
ಬೆಂಗಳೂರು, (ಮೇ.11): ರಾಜ್ಯದಲ್ಲಿ ಹೆಚ್ಚುತ್ತಿರುವ ವ್ಯಾಕ್ಸಿನ್ ಬೇಡಿಕೆಯನ್ನು ಪೂರೈಸಲು ಎರಡು ಕೋಟಿ ಕೋವಿಡ್ ಲಸಿಕೆಯನ್ನು ಜಾಗತಿಕ ಟೆಂಡರ್ ಮೂಲಕ ಖರೀದಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಇದರ ಜತೆಗೆ 3 ಕೋಟಿ ವ್ಯಾಕ್ಸಿನ್ ಖರೀದಿಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ 1 ಕೋಟಿ ಕೋವ್ಯಾಕ್ಸಿನ್, 2 ಕೋಟಿ ಕೋವಿಶೀಲ್ಡ್ ಲಸಿಕೆ ಸೇರಿದೆ. 18 ವರ್ಷದಿಂದ ಮೇಲ್ಪಟ್ಟು ಜನರಿಗೆ ಲಸಿಕೆ ಕೊಡಲು ಆರಂಭಿಸಿದ ನಂತರ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಖರೀದಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಡಿಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಆಖ್ತರ್, ಔಷಧಿ ಖರೀದಿ ಉಸ್ತುವಾರಿ ಅಂಜುಂ ಪರ್ವೇಜ್, ರಾಜ್ಯ ಔಷಧ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಲತಾ ಕುಮಾರಿ, ಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ್ ಪಾಟೀಲ್ ಸಭೆಯಲ್ಲಿ ಭಾಗಿಯಾಗಿದ್ದರು.
ಆಕ್ಸಿಜನ್ ಆಯ್ತು ಈಗ ಲಸಿಕೆ: ಯಾಕಿಷ್ಟು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ?
ಸಭೆಯ ನಂತರ ಮಾಹಿತಿ ನೀಡಿದ ಡಿಸಿಎಂ, ಈವರೆಗೂ ಕೇಂದ್ರ ಸರಕಾರ ಹಂಚಿಕೆ ಮಾಡುತ್ತಿದ್ದ ಲಸಿಕೆಯನ್ನು ಬಿಟ್ಟರೆ ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್ ಕರೆದು ಖಾಸಗಿ ಕಂಪನಿಗಳಿಂದ ಖರೀದಿ ಮಾಡಿರಲಿಲ್ಲ. ಇವತ್ತೇ ಟೆಂಡರ್ ಕರೆಯಲು ಸೂಚಿಸಲಾಗಿದ್ದು, ಯಾವ ಕಂಪನಿ ಬೇಕಾದರೂ ಟೆಂಡರ್‌ನಲ್ಲಿ ಭಾಗವಹಿಸಬಹುದು. ಏಳು ದಿನದ ಒಳಗಾಗಿ ಈ ಪ್ರಕ್ರಿಯೆ ಮುಗಿಸಿ ಟೆಂಡರ್ ಪಡೆಯುವ ಕಂಪನಿಯು ಲಸಿಕೆಯನ್ನು ಪೂರೈಕೆ ಆರಂಭಿಸಬೇಕು ಎಂದರು.
1 ಲಕ್ಷ ಪಲ್ಸ್ ಅಯಕ್ಸಿ ಮೀಟರ್ ಖರೀದಿ :
ಸೋಂಕಿತರಿಗೆ ಅಗತ್ಯವಾದ ಪಲ್ಸಾಕ್ಸಿ ಮೀಟರ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕೂಡಲೇ ಒಂದು ಲಕ್ಷ ಪಲ್ಸಾಕ್ಸಿ ಮೀಟರ್‌ಗಳನ್ನು ಖರೀದಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಅವುಗಳನ್ನು ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಹಂಚಲಾಗುವುದು. ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮತ್ತು ಸೋಂಕಿತರು ಗುಣಮುಖರಾದ ನಂತರ ವಾಪಸ್ ಪಡೆಯುವುದು ಆಯಾ ಡಿಎಚ್‌ಒ & ಟಿಎಚ್‌ಒ ಹೊಣೆ. ಈ ಮೂಲಕ ಪಲ್ಸಾಕ್ಸಿ ಮೀಟರ್ ಬ್ಯಾಂಕ್ ಮಾಡುವ ಉದ್ದೇಶ ಇದೆ ಎಂದು ಡಿಸಿಎಂ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ