ಶಾಲೆ ಗೋಡೆ ಮೇಲೆ ಕವಿ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸದಿರಲು ಅನು ನಿರ್ಧಾರ

Published : Sep 30, 2026, 02:06 PM IST
Anu

ಸಾರಾಂಶ

ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಅಕ್ಕ ಅನು ಅವರು ಶಾಲೆಯ ಗೋಡೆಗಳ ಮೇಲೆ ನಾಯಕರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಬಿಡಿಸದಿರಲು ನಿರ್ಧರಿಸಿದ್ದಾರೆ. ಶಾಲೆಗಳು ಕೇವಲ ಮಕ್ಕಳ ಕಲಿಕೆಗೆ ಮಾತ್ರ ಸೀಮಿತವಾಗಿರಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿದೆ.

ಬೆಂಗಳೂರು: ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಕರುನಾಡಿಗೆ ಚಿರಪರಿಚಿತರು. ಸರ್ಕಾರಿ ಶಾಲೆಗಳಿಗೆ ಬಣ್ಣದ ಬೆರುಗು ನೀಡುವ ಕೆಲಸವನ್ನು ಅನು ಮಾಡುತ್ತಾರೆ. ತಮ್ಮ ತಂಡದೊಂದಿಗೆ ಗ್ರಾಮದ ಸರ್ಕಾರಿ ಶಾಲೆಗಳಲ್ಲಿಯೇ ಉಳಿದುಕೊಂಡು ಹಗಲು-ರಾತ್ರಿ ಅಂತ ಲೆಕ್ಕಿಸದೇ ಕೆಲಸ ಮಾಡುತ್ತಾರೆ. ತಮ್ಮ ಕೆಲಸದ ವಿಡಿಯೋಗಳನ್ನು ಅನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಇದೀಗ ಶಾಲೆಯೊಂದನ್ನು ಬಣ್ಣಗಳಿಂದ ಸುಂದರಗೊಳಿಸುವ ಕಾಯಕದಲ್ಲಿ ತೊಡಗಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಾವು ಏಕೆ ಶಾಲೆ ಗೋಡೆ ಮೇಲೆ ಯಾವ ಸ್ವಾತಂತ್ರ ಹೋರಾಟಗಾರರು ಸೇರಿದಂತೆ ಯಾವುದೇ ವ್ಯಕ್ತಿಗಳ ಚಿತ್ರ ಬಿಡಿಸೋದಿಲ್ಲ ಎಂಬುದನ್ನು ಗ್ರಾಮಸ್ಥರಿಗೆ ವಿವರಿಸಿದ್ದಾರೆ. ಹಾಗೆಯೇ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಸುದೀರ್ಘವಾಗಿಯೂ ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಯಾರೇ ಏನೇ ಹೇಳಿದರೂ ನಾನು ಸ್ಕೂಲ್‌ನಲ್ಲಿ ಯಾವ ನಾಯಕರ ಚಿತ್ರ ಹಾಕಲ್ಲ. ಇತ್ತೀಚೆಗೆ ಸ್ವತಂತ್ರ ಹೋರಾಟಗಾರರ ಚಿತ್ರ ಹಾಕೋದನ್ನು ಸಹ ಬಿಟ್ಟಿದ್ದೇನೆ. ನಾವು ಚಿತ್ರ ಹಾಕಿದ ಮೇಲೆ ಗೋಡೆ ಮೇಲೆ ಕೆಲವರು ಗಲೀಜು ಮಾಡ್ತಾರೆ. ರಾಯಣ್ಣ ಸ್ವತಂತ್ರ ಹೋರಾಟಗಾರರು ಆದ್ರೂ ಅವರನ್ನು ಒಂದು ಜಾತಿಗೆ ಸೀಮಿತ ಮಾಡ್ಕೊಂಡಿದ್ದಾರೆ. ರಾಯಣ್ಣನ ಫೋಟೋ ಹಾಕಿದ್ರೆ, ಲಿಂಗಾಯತರು ಬಂದು ತಮ್ಮ ನಾಯಕರ ಚಿತ್ರ ಬಿಡಿಸುವಂತೆ ಹೇಳ್ತಾರೆ. ಅಂಬೇಡ್ಕರ್ ಚಿತ್ರ ಹಾಕಿದ್ರೂ ಅದು ಸಹ ಒಂದು ಸಮುದಾಯ ಅಂತ ಹೇಳ್ತಾರೆ.

ಇನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೋ ಹಾಕೋಣ ಅಂದ್ರೆ ಅದರಲ್ಲಿಯೂ ಎಡಪಂಥಿ ಮತ್ತು ಬಲಪಂಥಿ ಅಂತ ಮಾಡಿಕೊಂಡಿದ್ದಾರೆ. ಹಾಗಾಗಿ ಇಂತಹ ವಿಷಯಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಜನರ ಮಧ್ಯೆ ನಾವಿದ್ದೇವೆ. ಹಾಗಾಗಿ ಶಾಲೆಗೆ ಇಂತಹ ಯಾವ ವಿಷಯಗಳನ್ನು ನಾವು ತೆಗೆದುಕೊಂಡು ಬರಲು ಇಷ್ಟಪಡಲ್ಲ ಎಂದು ಅನು ಸ್ಪಷ್ಟಪಡಿಸಿದ್ದಾರೆ.

ಅನು ಅಭಿಪ್ರಾಯ ಏನು?

ವಿರೋಧಿಸುವವರು ವಿಷಯವನ್ನು ಸರಿಯಾಗಿ ತಿಳಿದುಕೊಂಡು, ಬೇಕಾದರೆ ವಿರೋಧಿಸಬಹುದು. ಆದರೆ ವಿಷಯವನ್ನು ತಿರುಚಿ ಬರೆದು, ನಮ್ಮ ನಮ್ಮ ಜನಾಂಗದ ನಾಯಕರ ಬಗ್ಗೆ ನಾನು ಸಲೀಸಾಗಿ ಮಾತನಾಡುತ್ತಿದ್ದೇನೆ ಎಂದು ಏನೇನೋ ಆರೋಪ ಮಾಡುತ್ತಾ ಅರಚಿ ಕೂಗಾಡುವುದು ಸರಿಯಲ್ಲ. ನನಗೆ ಆದ ಅನುಭವಗಳನ್ನು ನಾನು ಹಂಚಿಕೊಂಡಿದ್ದೇನೆ. ರಾಷ್ಟ್ರ ನಾಯಕರಿಗೆ ಇರುವ ಗೌರವದಿಂದಲೇ ಶಾಲೆಗಳ ಗೋಡೆಗಳ ಮೇಲೆ ಅವರ ಚಿತ್ರಗಳನ್ನು ಬಿಡಿಸುವ ಪ್ರಯತ್ನವನ್ನು ನಾನು ಕೈಬಿಟ್ಟಿದ್ದೇನೆ.

ಕಾರಣ, ಕೆಲವು ಕಡೆ ಆ ಚಿತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಊರಿನಲ್ಲಿ ಒಬ್ಬ ನಾಯಕನ ಚಿತ್ರವಿದ್ದರೆ ಮತ್ತೊಬ್ಬರಿಗೆ ಇಷ್ಟವಾಗದ ಸಂದರ್ಭಗಳೂ ಇವೆ. ಸಾರ್ವಜನಿಕರು ಅಥವಾ ವಿವಿಧ ಸಮುದಾಯದವರು ಚಿತ್ರಗಳಿಗೆ ಮಸಿ ಬಳಿದಿರುವ ಅನುಭವವೂ ಇದೆ.ಅದಕ್ಕಾಗಿಯೇ ನಾನು ಸೀದಾ ಮತ್ತು ನೇರವಾಗಿ ಮಾತನಾಡುತ್ತಿದ್ದೇನೆ. ಯಾರ ಒತ್ತಾಯಕ್ಕೂ ನಾನು ಮಣಿಯುವುದಿಲ್ಲ.

ಶಾಲೆ ಶಾಲೆಯಾಗಿಯೇ ಇರಬೇಕು. ಮಕ್ಕಳಿಗೆ ಅಗತ್ಯವಿರುವ, ಅವರ ಕಲಿಕೆಗೆ ಮತ್ತು ಕಲ್ಪನಾ ಶಕ್ತಿಗೆ ಪೂರಕವಾದ ಚಿತ್ರಗಳನ್ನು ಮಾತ್ರ ಬಿಡಿಸುತ್ತಿದ್ದೇವೆ. ಕೆಲವು ಕಡೆ ಅದನ್ನೂ ಮಾಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಶಾಲೆಗಳನ್ನು ಇನ್ನಷ್ಟು ಶಿಸ್ತುಬದ್ಧವಾಗಿ, ಸ್ವಚ್ಛವಾಗಿ ಮತ್ತು ಮಕ್ಕಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಇಟ್ಟುಕೊಂಡು ಬರುತ್ತಿದ್ದೇವೆ.

ನಮ್ಮ ಉದ್ದೇಶ ಯಾರನ್ನೂ ಅವಮಾನಿಸುವುದಲ್ಲ. ಶಾಲೆ ಮಕ್ಕಳಿಗಾಗಿ ಎಂಬುದನ್ನು ಮಾತ್ರ ಸ್ಪಷ್ಟವಾಗಿ ಹೇಳುವುದು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಜಯನಗರದ ಅರಸ ಕೆಂಪಣ್ಣ ಶಿವಾಜಿ ಯುದ್ಧದಲ್ಲಿ ಗೆದ್ದಿದ್ದು ಶಕ್ತಿದೇವತೆ ಕೊಟ್ಟ ಖಡ್ಗದಿಂದ: NCERT ಪಠ್ಯದಲ್ಲಿ ಉಲ್ಲೇಖ
ಅಡುಗೆ ಎಣ್ಣೆ ಬಳಸಲು ಮಾರ್ಗಸೂಚಿ: ಹೋಟೆಲ್, ಮನೆಗಳಿಂದ ಬಳಸಿದ ಎಣ್ಣೆ ಸಂಗ್ರಹಿಸಿ ಬಯೋಡೀಸೆಲ್ ತಯಾರಿಸಲು ಪ್ಲಾನ್!