ಯಾದಗಿರಿ ಹಾಗೂ ಕಲಬುರಗಿಯಲ್ಲಷ್ಟೇ ಅಲ್ಲ, ರಾಜ್ಯದ ಹಲವೆಡೆಯೂ ಅಕ್ರಮಗಳು ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಒಂದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಲಿ ಎಂಬ ಕಾರಣಕ್ಕೆ ಸರ್ಕಾರ ಸಿಐಡಿಗೆ ತನಿಖೆಯ ಹೊಣೆ ವಹಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಆನಂದ್ ಎಂ. ಸೌದಿ
ಯಾದಗಿರಿ(ನ.07): ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದಿಂದ ಅ.28ರಂದು ನಡೆದಿದ್ದ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸುವ ಚಿಂತನೆ ನಡೆಸಿದೆ.
ಯಾದಗಿರಿ ಹಾಗೂ ಕಲಬುರಗಿಯಲ್ಲಷ್ಟೇ ಅಲ್ಲ, ರಾಜ್ಯದ ಹಲವೆಡೆಯೂ ಅಕ್ರಮಗಳು ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಒಂದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಲಿ ಎಂಬ ಕಾರಣಕ್ಕೆ ಸರ್ಕಾರ ಸಿಐಡಿಗೆ ತನಿಖೆಯ ಹೊಣೆ ವಹಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ
undefined
ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಅ.28ರ ಬೆಳಗ್ಗೆ ನಡೆದಿದ್ದ ಪರೀಕ್ಷೆಯಲ್ಲಿ ಬ್ಲೂಟೂತ್ ಅಕ್ರಮ ನಡೆದಿತ್ತು. ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆ ನಡೆದಂತೆ ಇಲ್ಲೂ ಅದೇ ತೆರನಾದ ನಕಲು ಅಕ್ರಮ ಪತ್ತೆಯಾದ್ದರಿಂದ ಕಲಬುರಗಿ ಮತ್ತು ಯಾದಗಿರಿಯಲ್ಲಿ 26ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು.
ಯಾದಗಿರಿ: ಇಂದು ನಡೆದ ಕೆಪಿಎಸ್ಸಿ ಗ್ರೂಪ್ 'ಸಿ' 2 ಪತ್ರಿಕೆಗಳ ಪರೀಕ್ಷೆಗೆ 864 ಅಭ್ಯರ್ಥಿಗಳು ಗೈರು!
ಈ ಪರೀಕ್ಷಾ ಅಕ್ರಮ ಕೇವಲ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಷ್ಟೇ ಅಲ್ಲ ನೆರೆಯ ವಿಜಯಪುರ, ದೂರದ ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ ಸೇರಿ ಇತರೆಡೆಯೂ ನಡೆದ ಬಗ್ಗೆ ಆರೋಪಗಳು ನಂತರದಲ್ಲಿ ಕೇಳಿ ಬಂದಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ, ಆರೋಪಿ ಅಭ್ಯರ್ಥಿಯೊಬ್ಬನ ಮೊಬೈಲ್‌ಗೆ ವಾಟ್ಸಪ್ ಮೂಲಕ ಬಂದ ಉತ್ತರಗಳು ಹುಬ್ಬಳ್ಳಿಯಿಂದ ರವಾನೆಯಾಗಿದ್ದವು ಎನ್ನುವುದು ವಿಚಾರಣೆ ವೇಳೆ ಪೊಲೀಸರಿಗೆ ಪತ್ತೆಯಾಗಿತ್ತು. ಜತೆಗೆ, ಹುಬ್ಬಳ್ಳಿಯ ಕೇಂದ್ರದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಯೊಬ್ಬನ ಓಎಂಆರ್ ಶೀಟ್, ಹಾಲ್ ಟಿಕೆಟ್ ಹಾಗೂ ಪ್ರಶ್ನೆ ಪತ್ರಿಕೆ ಫೋಟೋ ಸಹ ಬಹಿರಂಗವಾಗಿದ್ದರಿಂದ ಎಲ್ಲೆಡೆ ಪ್ರಶ್ನೆಗಳ ಸೋರಿಕೆಯಾಗಿರಬಹುದಾದ ಅನುಮಾನ ದಟ್ಟವಾಗಿ ವ್ಯಕ್ತವಾಗಿತ್ತು.
ಅಕ್ರಮ ನಡೆಸಲು ಒಬ್ಬೊಬ್ಬರಿಂದ 8 ರಿಂದ 10 ಲಕ್ಷ ರು.ಗಳವರೆಗೆ ಹಣ ಪಡೆಯಲಾಗಿದ್ದು, ಪಿಎಸ್‌ಐ ಅಕ್ರಮದ ಪ್ರಮುಖ ಆರೋಪಿ ಕಲಬುರಗಿಯ ಅಫಜಲ್ಪುರದ ಆರ್.ಡಿ.ಪಾಟೀಲ್ ನಂಟು ಇಲ್ಲೂ ಇರುವುದನ್ನು ಬಂಧಿತರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ, ಸಿಐಡಿ ತನಿಖೆ ಅಗತ್ಯ ಅನ್ನುವ ಆಗ್ರಹಗಳು ಕೇಳಿಬಂದಿದ್ದವು.
ಬ್ಲೂಟೂತ್ ಎಫೆಕ್ಟ್: ಖಾಕಿ ಕಾವಲಿನಲ್ಲಿ ಕೆಪಿಎಸ್ಸಿ ಪರೀಕ್ಷೆ..!
ಸಿಐಡಿ ಮೊರೆ ಹೋದ ಪೊಲೀಸರು:
ಪಿಎಸ್‌ಐ ಅಕ್ರಮದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಹೆಸರು ಕೆಇಎ ಪರೀಕ್ಷೆ ಅಕ್ರಮದಲ್ಲೂ ಕೇಳಿ ಬರುತ್ತಿರುವುದರಿಂದ ಸ್ಥಳೀಯ ಪೊಲೀಸರು ಇದೀಗ ಸಿಐಡಿ ಅಧಿಕಾರಿಗಳ ಸಲಹೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಪಿಎಸ್‌ಐ ಅಕ್ರಮದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಆ ತನಿಖೆಯಲ್ಲಿರುವ ಅಧಿಕಾರಿಗಳನ್ನು ಸ್ಥಳೀಯ ಪೊಲೀಸರು ಸಂಪರ್ಕಿಸಿ ಸಲಹೆ ಪಡೆಯುತ್ತಿದ್ದಾರೆನ್ನಲಾಗಿದೆ.
ಪರೀಕ್ಷಾ ಅಕ್ರಮದ ಕಡಿವಾಣಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ. ಹಿಂದಿನ ಸರ್ಕಾರದಂತೆ ನಾವು ಆರೋಪಿಗಳ ಬಂಧನಕ್ಕೆ ವಿಳಂಬ ಮಾಡಿಲ್ಲ. ಯಾವ್ಯಾವ ಹಂತದಲ್ಲಿ ಏನೇನು ಅಕ್ರಮ ಆಗಿದೆ ಅನ್ನುವುದನ್ನು ಮತ್ತೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.