’ ಎಂಬ ತರಬೇತಿ ಮೂಲಕ ಶಿಕ್ಷಣ ಇಲಾಖೆಯು ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹಯೋಗದಲ್ಲಿ ‘ಜ್ಞಾನ ತರಂಗ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ), ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಮತ್ತು ಜಾಯಿಂಟ್‌ ಎಂಟ್ರೆನ್ಸ್‌ ಎಕ್ಸಾಂ(ಜೆಇಇ) ನಂತಹ ಪ್ರವೇಶ ಪರೀಕ್ಷೆಗಳಿಗಾಗಿ ಆರಂಭದಿಂದಲೇ ತಯಾರಿ ಮಾಡಲಾಗುತ್ತಿದೆ. ರಾಜ್ಯದ 1,200 ಸರ್ಕಾರಿ ಕಾಲೇಜುಗಳ ಪೈಕಿ 250 ವಿಜ್ಞಾನ ವಿಷಯ ಬೋಧನೆ ಮಾಡುತ್ತಿರುವ ಕಾಲೇಜುಗಳಲ್ಲಿ ‘ಜ್ಞಾನ ತರಂಗ’ ಬೋಧನೆ ಮಾಡಲಾಗುತ್ತಿದೆ.

ಟೆಕ್ನಾಲಜಿ ಅಸಿಸ್ಟೆಂಡ್‌ ಲರ್ನಿಂಗ್‌ ಪ್ರೋಗ್ರಾಂ (ಟಿಎಎಲ್‌ಪಿ) ಮೂಲಕ ಸಂಪನ್ಮೂಲ ವ್ಯಕ್ತಿಯಿಂದ ವಿಜ್ಞಾನ ವಿಷಯಗಳ ಬೋಧನೆ ಮಾಡಿಸಿ ಅದನ್ನು ವಿಡಿಯೋ ರೆಕಾರ್ಡ್‌ ಮಾಡಿ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ. ಕಾಲೇಜುಗಳಲ್ಲಿ ಲ್ಯಾಪ್‌ಟಾಪ್‌ ಅಥವಾ ಪ್ರೊಜೆಕ್ಟರ್‌ ಮೂಲಕ ವಿದ್ಯಾರ್ಥಿಗಳಿಗಾಗಿ ಪ್ರಸಾರ ಮಾಡಲಾಗುತ್ತಿದೆ.

ವಾರದಲ್ಲಿ ನಾಲ್ಕು ದಿನ ತರಬೇತಿ ಕಾರ್ಯಕ್ರಮ ಪ್ರಸಾರವಾಗಲಿದೆ. ಮಂಗಳವಾರ ಭೌತಶಾಸ್ತ್ರ, ಬುಧವಾರ ರಸಾಯನಶಾಸ್ತ್ರ, ಗುರುವಾರ ಗಣಿತ, ಶುಕ್ರವಾರ ಜೀವಶಾಸ್ತ್ರ ವಿಷಯವನ್ನು ಬೆಳಗ್ಗೆ 7.30ರಿಂದ 9 ಗಂಟೆಯವರೆಗೆ ಪ್ರಸಾರ ಮಾಡಲಿದೆ. ಶನಿವಾರ 60 ಪ್ರಶ್ನೆಗಳ ಪರೀಕ್ಷೆ ನಡೆಸಲಾಗುತ್ತದೆ ಎಂದು ಪಿಯು ಇಲಾಖೆ ನಿರ್ದೇಶಕಿ ಸಿ. ಶಿಖಾ ತಿಳಿಸಿದ್ದಾರೆ.

ತರಬೇತಿ ಉದ್ದೇಶವೇನು?

- ಸರ್ಕಾರಿ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸುವುದು

- ಸ್ಪರ್ಧಾತ್ಮಕ ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧಿಸಲು ಅನುಕೂಲ ಮಾಡಿಕೊಡುವುದು

- ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ಹೆಚ್ಚಿಸುವುದು

- ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವುದು

click me!