ಕೇವಲ 5 ನಿಮಿಷದ ವಿಡಿಯೋಗೆ 4.5 ಕೋಟಿ ತೆತ್ತ ಕರ್ನಾಟಕ ಸರ್ಕಾರ..!

By Kannadaprabha News  |  First Published Jan 28, 2023, 2:48 PM IST

ಗುತ್ತಿಗೆ ರದ್ದುಗೊಳಿಸಿದ್ದರೂ ಒಪ್ಪಂದದಂತೆ ಹಣ ನೀಡಲು ಹೈಕೋರ್ಟ್‌ನಿಂದ ಆದೇಶ, ಹೂಡಿಕೆ ಸಮಾವೇಶಕ್ಕೆ ಸಿದ್ಧಪಡಿಸಿದ್ದ 3ಡಿ ವಿಡಿಯೋ, ಬಳಸದಿದ್ದರೂ ಹಣ ಕಟ್ಟಬೇಕು. 


ಬೆಂಗಳೂರು(ಜ.28):  ಕಳೆದ ವರ್ಷ ಹಮ್ಮಿಕೊಳ್ಳಲಾಗಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ (ಜಿಮ್‌) ಪ್ರಚಾರಕ್ಕಾಗಿ ಐದು ನಿಮಿಷದ ‘3ಡಿ’ ವಿಡಿಯೋ ಚಿತ್ರೀಕರಿಸಲು ಬಿಬಿಪಿ ಸ್ಟುಡಿಯೋ ಕಂಪನಿಗೆ ನೀಡಿದ್ದ ಗುತ್ತಿಗೆ ಹಿಂಪಡೆದಿದ್ದ ಸರ್ಕಾರದ ಕ್ರಮವನ್ನು ರದ್ದುಪಡಿಸಿರುವ ಹೈಕೋರ್ಟ್‌, ಒಪ್ಪಂದದಂತೆ ಕಂಪನಿಗೆ 4.5 ಕೋಟಿ ರು. ಪಾವತಿಸಬೇಕು ಎಂದು ನಿರ್ದೇಶಿಸಿದೆ. ಸರ್ಕಾರದ ಕ್ರಮ ಪ್ರಶ್ನಿಸಿ ಮುಂಬೈ ಮೂಲದ ಬಿಬಿಪಿ ಸ್ಟುಡಿಯೋ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರ ಕಂಪನಿ ಗುತ್ತಿಗೆ ಒಪ್ಪಂದದಂತೆ ವಿಡಿಯೋ ಚಿತ್ರೀಕರಣ ಪೂರ್ಣಗೊಳಿಸಿತ್ತು. ಅಂತಿಮ ವಿಡಿಯೋ ನೀಡುವುದಷ್ಟೇ ಬಾಕಿಯಿತ್ತು. ಅದಕ್ಕೂ ಮುನ್ನವೇ ಗುತ್ತಿಗೆ ಕಾರ್ಯಾದೇಶ ಹಿಂಪಡೆದ ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ. ಪ್ರಚಾರ ವಿಡಿಯೋದ ಗುಣಮಟ್ಟ ಪರಿಶೀಲಿಸದೆ ಕೇವಲ ರಾಜಕೀಯ ಹಸ್ತಕ್ಷೇಪದಿಂದ ಗುತ್ತಿಗೆ ಕಾರ್ಯಾದೇಶ ರದ್ದು ಮಾಡಿರುವುದು ನಿರಂಕುಶತ್ವಕ್ಕೆ ದೊಡ್ಡ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಈಗಾಗಲೇ ಮುಂಗಡವಾಗಿ 1.5 ಕೋಟಿ ರು. ನೀಡಿರುವುದರಿಂದ ಉಳಿದ ಬಾಕಿ ಮೊತ್ತವನ್ನು ಅರ್ಜಿದಾರ ಕಂಪನಿಗೆ ಪಾವತಿ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.

Tap to resize

Latest Videos

ನಾನು ಬಿಎಸ್‌ವೈ ವಿರುದ್ಧ ಮಾತನಾಡಲ್ಲ ಎಂದ ಯತ್ನಾಳ್‌: ನಸು ನಕ್ಕು ಕೈ ಮುಗಿದ ಯಡಿಯೂರಪ್ಪ..!

ಪ್ರಕರಣವೇನು?:

ಜಿಮ್‌ ಪ್ರಚಾರಕ್ಕಾಗಿ 5 ನಿಮಿಷದ ವಿಡಿಯೋ ಚಿತ್ರೀಕರಿಸಲು ಬಿಬಿಪಿ ಸ್ಟುಡಿಯೋ ಕಂಪನಿಗೆ ಸರ್ಕಾರದ ಅಧೀನದ ಮಾರ್ಕೆಟಿಂಗ್‌ ಕಮ್ಯೂನಿಕೇಷನ್ಸ್‌ ಅಂಡ್‌ ಅಡ್ವರ್ಟೈಸಿಂಗ್‌ ಲಿಮಿಟೆಡ್‌ (ಎಂಸಿಎಲ್‌ಎ) 2022ರ ಆ.11ರಂದು ಗುತ್ತಿಗೆ ನೀಡಿ ಕಾರ್ಯಾದೇಶ ಹೊರಡಿಸಿತ್ತು. 2022ರ ಅ.1ರಂದು ಮುಂಗಡವಾಗಿ ಕಂಪನಿಗೆ 1.5 ಕೋಟಿ ರು. ಪಾವತಿಸಿತ್ತು.

ಈ ಮಧ್ಯೆ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಅವರು ಎಂಸಿಎಲ್‌ಎಗೆ ಪತ್ರ ಬರೆದು 5 ನಿಮಿಷದ ಪ್ರಚಾರದ ವಿಡಿಯೋಗೆ 4.5 ಕೋಟಿ ಹಣ ನೀಡುವುದು ತುಂಬಾ ಜಾಸ್ತಿ ಎಂದು ತಿಳಿಸಿದ್ದರು. ಇದರಿಂದ ಅ.25ರಂದು ಗುತ್ತಿಗೆ ಕಾರ್ಯಾದೇಶವನ್ನು ರದ್ದುಪಡಿಸಿದ್ದ ಎಂಸಿಎಲ್‌ಎ, ಆ ಕುರಿತು ಬಿಬಿಪಿ ಸ್ಟುಡಿಯೋಗೆ ಇ-ಮೇಲ್‌ ಸಂದೇಶ ಕಹಿಸಿತ್ತು. ಅದನ್ನು ಪ್ರಶ್ನಿಸಿ ಬಿಬಿಪಿ ಸ್ಟುಡಿಯೋ ಹೈಕೋರ್ಟ್‌ ಮೆಟ್ಟಿಲೇರಿತ್ತು.

click me!