
ಬೆಂಗಳೂರು(ಆ.14): ಕಳೆದ ತಿಂಗಳು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದ ‘ನೂತನ ಕೈಗಾರಿಕಾ ನೀತಿ 2020-25’ಕ್ಕೆ ರಾಜ್ಯ ಸರ್ಕಾರವು ಗುರುವಾರ ಜಾರಿಗೊಳಿಸಿ ಅಧಿಕೃತವಾಗಿ ಆದೇಶಿಸಿದೆ.
ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ ಐದು ಲಕ್ಷ ಕೋಟಿ ರು. ಬಂಡವಾಳ ಆಕರ್ಷಿಸುವುದು, 20 ಲಕ್ಷ ಮಂದಿಗೆ ಉದ್ಯೋಗಾವಕಾಶ ನೀಡಿಕೆ, ಎರಡು ಮತ್ತು ಮೂರನೇ ಹಂತದ ನಗರದಲ್ಲಿ ಕೈಗಾರಿಕೆಗಳಿಗೆ ಒತ್ತು ನೀಡುವುದು ಸೇರಿದಂತೆ ಸಣ್ಣ ಕೈಗಾರಿಕೆಗಳಿಗೆ ಸುಂಕ, ತೆರಿಗೆ ರಿಯಾಯಿತಿ, ವಿನಾಯತಿ ನೀಡುವುದು ನೂತನ ನೀತಿಯಲ್ಲಿದೆ.
ಶೇ.100 ರಷ್ಟು ಗ್ರೂಪ್ ಡಿ ಕಾರ್ಮಿಕರಿಗೆ ಉದ್ಯೋಗ, ಶೇ.70 ರಷ್ಟು ಕನ್ನಡಿಗರಿಗೆ ಒಟ್ಟಾರೆ ಆಧಾರದ ಮೇಲೆ ಉದ್ಯೋಗ ಒದಗಿಸುವುದು, ವಾರ್ಷಿಕ ವಹಿವಾಟಿನ ಮೇಲೆ ಪ್ರೋತ್ಸಾಹ ನೀಡಿಕೆ, ಎಂಎಸ್‌ಎಂಇಗೆ ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕದಲ್ಲಿ ರಿಯಾಯಿತಿ ಮತ್ತು ಭೂ ಪರಿವರ್ತನಾ ಶುಲ್ಕ ಮರುಪಾವತಿ ಸೇರಿದಂತೆ ಹಲವು ಅಂಶಗಳನ್ನು ನೂತನ ನೀತಿಯಲ್ಲಿ ಸೇರಿಸಲಾಗಿದೆ.
ಹೊಸ ಕೈಗಾರಿಕಾ ನೀತಿಗೆ ಅಸ್ತು: 5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ
ರಾಜ್ಯವು ಸುಧಾರಿತ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ನಾಯಕನಾಗಲು ಮತ್ತು ನಾವೀನ್ಯತೆ, ಸಮತೋಲಿತ ಹಾಗೂ ಸುಸ್ಥಿರ ಅಭಿವೃದ್ಧಿಗೊಳಿಸುವುದು ಪ್ರಮುಖ ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ ಸರಕುಗಳ ರಫ್ತಿನಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದ್ದು, ಮುಂದಿನ ಐದು ವರ್ಷಗಳಲ್ಲಿ ಅದನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ಯುವುದು, ಕೈಗಾರಿಕಾ ಅಭಿವೃದ್ಧಿ ವಾರ್ಷಿಕ ಶೇ.10 ರಷ್ಟು ಇರುವಂತೆ ನೋಡಿಕೊಳ್ಳುವುದು ಪ್ರಮುಖ ಉದ್ದೇಶವಾಗಿದೆ. ಬೆಂಗಳೂರಿನಿಂದ ಹೊರಗಡೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ವಿಸ್ತರಣೆ ಮಾಡುವ ಧ್ಯೇಯವನ್ನು ಹೊಂದಲಾಗಿದೆ. ಕೈಗಾರಿಕೆ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ತೇಜಿಸಲಾಗುತ್ತಿದೆ.
ಎಂಎಸ್‌ಎಂಇಗಳಿಗೆ ಶ್ರೇಷ್ಠತಾ ಕೇಂದ್ರ, ಕಚ್ಚಾ ವಸ್ತು ಪೂರೈಕೆದಾರರು, ಮಾರುಕಟ್ಟೆಪ್ರವೇಶಾವಕಾಶ ಮತ್ತು ಪ್ರಮಾಣೀಕರಣಕ್ಕಾಗಿ ಆನ್‌ಲೈನ್ ತಂತ್ರಜ್ಞಾನ ವೇದಿಕೆಯನ್ನು ವಿನ್ಯಾಸಗೊಳಿಸುವುದು ಹಾಗೂ ಸಾಲದ ಬಳಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕೆಐಎಡಿಬಿಯು ತನ್ನ ಕೈಗಾರಿಕಾ ಪ್ರದೇಶದಲ್ಲಿ ಎಂಎಸ್‌ಎಂಇಗಳಿಗಾಗಿ ಕನಿಷ್ಠ ಶೇ.30ರಷ್ಟುಹಂಚಿಕೆಯ ಜಮೀನನ್ನು ಮೀಸಲಿಡಲಾಗುವುದು. ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆದಾರರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶವನ್ನು ಹೊಂದಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ