ಕರ್ನಾಟಕದಲ್ಲಿ 8 ಹೊಸ ಶೈತ್ಯಾಗಾರಕ್ಕೆ ಸರ್ಕಾರ ಅನುಮೋದನೆ

By Kannadaprabha NewsFirst Published Sep 11, 2022, 2:00 AM IST
Highlights

ವಿಜಯಪುರ, ಶಿವಮೊಗ್ಗ, ಹಾವೇರಿ, ಕೋಲಾರ, ಮಂಡ್ಯ, ಚಾ.ನಗರದಲ್ಲಿ ನಿರ್ಮಾಣ

ಬೆಂಗಳೂರು(ಸೆ.11):  ತೋಟಗಾರಿಕೆ ಬೆಳೆ ಮತ್ತು ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆತಾಗ ಮಾರಾಟ ಮಾಡಲು ಅನುಕೂಲವಾಗುವಂತೆ ನಬಾರ್ಡ್‌ನ ಆರ್‌ಐಡಿಎಫ್‌ (ರೂರಲ್‌ ಇನ್ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಫಂಡ್‌) ಅಡಿಯಲ್ಲಿ ಮತ್ತೆ ಆರು ಜಿಲ್ಲೆಗಳಲ್ಲಿ 8 ಶೀತಲೀಕರಣ ಘಟಕಗಳ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ. ನೂತನ ಶೀತಲೀಕರಣ ಘಟಕ ಸ್ಥಾಪನೆಗೆ ತೋಟಗಾರಿಕೆ ಇಲಾಖೆ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಆರ್‌ಐಡಿಎಫ್‌ ಅಡಿಯಲ್ಲಿ ವಿಜಯಪುರ-1, ಶಿವಮೊಗ್ಗ-2, ಹಾವೇರಿ-2, ಕೋಲಾರ-1, ಮಂಡ್ಯ-1 ಮತ್ತು ಚಾಮರಾಜನಗರದಲ್ಲಿ-1 ಶೀತಲೀಕರಣ ಘಟಕ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್‌ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ. ಈ ಯೋಜನೆಗೆ 46.78 ಕೋಟಿ ರು. ವೆಚ್ಚಮಾಡಲು ಉದ್ದೇಶಿಸಲಾಗಿದೆ.

ತೋಟಗಾರಿಕೆ ಇಲಾಖೆ ಮಾಹಿತಿಯಂತೆ ಈ ವರ್ಷದೊಳಗೆ ಶೀತಲೀಕರಣ ಘಟಕ ನಿರ್ಮಾಣಕ್ಕೆ ಟೆಂಡರ್‌ ಕರೆಯಲು ಉದ್ದೇಶಿಸಿದ್ದು, ಪ್ರಸ್ತುತ ಮಾರುಕಟ್ಟೆಯ ಬೆಲೆಗೆ ತಕ್ಕಂತೆ ಹೊಸದಾಗಿ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ. ಇದರಿಂದಾಗಿ ತೋಟಗಾರಿಕೆ ಬೆಳೆಗಳನ್ನು ದೀರ್ಘ ಕಾಲದ ಹಾಳಾಗದಂತೆ ಸುರಕ್ಷಿತವಾಗಿ ಸಂಗ್ರಹಿಸಿಡಲು ಸಹಕಾರಿಯಾಗಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾ.ಪಂ.​ ಕಚೇ​ರಿ​ಯಲ್ಲೂ ಈಗ ಕಾಫಿ ಗಿಡ ಲಭ್ಯ!

ಪ್ರತಿಯೊಂದು ಶೀತಲೀಕರಣ ಘಟಕವೂ ತಲಾ 2 ಸಾವಿರ ಮೆಟ್ರಿಕ್‌ ಟನ್‌ಗೂ ಅಧಿಕ ಸಾಮರ್ಥ್ಯ ಇರಲಿದೆ. ಹೀಗೆ 8 ಶೀತಲೀಕರಣ ಘಟಕಗಳು ಒಟ್ಟು 18 ಸಾವಿರ ಮೆಟ್ರಿಕ್‌ ಟನ್‌ ಸಾಮರ್ಥ್ಯ ಇರಲಿವೆ. ಹೀಗಾಗಿ ಹಣ್ಣು-ತರಕಾರಿಗಳೆಲ್ಲ ಕೊಳೆತು ಹೋಗುತ್ತವೆ. ಇನ್ನು ಕಾಯುವುದು ಬೇಡ. ಬಂದಷ್ಟುಬೆಲೆಗೆ ಮಾರಾಟ ಮಾಡಿಬಿಡೋಣ ಎಂದು ರೈತರು ಕೈಚೆಲ್ಲಬೇಕಿಲ್ಲ. ತೋಟಗಾರಿಕೆ ಉತ್ಪನ್ನಗಳಿಗೆ ನಿರೀಕ್ಷಿತ ಬೆಲೆ ಸಿಗುವವರೆಗೂ ಅವರು ಅವುಗಳನ್ನು ಸಂರಕ್ಷಿಸಿಡಬಹುದು.

ರಾಜ್ಯದ 25 ಜಿಲ್ಲೆಗಳಲ್ಲಿ ಈಗಾಗಲೇ 167 ಶೀತಲೀಕರಣ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ವಿಜಯಪುರ-31, ಹಾವೇರಿ, ಬಳ್ಳಾರಿ ತಲಾ- 26, ಬೆಂಗಳೂರು ನಗರ- 15, ರಾಯಚೂರು- 10 ಸೇರಿದಂತೆ 167 ಶೀತಲೀಕರಣ ಘಟಕಗಳು ಇವೆ. ಕೆಲವು ಕಡೆಗಳಲ್ಲಿ 3 ಇದ್ದರೆ, ಇನ್ನು ಕೆಲವೆಡೆ 1 ಶೀತಲೀಕರಣ ಘಟಕ ಇದ್ದು, ಬರೋಬ್ಬರಿ 5.89 ಲಕ್ಷ ಮೆಟ್ರಿಕ್‌ ಟನ್‌ ಸಾಮರ್ಥ್ಯ ಹೊಂದಿದೆ. ಈಗ ಮತ್ತೆ 8 ಘಟಕಗಳು ಹೊಸದಾಗಿ ಸೇರ್ಪಡೆಗೊಳ್ಳಲಿವೆ. ಇದರಿಂದ ರಾಜ್ಯದ ರೈತರು ಬೆಳೆದ ಹಣ್ಣು, ತರಕಾರಿ ಕೊಳೆತು ಹೋಗುತ್ತವೆ ಎಂದು ಚಿಂತಿಸಬೇಕಿಲ್ಲ. ಟೊಮೆಟೋ, ಕ್ಯಾರೇಟ್‌, ಬೀಟ್‌ರೂಟ್‌, ಧಾನ್ಯಗಳು, ಮಾವು, ಕಿತ್ತಳೆ ಹೀಗೆ ಅನೇಕ ಉತ್ಪನ್ನಗಳನ್ನು ಸಂರಕ್ಷಿಸಿಟ್ಟು ಮಾರುಕಟ್ಟೆಯಲ್ಲಿ ಬೇಡಿಕೆ ಬಂದಾಗ ಮಾರಾಟ ಮಾಡಿ ಲಾಭ ಪಡೆಯಲು ಈ ಯೋಜನೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
 

click me!