ಪರೇಶ್‌ ಮೇಸ್ತ ಕೊಲೆ ಆರೋಪಿಗೆ ವಕ್ಫ್ ಮಂಡಳಿ ಹುದ್ದೆ ನೀಡಿ, ತಡೆ

By Girish GoudarFirst Published Aug 13, 2022, 9:19 AM IST
Highlights

ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ಕೇಳಿ ಬಂದ ಬೆನ್ನಲ್ಲೇ ಆದೇಶ ತಡೆ ಹಿಡಿದ ರಾಜ್ಯ ಸರ್ಕಾರ 

ಬೆಂಗಳೂರು(ಆ.13):  ಪರೇಶ್‌ ಮೇಸ್ತ ಸಾವಿನ ಪ್ರಕರಣದ ಪ್ರಮುಖ ಆರೋಪಿ ಜಮಾಲ್‌ ಆಜಾದ್‌ ಅಣ್ಣಿಗೇರಿಗೆ ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್‌ ಸಲಹಾ ಸಮಿತಿಯ ಉಪಾಧ್ಯಕ್ಷ ಸ್ಥಾನ ನೀಡಿ ಹೊರಡಿಸಿದ್ದ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ಕೇಳಿ ಬಂದಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶವನ್ನು ತಡೆ ಹಿಡಿದಿದೆ.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇದೇ ಆಗಸ್ಟ್‌ 1ರಂದು ಮಾಡಿದ್ದ ಆದೇಶದಲ್ಲಿ ಅಣ್ಣಿಗೇರಿಗೆ ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್‌ ಸಲಹಾ ಸಮಿತಿ ಉಪಾಧ್ಯಕ್ಷ ಸ್ಥಾನ ನೀಡಿತ್ತು. ಇದು ತಡವಾಗಿ ಬೆಳಕಿಗೆ ಬಂದಿತ್ತು. ಅನಂತರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಬಿಜೆಪಿ ಸರ್ಕಾರದ ವಿರುದ್ಧ ಪಕ್ಷದ ಮುಖಂಡರೇ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಈ ಬೆಳವಣಿಗೆಗಳ ಬಳಿಕ ಎಚ್ಚೆತ್ತ ಮುಜರಾಯಿ, ಹಜ್‌ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ರಾಜ್ಯ ವಕ್ಫ್ ಮಂಡಳಿಗೆ ಶುಕ್ರವಾರ ಟಿಪ್ಪಣಿ ಬರೆದು ತಕ್ಷಣ ಈ ಆದೇಶ ತಡೆಹಿಡಿಯಲು ಸೂಚಿಸಿದ್ದರು. ಸಚಿವರ ಟಿಪ್ಪಣಿ ಆಧರಿಸಿ ವಕ್ಫ್ ಮಂಡಳಿಯು ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್‌ ಸಲಹಾ ಸಮಿತಿ ರಚಿಸಿದ್ದ ಆದೇಶವನ್ನು ತಡೆಹಿಡಿದಿದೆ.

Paresh Mesta Murder Case: ಪ್ರಕರಣದ ಆರೋಪಿಗೆ ವಕ್ಫ್ ಬೋರ್ಡ್ ಸ್ಥಾನ!

ಸಿಎಂ ಗಮನಕ್ಕೂ ಬಂದಿರಲಿಲ್ಲ:

ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ವಕ್ಫ್ ಮಂಡಳಿ ಕಾಂಗ್ರೆಸ್‌ ಕೈಯಲ್ಲಿದೆ. ಇದು ಮಾಡಿರುವ ಆದೇಶ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿಲ್ಲ ಎಂದು ಹೇಳಿದ್ದಾರೆ.

2017ರ ಡಿಸೆಂಬರ್‌ನಲ್ಲಿ ಹೊನ್ನಾವರ ಪಟ್ಟಣದಲ್ಲಿ ನಡೆದ ಗಲಭೆಯೊಂದರಲ್ಲಿ ಪಟ್ಟಣದ ಪರೇಶ್‌ ಮೇಸ್ತಾ ಎನ್ನುವ ಯುವಕ ನಾಪತ್ತೆಯಾಗಿ, ಎರಡು ದಿನಗಳ ನಂತರ ಶವವಾಗಿ ಪಟ್ಟಣದ ಕೆರೆಯೊಂದರಲ್ಲಿ ಪತ್ತೆಯಾಗಿದ್ದ. ಮೇಸ್ತಾನನ್ನ ಕೋಮು ಗಲಭೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಈ ಪ್ರಕರಣವನ್ನು ಅಂದಿನ ಕಾಂಗ್ರೆಸ್‌ ಸರ್ಕಾರ ಸಿಬಿಐ ತನಿಖೆಗೆ ಸಹ ಒಪ್ಪಿಸಿತ್ತು. ಪ್ರಕರಣ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿ, ಜಮಾಲ್‌ ಅಜಾದ್‌ ಅಣ್ಣಿಗೇರಿ ಎಂಬಾತನನ್ನು ಪ್ರಮುಖ ಆರೋಪಿಯಾಗಿದ್ದು, ಬಂಧನಕ್ಕೂ ಒಳಗಾಗಿದ್ದ.
 

click me!