ಬೆಂಗಳೂರು (ನ.22) : ಡಿಸೆಂಬರ್ ಅಂತ್ಯದೊಳಗೆ ಜಿಲ್ಲಾ ಸರ್ಕಾರಿ ಗೋಶಾಲೆಗಳು ಆರಂಭವಾಗಿ ಜಾನುವಾರುಗಳಿಗೆ ಆಶ್ರಯ ನೀಡಬೇಕು. ವಿಳಂಬ ನೀತಿ ಅನುಸರಿಸಿದರೆ ಸಹಿಸುವುದಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಗಡುವು ನೀಡಿದರು.
ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಜಿಲ್ಲಾ ಗೋಶಾಲೆಗಳ ಪ್ರಸ್ತುತ ಸ್ಥಿತಿಗತಿ ಕುರಿತು ಮಾಹಿತಿ ಪಡೆದು ಅಧಿಕಾರಿಗಳ ಕಾರ್ಯವೈಖರಿಗೆ ಸಿಡಿಮಿಡಿಗೊಂಡರು.
ಗೋಶಾಲೆ ಆರಂಭಿಸುವುದು ಪಂಚವಾರ್ಷಿಯ ಯೋಜನೆಯೇ?: ಸರ್ಕಾರಕ್ಕೆ ಛಾಟಿ ಬೀಸಿದ ಹೈಕೋರ್ಟ್
ಸಭೆಯಲ್ಲಿ ಹಾಜರಿದ್ದ ಜಾಗೃತ ಕೋಶ ವಿಭಾಗದ ಅಪರ ನಿರ್ದೇಶಕ ಡಾ.ಶ್ರೀನಿವಾಸ್ ಮಾತನಾಡಿ, ಕಾರ್ಯನಿರ್ವಹಿಸುತ್ತಿರುವ 5 ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ. 12 ಗೋಶಾಲೆ ಪೂರ್ಣಗೊಂಡಿವೆ. 8 ಪೂರ್ಣಗೊಳ್ಳುವ ಹಂತದಲ್ಲಿದ್ದು, ಉಳಿದವು ನಿರ್ಮಾಣ ಹಂತದಲ್ಲಿವೆ ಎಂದು ಮಾಹಿತಿ ನೀಡುತ್ತಿದ್ದಂತೆ ಗರಂ ಆದ ಸಚಿವರು, ನನಗೆ ಲೆಕ್ಕ ಬೇಡ. ವರ್ಷಾಂತ್ಯದೊಳಗೆ ಎಲ್ಲಾ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ ನೀಡಬೇಕು ಎಂದು ಅಂತಿಮ ಗಡುವು ನೀಡಿದರು.
ಸಂಚಾರಿ ಪಶು ಚಿಕಿತ್ಸಾ ವಾಹನಗಳು ಜಾನುವಾರುಗಳ ಆರೋಗ್ಯ ಸಮಸ್ಯೆಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಬಗ್ಗೆ ಏನು ಕೆಲಸ ಮಾಡುತ್ತಿದ್ದೀರಿ. ಜಾನುವಾರು ಆಂಬ್ಯುಲೆನ್ಸ್ ಜನಪರ ಯೋಜನೆಯಾಗಿದ್ದು ಕುಂಠಿತಗೊಳ್ಳಬಾರದು ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಆಗ ಸಭೆಗೆ ಮಾಹಿತಿ ನೀಡಿದ ಜಾನುವಾರು ಆರೋಗ್ಯ ವಿಭಾಗದ ಅಪರ ನಿರ್ದೇಶಕ ಡಾ.ಪಿ.ಟಿ.ಶ್ರೀನಿವಾಸ್, ಬೆಂಗಳೂರು ಮತ್ತು ಬೆಳಗಾವಿ ವಿಭಾಗದಲ್ಲಿ 167 ಆ್ಯಂಬುಲೆನ್ಸ್ ಕಾರ್ಯ ನಿರ್ವಹಿಸುತ್ತಿವೆ. ಮೈಸೂರು ಮತ್ತು ಕಲಬುರಗಿ ವಿಭಾಗದಲ್ಲಿ ಶೀಘ್ರದಲ್ಲೇ ಆ್ಯಂಬುಲೆನ್ಸ್ ಆರಂಭಿಸಲಾಗುವುದು. ಚಾಲಕ ಮತ್ತು ಸಿಬ್ಬಂದಿ ನೇಮಕಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಮಸ್ಯೆ ಬಗೆಹರಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಸಿಬ್ಬಂದಿ ಕೊರತೆಯಿಂದ ವಿಳಂಬ:
ರಾಜ್ಯದಲ್ಲಿ ಚರ್ಮಗಂಟು ರೋಗ ಉಲ್ಬಣದಿಂದ ಜಾನುವಾರು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಚಿವರು ಪ್ರಶ್ನಿಸುತ್ತಿದ್ದಂತೆ ಉತ್ತರಿಸಿದ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ್ ಅವರು, ಗಡಿ ಭಾಗದಲ್ಲಿ ವೈರಾಣು ಹರಡುವಿಕೆಯಿಂದ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ರೋಗಕ್ಕೆ 51 ಲಕ್ಷ ಲಸಿಕೆ ನೀಡಲಾಗಿದೆ. ಸಿಬ್ಬಂದಿ ಇಲ್ಲದಿರುವುದರಿಂದ ಲಸಿಕೆ ನೀಡುವ ಪ್ರಕ್ರಿಯೆ ತಡವಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲೆಗೊಂದರಂತೆ 31 ಗೋವು ದತ್ತು ಪಡೆದ ಸಚಿವ ಚವ್ಹಾಣ್
400 ಪಶು ವೈದ್ಯಾಧಿಕಾರಿ ಮತ್ತು 250 ಕಿರಿಯ ಪಶು ವೈದ್ಯಕೀಯ ಪರೀಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬದ ಕುರಿತು ಸಚಿವರು ತರಾಟೆ ತೆಗೆದುಕೊಂಡಾಗ ಉತ್ತರಿಸಿದ ಇಲಾಖೆ ಆಯುಕ್ತೆ ಎಸ್.ಅಶ್ವಥಿ ಅವರು, ಪ್ರಕರಣ ಹೈಕೋರ್ಚ್‌ನಲ್ಲಿದ್ದು ಅಂತಿಮ ಆದೇಶದ ಹಂತದಲ್ಲಿದೆ. ಕಿರಿಯ ಪಶು ವೈದ್ಯಕೀಯ ಪರೀಕ್ಷಕರ ಆಯ್ಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನ.28 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ ಪಡಿಸಿದೆ ಎಂದು ತಿಳಿಸಿದರು.