ಬೆಳಗಾವಿ ವಿವಸ್ತ್ರ ಸಂತ್ರಸ್ತೆಗೆ 2 ಎಕರೆ, ₹5 ಲಕ್ಷ: ಸರ್ಕಾರ

By Kannadaprabha News  |  First Published Apr 16, 2024, 11:36 AM IST

ಪ್ರಕರಣದ ಎಲ್ಲ 12 ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಹ ಸಲ್ಲಿಸಲಾಗಿದೆ. ಸಂತ್ರಸ್ತೆಗೆ ಎರಡು ಎಕರೆ ಜಮೀನು ಹಾಗೂ 5 ಲಕ್ಷ ರು. ಪರಿಹಾರ ಕಲ್ಪಿಸಲಾಗಿದೆ. 


ಬೆಂಗಳೂರು(ಏ.16): ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ 12 ಆರೋಪಿಗಳನ್ನು ಬಂಧಿಸಿದ್ದು, ವಿಚಾರಣಾ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಪ್ರಕರಣ ಸಂಬಂಧ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

Latest Videos

undefined

ಬೆಳಗಾವಿಯಲ್ಲಿ ಮತ್ತೊಬ್ಬ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ; ಅಮಾನವೀಯ ಘಟನೆಗೆ ಕೊನೆಯೇ ಇಲ್ವಾ?

ಈ ವೇಳೆ ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಹಾಜರಾಗಿ, ಪ್ರಕರಣದ ಎಲ್ಲ 12 ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಹ ಸಲ್ಲಿಸಲಾಗಿದೆ. ಸಂತ್ರಸ್ತೆಗೆ ಎರಡು ಎಕರೆ ಜಮೀನು ಹಾಗೂ 5 ಲಕ್ಷ ರು. ಪರಿಹಾರ ಕಲ್ಪಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ವಿಚಾರಣಾ ನ್ಯಾಯಾಲಯಕ್ಕೆ ಕಾಲಮಿತಿ ನಿಗದಿಪಡಿಸಬೇಕು. ಇದು ಅತಿ ಅಪರೂಪದ ಪ್ರಕರಣವಾಗಿದ್ದು, ಈ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆಯ ಸಂದೇಶ ರವಾನಿಸಬೇಕಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅರ್ಜಿ ಕುರಿತು ಮುಂದಿನ ದಿನಗಳಲ್ಲಿ ಆದೇಶ ಪ್ರಕಟಿಸಲಾಗುವುದು ಎಂದು ತಿಳಿಸಿ ಪ್ರಕರಣವನ್ನು ವಿಲೇವಾರಿ ಮಾಡಿತು.

ಸಂತ್ರಸ್ತೆಯ ಆರೋಗ್ಯ ಸ್ಥಿತಿಗತಿಯ ಮೇಲೆ ನಿಗಾ ವಹಿಸಲಾಗುವುದು. ಆಕೆಯ ಮಾನಸಿಕ ಆರೋಗ್ಯ ಪರಿಗಣಿಸಿ ಒಂದು ವರ್ಷದ ಅವಧಿಯವರೆಗೆ ಎರಡು ತಿಂಗಳಿಗೊಮ್ಮೆ ತಜ್ಞರ ಸಮಾಲೋಚನೆಗೆ ಒಳಪಡಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಆ ಸಂಗತಿಗಳನ್ನು ಮೇಲ್ವಿಚಾರಣೆ ನಡೆಸಲಾಗದು ಎಂದು ನುಡಿಯಿತಲ್ಲದೆ, ಪ್ರಕರಣದ ವರದಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.

ಪ್ರಕರಣದ ಹಿನ್ನೆಲೆ:

ಕಳೆದ 2023ರ ಡಿ.11ರಂದು ಬೆಳಗಾವಿಯ ಜಿಲ್ಲೆಯ ವಂಟಮೂರಿಯಲ್ಲಿ ಪೀತಿಸುತ್ತಿದ್ದ ಯುವಕ-ಯುವತಿ ಮನೆಬಿಟ್ಟು ಹೋಗಿದ್ದರು. ಯುವತಿ ಕುಟುಂಬದವರು ಯುವಕನ ತಾಯಿಯನ್ನು ರಾತ್ರಿ ಸಮಯದಲ್ಲಿ ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಬೆತ್ತಲೆಗೊಳಿಸಿದ್ದರು. ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ಮಾಡಿದ್ದರು. ಪ್ರಕರಣ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ 2023ರ ಡಿ.11ರಂದು ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು.

click me!