ಬೆಂಗಳೂರು ಗಲಭೆ ಪ್ರಕರಣ: ಆರೋಪಿಗಳಿಗಿಲ್ಲ ಜಾಮೀನು

By Kannadaprabha NewsFirst Published Sep 16, 2020, 7:46 AM IST
Highlights

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಡಲು ಪ್ರಚೋದಿಸಿದ ಆರೋಪ|ಸಾಕ್ಷ್ಯಾಧಾರ ನಾಶ ಸಾಧ್ಯತೆ ಕಾರಣ ಜಾಮೀನು ನಿರಾಕರಣೆ| ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಆರೋಪಿತರಿಗೆ ಜಾಮೀನು ಮಂಜೂರು ಮಾಡಿದರೆ ಅಡ್ಡಿ| ವಾದವನ್ನು ಪುರಸ್ಕರಿಸಿ ಜಾಮೀನು ರದ್ದು ಮಾಡಿದ ನ್ಯಾಯಾಲಯ| 

ಬೆಂಗಳೂರು(ಸೆ.16): ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಡಲು ಪ್ರಚೋದಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಅರುಣ್‌ ಮನೋಜ್‌ ಸೇರಿ ಇತರೆ ಮೂವರು ಆರೋಪಿಗಳಿಗೆ ಜಾಮೀನು ನೀಡಲು ನಗರದ 66ನೇ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ.

ಆರೋಪಿಗಳಾದ ಅರುಣ್‌ ಮನೋಜ್‌, ಸಂತೋಷ್‌ಕುಮಾರ್‌, ಲಿಯಾಖತ್‌ ಮತ್ತು ರೆಹಮಾನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ. ಈ ಹಂತದಲ್ಲಿ ಜಾಮೀನು ನೀಡಿದಲ್ಲಿ ಪಾರದರ್ಶಕ ತನಿಖೆ ನಡೆಸಲು ಅಡ್ಡಿಯಾಗಲಿದೆ. ಸಾಕ್ಷ್ಯಾಧಾರಗಳ ನಾಶಕ್ಕೆ ಕಾರಣವಾಗಲಿದೆ ಎಂದು ಅಭಿಪ್ರಾಯ ಪಟ್ಟು ಜಾಮೀನು ನಿರಾಕರಿಸಿದ್ದಾರೆ.

ಬೆಂಗಳೂರು ಗಲಭೆ: ಶಾಸಕ ಅಖಂಡ ಮನೆಗೆ ಬೆಂಕಿ ಇಟ್ಟಿದ್ದವ ಅರೆಸ್ಟ್‌

ವಿಚಾರಣೆ ವೇಳೆ ಸಿಸಿಬಿ ಪರ ವಾದ ಮಂಡಿಸಿದ್ದ ವಿಶೇಷ ಅಭಿಯೋಜನ ಪ್ರಸನ್ನ ಕುಮಾರ್‌, ಆರೋಪಿತರು ರಾಜಕೀಯ ಉದ್ದೇಶದಿಂದ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಮೇಲೆ ದ್ವೇಷ ಸಾಧಿಸುತ್ತಿದ್ದರು. ಶಾಸಕರ ಸೋದರಳಿಯ ನವೀನ್‌ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದನ್ನೇ ನೆಪವಾಗಿಸಿಕೊಂಡು ದಾಂಧಲೆ ಎಬ್ಬಿಸಿದ್ದಾರೆ. ಗಲಭೆ ಬಳಿಕ ಫೋನ್‌ ಕರೆ, ವ್ಯಾಟ್ಸಾಪ್‌ ಸಂದೇಶಗಳನ್ನು ಅಳಿಸಿ ಹಾಕಿದ್ದಾರೆ. 

ಶಾಸಕರ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ಕಿತ್ತೆಸೆದು ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಚಿನ್ನಾಭರಣ ಮತ್ತು ಹಣ ದೋಚಿರುವ ಆರೋಪವಿದೆ. ಮೂರು ಕೋಟಿ ರು.ಗಳನ್ನು ನಷ್ಟ ಮಾಡಿರುವ ಆರೋಪವಿದೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಆರೋಪಿತರಿಗೆ ಜಾಮೀನು ಮಂಜೂರು ಮಾಡಿದರೆ ಅಡ್ಡಿಯಾಗುತ್ತದೆ ಎಂದು ನ್ಯಾಯಾಧೀಶರಿಗೆ ವಿವರಿಸಿದರು. ವಾದವನ್ನು ಪುರಸ್ಕರಿಸಿ ಜಾಮೀನು ರದ್ದು ಮಾಡಲಾಗಿದೆ.
 

click me!