ಬಿ-ಖರಾಬು ಭೂಮಿ ಮಾರಾಟಕ್ಕೆ ಸಂಪುಟ ಅಸ್ತು

Kannadaprabha News   | Asianet News
Published : Sep 16, 2020, 08:14 AM IST
ಬಿ-ಖರಾಬು ಭೂಮಿ ಮಾರಾಟಕ್ಕೆ ಸಂಪುಟ ಅಸ್ತು

ಸಾರಾಂಶ

ಬೆಂಗಳೂರು ನಗರದ 18 ಕಿ.ಮೀ. ವ್ಯಾಪ್ತಿಯಲ್ಲಿ ಜಮೀನು ಸಕ್ರಮಗೊಳಿಸಲು ಸಮ್ಮತಿ| 4 ಪಟ್ಟು ಶುಲ್ಕ ವಿಧಿಸಿ ಜಮೀನು ಮಾರಾಟ,ಇದಕ್ಕಾಗಿ ಭೂಕಂದಾಯ ಕಾಯ್ದೆಗೆ ತಿದ್ದುಪಡಿ| ಬೆಂಗಳೂರು, ಸುತ್ತಮುತ್ತ 21 ಸಾವಿರ ಎಕರೆ ಬಿ-ಖರಾಬು ಜಮೀನು| 

ಬೆಂಗಳೂರು(ಸೆ.16): ನಗರ ಪ್ರದೇಶದ ವ್ಯಾಪ್ತಿಯಲ್ಲಿದ್ದ ಬಿ-ಖರಾಬು ಭೂಮಿಯನ್ನು ಸಕ್ರಮಗೊಳಿಸಿ ನಾಲ್ಕು ಪಟ್ಟು ಶುಲ್ಕ ವಿಧಿಸಿ ಮಾರಾಟ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಂಗಳೂರು ನಗರ ಪ್ರದೇಶ ವ್ಯಾಪ್ತಿಯಲ್ಲಿದ್ದ ಬಿ-ಖರಾಬು ಭೂಮಿಯನ್ನು ಒತ್ತುವರಿ ಭೂಮಿ, ನಿವೇಶನಗಳ ಮಧ್ಯೆ ಇರುವ ಭೂಮಿಯನ್ನು ಮಾರಾಟ ಮಾಡಲು ತೀರ್ಮಾನಿಸಲಾಗಿದ್ದು, ಭೂ ಕಂದಾಯ ಕಾಯ್ದೆಗೆ 64, ಕಲಂ 2 ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದರು.

ಬೆಂಗಳೂರು ನಗರದ ವ್ಯಾಪ್ತಿಯ 18 ಕಿ.ಮೀ. ವ್ಯಾಪ್ತಿಯಿಂದ ಹೊರಗಿನ ಪ್ರದೇಶಗಳನ್ನು ಮಾರಾಟ ಮಾಡುವುದಿಲ್ಲ. ಕೆಲವೆಡೆ ಕಟ್ಟಡಗಳು, ನಿವೇಶನ ಮಧ್ಯದಲ್ಲಿ ಹೆಚ್ಚುವರಿ ಭೂಮಿ ಉಳಿದುಕೊಂಡಿದೆ. ಅದನ್ನು ನಾಲ್ಕು ಪಟ್ಟು ವಿಧಿಸಿ ಮಾರಾಟ ಮಾಡಬಹುದಾಗಿದೆ. ಸರ್ಕಾರದ ಯಾವುದೇ ಯೋಜನೆಗೆ ಅಥವಾ ಬಳಕೆಯಾಗದೆ ಉಳಿದಿರುವ ಭೂಮಿಯನ್ನು ಬಿಟ್ಟರೆ ಯಾವುದೇ ಪ್ರಯೋಜನವಾಗದೆ ಒತ್ತುವರಿದಾರರ, ಖಾಸಗಿ ಸಂಸ್ಥೆಗಳ ಪಾಲಾಗಲಿದೆ. ಹೀಗಾಗಿ ಮಾರಾಟಕ್ಕೆ ತೀರ್ಮಾನಿಸಲಾಗಿದೆ. ಗ್ರಾಮೀಣ ಭಾಗದಲ್ಲಿನ ಬಿ-ಖರಾಬು ಜಮೀನನ್ನು ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದರು.

ಶಿಕ್ಷಣ ನೀತಿಯಿಂದ ಭಾರತ ಜ್ಞಾನದ ಸೂಪರ್‌ ಪವರ್‌ ಆಗಲಿದೆ: ಅಶ್ವತ್ಥ ನಾರಾಯಣ

ಬೆಂಗಳೂರಿನ ಅಗರ ಕೆರೆಯಿಂದ 35 ಎಂಎಲ್‌ಡಿ ನೀರನ್ನು ಕೊಂಡೊಯ್ಯಲು ಅಳವಡಿಸುವ ಕಾಮಗಾರಿಯ ಪೈಪ್‌ಲೈನ್‌ನಲ್ಲಿ ಭಾಗಶಃ ಮಾರ್ಪಾಡು ಮಾಡಿ ಹೆಚ್ಚುವರಿಯಾಗಿ ಹುಳಿಮಾವು ಮತ್ತು ಚಿಕ್ಕ ಬೇಗೂರು ಎಸ್‌ಟಿಪಿಯಿಂದ ಲಭ್ಯ ಇರುವ 15 ಎಂಎಲ್‌ಡಿಯೊಂದಿಗೆ ಒಟ್ಟು 50 ಎಂಎಲ್‌ಡಿ ನೀರನ್ನು ಈಗಾಗಲೇ ಅಳವಡಿಸಿರುವ ಆನೇಕಲ್‌ ಯೋಜನೆಯ ಪೈಪ್‌ಲೈನ್‌ಗೆ ಜೋಡಣೆ ಮಾಡುವ 30 ಕೋಟಿ ರು. ಅಂದಾಜು ಮೊತ್ತ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಹೇಳಿದರು.

ಬಿ-ಖರಾಬು ಜಮೀನು ಎಂದರೇನು?

2 ಖಾಸಗಿ ನಿವೇಶನಗಳ ನಡುವೆ ಸಿಲುಕಿಕೊಂಡ ಸರ್ಕಾರಿ ಜಮೀನನ್ನು ಬಿ-ಖರಾಬು ಜಮೀನು ಎಂದು ಕರೆಯಲಾಗುತ್ತದೆ. ಇವನ್ನು ಪಾರ್ಕ್ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಸರ್ಕಾರ ಬಳಸಬಹುದು. ಆದರೆ 2 ಖಾಸಗಿ ನಿವೇಶನ ಅಥವಾ ಮನೆಯ ನಡುವೆ ಇದು ಸಿಲುಕಿರುವ ಕಾರಣ ಇದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ ಹೋಗಬಹುದು. ಅಂಥ ಜಮೀನನ್ನು ಖಾಸಗಿಯವರು ತಮ್ಮ ಸ್ವಂತ ಉದ್ದೇಶಕ್ಕೆ ಅಕ್ರಮವಾಗಿ ಬಳಸಿಕೊಳ್ಳುತ್ತಿರುತ್ತಾರೆ ಅಥವಾ ಒತ್ತುವರಿ ಮಾಡಿಕೊಂಡಿರುತ್ತಾರೆ. ಈಗ ಈ ಜಮೀನನ್ನು 4 ಪಟ್ಟು ಶುಲ್ಕ ವಿಧಿಸಿ ಖಾಸಗಿಯವರಿಗೆ ಮಾರುವ ನಿರ್ಧಾರ ಕೈಗೊಳ್ಳಲಾಗಿದೆ. ಮೂಲಗಳ ಪ್ರಕಾರ, ಬೆಂಗಳೂರು ಹಾಗೂ ಸುತ್ತಮುತ್ತ ಇಂಥ 21 ಸಾವಿರ ಎಕರೆ ಜಮೀನು ಇದೆ ಎನ್ನಲಾಗಿದೆ.

ಬಿಬಿಎಂಪಿ ವಿಭಜನೆ ಇಲ್ಲ, ವಲಯ ಹೆಚ್ಚಿಸುವ ಚರ್ಚೆ

ಬೆಂಗಳೂರು: ಬಿಬಿಎಂಪಿಯನ್ನು ವಿಭಜನೆ ಮಾಡುವ ಬಗ್ಗೆ ಯಾವುದೇ ಚಿಂತನೆ ಇಲ್ಲ. ಆದರೆ, ಈ ಬಗ್ಗೆ ಚರ್ಚೆ ನಡೆದಿದೆ. ಬಿಬಿಎಂಪಿ ವಿಭಜನೆ ಬದಲು ವಲಯಗಳನ್ನು ಹೆಚ್ಚಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಇದೇ ವೇಳೆ ಸಚಿವ ಮಾಧುಸ್ವಾಮಿ ತಿಳಿಸಿದರು.

ಬೆಂಗಳೂರಿನ ಶಾಸಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಜಂಟಿ ಸದನ ಪರಿಶೀಲನಾ ಸಮಿತಿಯು ನಡೆಸುತ್ತಿರುವ ಸಭೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಅಂತಿಮ ರೂಪುರೇಷೆ ರೂಪಿಸಲಾಗುವುದು ಎಂದು ಹೇಳಿದರು.

ಕೆಲವರು 225 ವಾರ್ಡ್‌ಗಳನ್ನು ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಕೆಲವರು ಫೆರಿಫೆರಲ್‌ಗೆ ಬೇರೆ ವಾರ್ಡ್‌ ಮಾಡುವ ಬಗ್ಗೆ ಹೇಳಿದ್ದಾರೆ. ಇನ್ನು ಕೆಲವರು ವಾರ್ಡ್‌ಗಳನ್ನು ಹೆಚ್ಚಿಸುವ ಬದಲು 15 ವಲಯಗಳನ್ನು ಮಾಡುವ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸೆ.21ರಿಂದ ಆರಂಭವಾಗುವ ಅಧಿವೇಶನದಲ್ಲಿಯೇ ಬಿಬಿಎಂಪಿ ಮಸೂದೆ ಮಂಡಿಸಲು ಪ್ರಯತ್ನಿಸಲಾಗುವುದು ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ