ಮಳೆಯ ಅಬ್ಬರಕ್ಕೆ ಗುರುಮಠಕಲ್‌ನ ಬದ್ದೆಪಲ್ಲಿ ರಸ್ತೆ ಜಲಾವೃತಗೊಂಡರೆ, ಬದ್ದೆಪಲ್ಲಿ-ತೆಲಂಗಾಣದ ಬೈರಂಪಳ್ಳಿಯ ರಸ್ತೆ ಜಲಾವೃತಗೊಂಡು, ಸಂಚಾರ ಕಡಿತಗೊಂಡಿದೆ.
ಬೆಂಗಳೂರು(ಸೆ.11): ರಾಜ್ಯದ ಅಲ್ಲಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿದ್ದ ಮಳೆ ಬಹುತೇಕ ಕಡೆ ಇಳಿಮುಖವಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಸಿಡಿಲು ಬಡಿದು ಮಹಿಳೆ ಸೇರಿ ಇಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸುರಪುರ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ಭತ್ತದ ಜಮೀನಿನಲ್ಲಿನ ಕಳೆ ತೆಗೆಯುವಾಗ ಸಿಡಿಲು ಬಡಿದು ನಂದಮ್ಮ(35) ಮತ್ತು ದೇವತ್ಕಲ್ ಗ್ರಾಮದಲ್ಲಿ ಮನೆ ಮುಂದೆ ನಿಂತಿದ್ದ ರಾಜು ಸಿಂಗ್(38) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಜೊತೆಗೆ ಎರಡು ಮೇಕೆಗಳು ಕೂಡ ಮೃತಪಟ್ಟಿವೆ. ಮಳೆಯ ಅಬ್ಬರಕ್ಕೆ ಗುರುಮಠಕಲ್‌ನ ಬದ್ದೆಪಲ್ಲಿ ರಸ್ತೆ ಜಲಾವೃತಗೊಂಡರೆ, ಬದ್ದೆಪಲ್ಲಿ-ತೆಲಂಗಾಣದ ಬೈರಂಪಳ್ಳಿಯ ರಸ್ತೆ ಜಲಾವೃತಗೊಂಡು, ಸಂಚಾರ ಕಡಿತಗೊಂಡಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಯಾದಗಿರಿಯಲ್ಲಿ ಭೀಮಾನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು ನದಿ ಪಾತ್ರದಲ್ಲಿ ಹೈ ಅಲರ್ಚ್ ಘೋಷಿಸಲಾಗಿದೆ.
Karnataka Rains: ಬೆಳಿ ನೀರುಪಾಲಾಗೇತ್ರಿ, ನಿರೀಕ್ಷೆ ನುಚ್ಚುನೂರಾಗೇತ್ರಿ, ರೈತರ ಗೋಳು ಕೇಳೋರೇ ಇಲ್ಲ..!
ಇನ್ನು ಕಲಬುರಗಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಬ್ಬರ ಶನಿವಾರವೂ ಮುಂದುವರಿದಿದೆ. ಹಳ್ಳ ಕೊಳ್ಳಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದು ಆಳಂದದ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಚಿಂಚೋಳಿಯಲ್ಲಿ ಮಳೆಯಿಂದಾಗಿ ಕೋಡ್ಲಿ ಗ್ರಾಮದ ಮುಖ್ಯದ್ವಾರದ ಅಗಸಿ ಹತ್ರ ಸಣ್ಣ ಹಳ್ಳ ತುಂಬಿ ಹರಿಯುತ್ತಿದ್ದು, ಶಾಲೆಗೆ ತೆರಳಿದ್ದು ಶಾಲಾಮಕ್ಕಳು ಗ್ರಾಮದೊಳಗೆ ಹೋಗಲು ಪರದಾಡಿದ್ದಾರೆ. ರೈತರು ಕೂಡಾ ಜಮೀನಿನಿಂದ ಗ್ರಾಮಕ್ಕೆ ಹೋಗಲು ಹರಸಾಹಸ ಪಟ್ಟಿದ್ದಾರೆ. ಮೂರು ಗ್ರಾಮಗಳ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಗಡಿಕೇಶ್ವರ, ಭೂತ್ಪೂರ, ಚಿಂತಪಳ್ಳಿ ಗ್ರಾಮಗಳಲ್ಲಿ ನಾಲೆಗಳು ತುಂಬಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಇನ್ನುಳಿದಂತೆ ಕಲಬುರಗಿ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮತ್ತು ತುಂತುರು ಮಳೆಯಾಗಿದೆ.