Goa Mangaluru Vande Bharat Express ಬೆಂಗಳೂರು ಯಶವಂತಪುರಕ್ಕೂ ವಿಸ್ತರಣೆ! ಸಮಯ, ನಿಲುಗಡೆ ಸಂಪೂರ್ಣ ವಿವರ ಇಲ್ಲಿದೆ

Kannadaprabha News   | Kannada Prabha
Published : Oct 01, 2026, 06:25 AM IST
Bengaluru to Mangaluru Vande Bharat Expres

ಸಾರಾಂಶ

ಮಂಗಳೂರು ಸೆಂಟ್ರಲ್-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರಿನ ಯಶವಂತಪುರದವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಈ ಹೊಸ ರೈಲು ಮಂಗಳೂರು ಜಂಕ್ಷನ್ ಮಾರ್ಗವಾಗಿ ಸಂಚರಿಸಲಿದ್ದು, ಕರಾವಳಿ ಮತ್ತು ರಾಜಧಾನಿ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ. ಸಮಯ, ನಿಲುಗಡೆ ಸ್ಥಳ ತಿಳಿಯಿರಿ.

ಮಂಗಳೂರು (ಅ.1): ಕರಾವಳಿ ಕರ್ನಾಟಕದ ಬಹುದಿನಗಳ ಬೇಡಿಕೆಗೆ ಸ್ಪಂದನೆಯಾಗಿ ಮಂಗಳೂರು ಸೆಂಟ್ರಲ್-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಬೆಂಗಳೂರಿನ ಯಶವಂತಪುರದವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಇನ್ನು ಮುಂದೆ ಯಶವಂತಪುರ-ಮಡಗಾಂವ್-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮಂಗಳೂರು ಜಂಕ್ಷನ್ ಮಾರ್ಗವಾಗಿ ಸಂಚರಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಮಂಗಳೂರು ಸೆಂಟ್ರಲ್-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌

ಕರಾವಳಿ ಕರ್ನಾಟಕದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಸಂಚರಿಸುತ್ತಿರುವ ರೈಲು ಸಂಖ್ಯೆ 20646/20645 ಮಂಗಳೂರು ಸೆಂಟ್ರಲ್-ಮಡಗಾಂವ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಯಶವಂತಪುರದವರೆಗೆ ವಿಸ್ತರಿಸಿ, ಹೊಸ ರೈಲು ಸಂಖ್ಯೆ 26655/26656ರೊಂದಿಗೆ ಓಡಿಸಲು ಉದ್ದೇಶಿಸಲಾಗಿದೆ.

ಮಂಗಳೂರು ಸೆಂಟ್ರಲ್-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರ 2023ರ ಡಿಸೆಂಬರ್ 31ರಂದು ಆರಂಭಗೊಂಡಿತ್ತು. ಇದು ಮಂಗಳೂರು-ಮಡಗಾಂವ್ ನಡುವೆ ಸುಮಾರು 5 ಗಂಟೆ 30 ನಿಮಿಷಗಳ ಅವಧಿಯಲ್ಲಿ ಸಂಚರಿಸುತ್ತಿದೆ. ಈಗ ವಿಸ್ತರಣೆಯ ಬಳಿಕ ಕರಾವಳಿ ಕರ್ನಾಟಕ ನೇರವಾಗಿ ರಾಜ್ಯ ರಾಜಧಾನಿ ಬೆಂಗಳೂರಿನೊಂದಿಗೆ ವಂದೇ ಭಾರತ್ ಸಂಪರ್ಕ ಪಡೆಯಲಿದೆ.

7 ಗಂಟೆ 5 ನಿಮಿಷದ ಪ್ರಾಯೋಗಿಕ ಸಂಚಾರ:

ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಮಾರ್ಗದಲ್ಲಿ ಸೆಪ್ಟೆಂಬರ್ 10ರಂದು 16 ಬೋಗಿಗಳ ವಂದೇ ಭಾರತ್ ರೈಲಿನ ವೇಗದ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಯಶವಂತಪುರದಿಂದ ಮಂಗಳೂರು ಜಂಕ್ಷನ್‌ವರೆಗೆ 7 ಗಂಟೆ 5 ನಿಮಿಷ ಹಾಗೂ ಹಿಂದಿರುಗುವಾಗ 6 ಗಂಟೆ 49 ನಿಮಿಷಗಳಲ್ಲಿ ಸಂಚಾರ ಪೂರ್ಣಗೊಳಿಸಿತ್ತು.

ಶಿರಾಡಿ ಘಾಟ್‌ ಪ್ರದೇಶದ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆ (ಎಇಬಿ) ಹೊಂದಿರುವ ಹೊಸ ರೇಕ್‌ಗಳನ್ನುಅಳವಡಿಸಲಾಗಿತ್ತು. ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ರೈಲಿನ ವೇಗವನ್ನು ಗಂಟೆಗೆ 30 ಕಿ.ಮೀ.ಗೆ ಮಿತಿಗೊಳಿಸಲಾಗುತ್ತದೆ. ಹೊಸ ಸೇವೆಗೆ ಎರಡು ವಂದೇ ಭಾರತ್ ರೇಕ್‌ಗಳು, ಬಹುತೇಕ 8 ಬೋಗಿಗಳ ರೇಕ್‌ಗಳನ್ನು ಬಳಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

6.05ಕ್ಕೆ ಬೆಂಗಳೂರಿನಿಂದ ಹೊರಡುವ ಸಾಧ್ಯತೆ:

ರೈಲ್ವೆ ಸಚಿವಾಲಯ ಅಧಿಕೃತ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಮೂಲಗಳ ಪ್ರಕಾರ, ರೈಲು ಸಂಖ್ಯೆ 26655 ಯಶವಂತಪುರದಿಂದ ಬೆಳಗ್ಗೆ 6.05ಕ್ಕೆ ಹೊರಟು ಮಡಗಾವ್‌ಗೆ ಸಂಜೆ 7.15ಕ್ಕೆ ತಲುಪುವ ಸಾಧ್ಯತೆಯಿದೆ.

ಪ್ರಸ್ತಾವಿತ ಮಾರ್ಗದಲ್ಲಿ ಯಶವಂತಪುರ, ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ-ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್, ಕಾರವಾರ ಹಾಗೂ ಮಡಗಾಂವ್ ನಿಲ್ದಾಣಗಳು ಇರಲಿವೆ.

ಹಿಂದಿರುಗುವ ರೈಲು ಸಂಖ್ಯೆ 26656 ಮಡಗಾಂವ್‌ನಿಂದ ಬೆಳಗ್ಗೆ 5.30ಕ್ಕೆ ಹೊರಟು ಯಶವಂತಪುರಕ್ಕೆ ಸಂಜೆ 6.40ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನಿಂದ ಬೆಳಗ್ಗೆ ಸಂಚಾರ ಬೇಡಿಕೆ

ಬೆಂಗಳೂರು-ಮಂಗಳೂರು ಪ್ರಯಾಣದ ಅವಧಿಯನ್ನು ಕನಿಷ್ಠ 11 ಗಂಟೆಗೆ ಇಳಿಸಬೇಕು ಎಂಬುದು ಪ್ರಯಾಣಿಕರ ಪ್ರಮುಖ ಬೇಡಿಕೆಯಾಗಿದೆ. ಪ್ರಸ್ತಾವಿತ ಸುಮಾರು 13 ಗಂಟೆಗಳ ಪ್ರಯಾಣ ಅವಧಿ ಕಡಿಮೆಯಾದರೆ ಸೇವೆಯಿಂದ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ರೈಲು ಪ್ರಯಾಣಿಕರ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಪಶ್ಚಿಮ ಕರಾವಳಿ ರೈಲು ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್, ಮಂಗಳೂರಿನಿಂದ ಬೆಳಗ್ಗೆ ರೈಲು ಹೊರಟು ರಾತ್ರಿ ಬೆಂಗಳೂರಿನಿಂದ ವಾಪಸ್ ಬರುವಂತೆ ವೇಳಾಪಟ್ಟಿ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಮಂಗಳೂರು-ತಿರುವನಂತಪುರ ವಂದೇ ಭಾರತ್‌ನಂತೆ ಬೆಳಗ್ಗೆ ಹೊರಟು ರಾತ್ರಿ ಮರಳುವ ವ್ಯವಸ್ಥೆ ಇದ್ದರೆ ಉದ್ಯೋಗ, ವ್ಯಾಪಾರ ಹಾಗೂ ಅಧಿಕೃತ ಕೆಲಸಗಳಿಗಾಗಿ ಬೆಂಗಳೂರಿಗೆ ತೆರಳುವವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದಿದ್ದಾರೆ.

ಮಂಗಳೂರು ಸೆಂಟ್ರಲ್‌ಗೆ ಖೊಕ್‌:

ಪ್ರಸ್ತಾವಿತ ವಂದೇ ಭಾರತ್‌ ರೈಲು ಘೋಷಣೆಯಲ್ಲಿ ಮಂಗಳೂರು ಸೆಂಟ್ರಲ್‌ ಬದಲು ಜಂಕ್ಷನ್‌ಗೆ ಬಂದುಹೋಗುವಂತೆ ಮಾಡಲಾಗಿದೆ. ದಕ್ಷಿಣ ರೈಲ್ವೆ ಪ್ರಸ್ತಾವನೆಯಲ್ಲಿ ಮಂಗಳೂರು ಸೆಂಟ್ರಲ್‌ಗೆ ವಂದೇ ಭಾರತ್‌ ಬಂದುಹೋಗುವಂತೆ ಪ್ರಸ್ತಾಪಿಸಲಾಗಿತ್ತು. ಅದರಂತೆ ಮಂಗಳೂರು ಸೆಂಟ್ರಲ್‌ ವರೆಗೂ ವಂದೇ ಭಾರತ್‌ ಪ್ರಯೋಗಿಕ ಸಂಚಾರ ನಡೆದಿತ್ತು. ಆದರೆ ನೈಋತ್ಯ ರೈಲ್ವೆಯು ಈ ಪ್ರಸ್ತಾಪವನ್ನು ಕೈಬಿಟ್ಟು ಮಂಗಳೂರು ಜಂಕ್ಷನ್‌ಗೆ ಸೀಮಿತಗೊಳಿಸಿರುವುದು ರೈಲ್ವೆ ಸಂಘಟನೆಗಳ‍, ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕರಾವಳಿಯಿಂದ ಬೆಂಗಳೂರಿಗೆ ಉದ್ಯೋಗ, ವ್ಯಾಪಾರ ಹಾಗೂ ಅಧಿಕೃತ ಕೆಲಸಗಳಿಗಾಗಿ ಪ್ರತಿನಿತ್ಯ ಸಂಚರಿಸುವವರಿಗೆ ಅನುಕೂಲವಾಗುವಂತೆ ವೇಳಾಪಟ್ಟಿ ರೂಪಿಸುವುದು ಹೊಸ ವಂದೇ ಭಾರತ್ ಸೇವೆಯ ಮುಂದಿನ ಪ್ರಮುಖ ನಿರೀಕ್ಷೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೀಸೆಲ್ ಬೆಲೆ ₹16 ಜಂಪ್, ಬಸ್ ದರದಲ್ಲಿ ಎಷ್ಟು ಹೆಚ್ಚಳ? ಸಾರಿಗೆ ಸಚಿವರ ಮಹತ್ವದ ಸುಳಿವು
ಶಾಲೆ ಗೋಡೆ ಮೇಲೆ ಕವಿ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸದಿರಲು ಅನು ನಿರ್ಧಾರ