ಒಕ್ಕಲೆಬ್ಬಿಸುವಾಗ ಕನ್ನಡಿಗನ ಕಾಲು ಮುರಿದ ಗೋವಾ ಪೊಲೀಸರು!

By Kannadaprabha NewsFirst Published Apr 17, 2024, 11:57 AM IST
Highlights

ಉತ್ತರ ಗೋವಾದ ಸಾಂಗೋಲ್ಲಾ ಪ್ರದೇಶದ ಕನ್ನಡಿಗರ ಮನೆಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸುವ ವೇಳೆ ಗೋವಾ ಪೊಲೀಸರು ಬೀಸಿದ ಲಾಠಿ ಏಟಿಗೆ ಹಾವೇರಿ ಜಿಲ್ಲೆ ಹಾನಗಲ್ಲಿನ ಮೈನುದ್ದೀನ್ ಬಸೀರ್ (39) ಎಂಬಾತನ ಕಾಲು ಮುರಿದಿದೆ. 

ಮಲ್ಲಿಕಾರ್ಜುನ ಸಿದ್ದಣ್ಣವರ 

ಪಣಜಿ (ಗೋವಾ): ಉತ್ತರ ಗೋವಾದ ಸಾಂಗೋಲ್ಲಾ ಪ್ರದೇಶದ ಕನ್ನಡಿಗರ ಮನೆಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸುವ ವೇಳೆ ಗೋವಾ ಪೊಲೀಸರು ಬೀಸಿದ ಲಾಠಿ ಏಟಿಗೆ ಹಾವೇರಿ ಜಿಲ್ಲೆ ಹಾನಗಲ್ಲಿನ ಮೈನುದ್ದೀನ್ ಬಸೀರ್ (39) ಎಂಬಾತನ ಕಾಲು ಮುರಿದಿದೆ. ಸದ್ಯ ಇಲ್ಲಿನ ಬಾಂಬೂಲಿಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿರುವ ಮೈನು ದೀನ್ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿ (ಕೋಮಾ) ದ್ದಾನೆ. ಬಲಗಾಲು ಮುರಿದಿದೆ, ಎರಡು ಕಣ್ಣುಗಳಿಗೂ ಬಲವಾದ ಗಾಯಗಳಾಗಿವೆ. ಇನ್ನೆರಡು ದಿನಗಳ ಬಳಿಕ ಶಸ್ತ್ರಚಿಕಿತ್ಸೆ ನಡೆಸುವುದಾಗಿ ವೈದ್ಯರು ಹೇಳಿದ್ದಾರೆ. ಮೈನುದ್ದೀನ್ ಸೇರಿ ಆರು ಮಂದಿ ಮೇಲೆ ಪೊಲೀಸರು ಲಾಠಿ ಪ್ರಯೋಗಿಸಿದ್ದು, ಅವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಮಹಿಳೆಯರು, ವೃದ್ಧರು ಎನ್ನದೇ ಪೊಲೀಸರು ದೌರ್ಜನ್ಯ ಮೆರೆದಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ರೊಟ್ಟಿ ತರುವವನ ಮೇಲೂ ದಾಳಿ: ತನ್ನ ಮನೆಯಲ್ಲಿ ಇದ್ದ ರೊಟ್ಟಿ ತಟ್ಟೆ ಎತ್ತಿಕೊಳ್ಳಲು ಒಳನುಗ್ಗಿದ ಮೈನುದ್ದೀನ್‌ ಮೇಲೂ ನಾಲ್ಕೈದು ಪೊಲೀಸರು ಒಮ್ಮೆಗೆ ದಾಳಿ ಮಾಡಿ ಮನಸೋ ಇಚ್ಛೆ ಥಳಿಸಿದ್ದರಿಂದ ಆತನ ಕಾಲು ಮುರಿದಿದೆ. ಕಣ್ಣುಗಳಿಗೆ ತೀವ್ರ ಗಾಯವಾಗಿದೆ. ಮೈನುದ್ದೀನ್ ಗಾರೆ ಕೆಲಸ ಮಾಡುತ್ತಿದ್ದ. ಈತನಿಗೆ ನಾಲ್ವರು ಮಕ್ಕಳು, ಪತ್ನಿ, ತಾಯಿ ಇದ್ದಾರೆ. ಮನೆಗೆ ಆಧಾರ ಸ್ಥಂಬವಾಗಿರುವ ಮೈನುದ್ದೀನ್ ಆಸ್ಪತ್ರೆ ಸೇರಿದ್ದರಿಂದ ಕುಟುಂಬ ಕಂಗಾಲಾಗಿದೆ. ಆಸ್ಪತ್ರೆ ಬಿಲ್ ಕಟ್ಟಲೂ ಮೈನುದ್ದೀನ್ ಕುಟುಂಬದವರಲ್ಲಿ ಹಣವಿಲ್ಲ. 

ಕನ್ನಡಿಗರ ಮೇಲೆ ಪೊಲೀಸ್‌ ದೌರ್ಜನ್ಯ: ಏಪ್ರಿಲ್ 12, ಶುಕ್ರವಾರ ಸಂಜೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಸಾಂಗೋಲ್ಲಾದಲ್ಲಿನ ಕನ್ನಡಿಗರ ಮನೆಗಳ ಮೇಲೆ 4 ಜೆಸಿಬಿಗಳು ಮುಗಿಬಿದ್ದಿವೆ. ಇದರಿಂದ ಗಾಬರಿಯಾದ ಕನ್ನಡಿಗರು ಕಾರ್ಯಾಚರಣೆಗೆ ಪ್ರತಿರೋಧವೊಡ್ಡಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ಸುಮಾರು 60 ಮಂದಿ ಇದ್ದ ಪೊಲೀಸರ ತಂಡ 'ನ್ಯಾಯಾಲಯದ ಆದೇಶ ಪಾಲಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ತಕ್ಷಣ ನಿಮ್ಮ ಮನೆಗಳಿಂದ ಹೊರ ಬನ್ನಿ, ಏನಾದರೂ ಅಪಾಯವಾದರೆ ನಾವು ಜವಾಬ್ದಾರರಲ್ಲ. ನೀವೆಲ್ಲ ಇಲ್ಲಿಂದ ದೂರ ಹೋಗಿ. ಇಲ್ಲವೇ ನಿಮ್ಮ ರಾಜ್ಯಕ್ಕೆ ವಾಪಸ್ ಆಗಿ' ಎಂದು ಅಬ್ಬರಿಸಿದ್ದಾರೆ. 

ಮತಗಟ್ಟೆಯಲ್ಲಿ ಮತದಾರರ ಸೇವಾ ಕೇಂದ್ರ ಸ್ಥಾಪನೆ: ತುಷಾರ್‌ ಗಿರಿನಾಥ್‌

ಈ ವೇಳೆ ನಿವಾಸಿಗಳು-ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಕೊನೆಗೆ 'ಎರಡು ದಿನ ಕಾಲಾವಕಾಶ ನೀಡಿ, ಮನೆಯೊಳಗಿನ ಸಾಮಗ್ರಿ, ದವಸ-ಧಾನ್ಯ, ಬಟ್ಟೆಗಳನ್ನು ಹೊರಕ್ಕೆ ತೆಗೆದುಕೊಳ್ಳುತ್ತೇವೆ' ಎಂದು ಗೋಗ ರೆದರೂ ಕೇಳದ ಪೊಲೀಸರು ಲಾಠಿ ಬೀಸಿ ದೂರ ಓಡಿಸಿದಾಗ ಹಲವರು ಗಾಯಗೊಂಡಿದ್ದಾರೆ. 'ಗೋವಾ ಕೋಸ್ಟಲ್ ರೋನ್ ಅಥಾರಿಟಿ' (ಜಿಸಿಝಡ್‌ಎಂಎ)ಗೆ ಜಾಗ ತೆರವು ಮಾಡಿಕೊಡುವ ಮುನ್ನ ಅಲ್ಲಿ ನಾಲ್ಕಾರು ದಶಕಗಳಿಂದ ವಾಸವಾಗಿರುವ 23 ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಅಥವಾ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಸೂಚಿಸಿರುವ ನ್ಯಾಯಾಲಯದ ಆದೇಶಕ್ಕೂ ಸರ್ಕಾರ ಕಿವಿಗೊಟ್ಟಿಲ್ಲ. ಕನ್ನಡಿಗರ ವಿಷಯದಲ್ಲಿ ನಿಷ್ಕರು ಣೆಯಿಂದ ವರ್ತಿಸುತ್ತಿದೆ ಎಂದು ಕನ್ನಡಿಗ ಮುಖಂಡರಾದ ಸಿದ್ದಣ್ಣ ಮೇಟಿ, ಶಿವಾನಂದ ಬಿಂಗಿ ನೋವು ತೋಡಿಕೊಂಡಿದ್ದಾರೆ.

click me!