ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾದಾಗಿಂದಲೂ, ಈ ಸರಕಾರ ಶೀಘ್ರವೇ ಉರುಳಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ನನ್ನನ್ನು ಮುಂದಿನ ಸಿಎಂ ಎಂದು ಕರೆಯಬೇಡಿ, ಎಂದು ಯಡಿಯೂರಪ್ಪ ಕಾರ್ಯಕರ್ತರನ್ನು ಮನವಿ ಮಾಡಿಕೊಂಡಿದ್ದ್ಯಾಕೆ?
ಬಾಗಲಕೋಟೆ/ಜಮಖಂಡಿ: ನಾನು ಶ್ರಾವಣದ ಬಳಿಕ ಸಿಎಂ ಆಗುವ ಸಾಧ್ಯತೆ ಇದ್ದು ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಎಂದು ಶನಿವಾರವಷ್ಟೇ ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದೀಗ, ನನ್ನನು ಮುಂದಿನ ಮುಖ್ಯಮಂತ್ರಿ ಎಂದು ಹೇಳಬೇಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಮುಂದಿನ ಮುಖ್ಯಮಂತ್ರಿ ಆಗಲು ಯಡಿಯೂರಪ್ಪ ಹಗಲುಗನಸು ಕಾಣುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಯಾಗಿ, ಹಗಲುಕನಸು ಕಾಣುತ್ತಿರುವುದು ನಾನೋ ಇಲ್ಲಾ, ಸಿದ್ದರಾಮಯ್ಯ ಅವರೋ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ ಎಂದು ತಿರುಗೇಟು ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಬಿಜೆಪಿ ಸಮಾವೇಶ ಮತ್ತು ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಬಹು ಬೇಗ ರಾಜಕೀಯ ಬದಲಾವಣೆ ಆಗುವ ಸಾಧ್ಯತೆ ಇದೆ. ನನ್ನ ಪ್ರಕಾರ ಈ ಸರ್ಕಾರ ಬಹಳ ದಿನ ಉಳಿಯೋದಿಲ್ಲ. ಇದನ್ನ ನಾನು ಹೇಳುತ್ತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರೇ ಹೇಳುತ್ತಿದ್ದಾರೆ ಎಂದರು.
ತುಘಲಕ್ ಸರ್ಕಾರ:
ರಾಜ್ಯದಲ್ಲಿರುವ ದೋಸ್ತಿ ಸರ್ಕಾರ ತುಘಲಕ್ ಸರ್ಕಾರವಾಗಿದ್ದು ಭ್ರಷ್ಟಾಚಾರ ತಾಂಡವಾಡುತ್ತಿದೆ. ಸರ್ಕಾರ ಇದ್ದೂ ಸತ್ತಂತಾಗಿದ್ದು, ಬರಿ ಲೂಟಿ ಹೊಡೆಯುವ ಕೆಲಸ ನಡೆದಿದೆ. ಸರ್ಕಾರಿ ನೌಕರರಿಗೆ ವೇತನ ನೀಡುವುದು ಮತ್ತು ವರ್ಗಾವಣೆ ದಂಧೆ ಬಿಟ್ಟರೆ ಸರ್ಕಾರದಲ್ಲಿ ಬೇರೆ ಏನೂ ನಡೆಯುತ್ತಿಲ್ಲ. ರಾಜ್ಯದಲ್ಲಿ ನಾನಾ ಕಾಮಗಾರಿಗಳನ್ನು ಮಾಡಿರುವ ಗುತ್ತಿಗೆದಾರರ 10 ಸಾವಿರ ಕೋಟಿ ರು. ಬಿಲ್ ಪಾವತಿ ಮಾಡಲಾಗದ ಸ್ಥಿತಿಯಲ್ಲಿದೆ ಎಂದು ಯಡಿಯೂರಪ್ಪಆಪಾದಿಸಿದರು.
ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿಯಲ್ಲಿ ಯಾರೂಬ್ಬರಲ್ಲೂ ಸಮನ್ವಯವಿಲ್ಲ. ಸಿದ್ದರಾಮಯ್ಯ, ಡಾ.ಪರಮೇಶ್ವರ, ಡಿಕೆಶಿ ಹಾಗೂ ಕುಮಾರಸ್ವಾಮಿ ಅವರು ಪ್ರತಿನಿತ್ಯ ನೀಡುತ್ತಿರುವ ವ್ಯತಿರಿಕ್ತ ಹೇಳಿಕೆಗಳು ಜನಸಾಮಾನ್ಯರಿಗೆ ಬೇಸರ ತಂದಿವೆ ಎಂದರು ಅಭಿಪ್ರಾಯಪಟ್ಟರು.
ಉತ್ತರ ಕರ್ನಾಟಕ ನಿರ್ಲಕ್ಷ್ಯ:
ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದು, ಈ ಭಾಗದ ಹಲವಾರು ತಾಲೂಕುಗಳು ಬರಗಾಲದಿಂದ ತತ್ತರಿಸಿದ್ದರೂ ಅಲ್ಲಿನ ಸ್ಥಿತಿಗತಿ ವೀಕ್ಷಿಸಿ ರೈತರ ಬಗ್ಗೆ ಕಾಳಜಿ ವಹಿಸುವ ಎಳ್ಳಷ್ಟುಚಿಂತೆ ಅವರಿಗಿಲ್ಲ. ಕೇವಲ ಕುರ್ಚಿಗೆ ಅಂಟಿಕೊಂಡಿದ್ದಾರೆ. ನೂರು ದಿನ ಕಳೆದರೂ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ದಿನವಾದರೂ ಸಿಎಂ ಕುಮಾರಸ್ವಾಮಿ ಪ್ರವಾಸ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಇದೇವೇಳೆ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೊಪ್ಪಳದಿಂದ ಸ್ಪರ್ಧೆ ವಿಚಾರ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಸಿದ್ದರಾಮಯ್ಯ ಎಲ್ಲಿಯಾದರೂ ನಿಲ್ಲಲಿ. ನಮಗೇನೂ ವ್ಯತ್ಯಾಸ ಆಗುವುದಿಲ್ಲ ಎಂದರು.
ಕೇಂದ್ರ ಮಾಜಿ ಸಚಿವ, ವಿಜಯಪುರ ಶಾಸಕ ಬಸವಗೌಡ ಪಾಟೀಲ ಯತ್ನಾಳ ಮಾತನಾಡಿ, ಕಾಂಗ್ರೆಸ್‌ನ ಬಚ್ಚಾ ರಾಹುಲ್ ಗಾಂಧಿಯನ್ನು ನಂಬಿ ಸಿಎಂ ಕುಮಾರಸ್ವಾಮಿ ಶೀಘ್ರದಲ್ಲೇ ಮುಳುಗಲಿದ್ದು, ಕಾಂಗ್ರೆಸ್‌ನರನ್ನು ನಂಬಿದ ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಇನ್ನು ಮುಂದೆ ಭವಿಷ್ಯವಿಲ್ಲ ಎಂದು ಹೇಳಿದರು.