OBC Reservation: ಜಾತಿ ಗಣತಿ ಆಧರಿಸಿ ಒಬಿಸಿ ಮೀಸಲು ಕೊಡಿ: ಸಿದ್ದರಾಮಯ್ಯ

Published : May 12, 2022, 09:32 AM IST
OBC Reservation: ಜಾತಿ ಗಣತಿ ಆಧರಿಸಿ ಒಬಿಸಿ ಮೀಸಲು ಕೊಡಿ: ಸಿದ್ದರಾಮಯ್ಯ

ಸಾರಾಂಶ

*  ವರದಿ ಆಧರಿಸಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ಗೆ ಕೇಳಿ *  ಪರಿಸ್ಥಿತಿ ಕೈ ಮೀರುವ ಮೊದಲೇ ಎಚ್ಚೆತ್ತುಕೊಳ್ಳಿ *   ಸಿಎಂಗೆ ವಿಪಕ್ಷ ನಾಯಕ ಪತ್ರ  

ಬೆಂಗಳೂರು(ಮೇ.12):  ಹಿಂದುಳಿದ ವರ್ಗಗಳ ಮೀಸಲಾತಿ ಪ್ರಕ್ರಿಯೆಗೆ ಕಾಯದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದಕ್ಕೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (Caste Census) ವರದಿಯೊಂದೇ ಪರಿಹಾರವಾಗಿದ್ದು, ಈ ವರದಿ ಆಧಾರದ ಮೇಲೆ ಒಬಿಸಿ ಮೀಸಲಾತಿ ರೂಪಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ಅದರ ಆಧಾರದ ಮೇಲೆಯೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅವಕಾಶ ಕೋರಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಒತ್ತಾಯಿಸಿದ್ದಾರೆ.

ಸುಪ್ರೀಂ ಕೋರ್ಟ್‌(Supreme Court) ಆದೇಶದಿಂದ ಹಿಂದುಳಿದ ವರ್ಗಗಳಿಗೆ ಆಗಲಿರುವ ಈ ಅನ್ಯಾಯವನ್ನು ತಪ್ಪಿಸಲು ರಾಜ್ಯ ಸರ್ಕಾರ(Government of Karnataka) ಕಾನೂನು ತಜ್ಞರ ಜೊತೆ ಸಮಾಲೋಚಿಸಿ, ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಕಾನೂನು ಹೋರಾಟಕ್ಕೆ ತಯಾರಾಗಬೇಕು. ಪರಿಸ್ಥಿತಿ ಕೈ ಮೀರಿ ಹೋಗುವ ಮೊದಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಬೆಳವಣಿಗೆಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ದಿಂಬು, ಹಾಸಿಗೆ ಹಗರಣ ಮುಚ್ಚಿ ಹಾಕಲಿಲ್ವಾ?: ಸಿದ್ದು ವಿರುದ್ಧ ಎಸ್‌ಟಿಎಸ್‌ ಗರಂ

ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳು ವಿಚಾರಣೆಗೆ ಬಂದಾಗೆಲ್ಲ ಸುಪ್ರೀಂ ಕೋರ್ಟ್‌ ವಿಸ್ತೃತ, ವಿಶ್ವಾಸಾರ್ಹ ಅಂಕಿ-ಅಂಶಗಳ ಆಧಾರವನ್ನು ಕೇಳುತ್ತಾ ಬಂದಿದೆ. ಇದಕ್ಕೆ ಕರ್ನಾಟಕದಲ್ಲಿ ನಡೆದಂತೆ ಮನೆ-ಮನೆಗೆ ಹೋಗಿ ಸಂಗ್ರಹಿಸಿದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೇ ಸರಿಯಾದ ಉತ್ತರವಾಗಿದೆ. ಸುಪ್ರೀಂ ಕೋರ್ಟ್‌ ಆದೇಶದಿಂದ ಸಾಮಾಜಿಕ ನ್ಯಾಯದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಯಿದ್ದು, ರಾಜ್ಯ ನಡೆಸಿರುವ ಸಮೀಕ್ಷಾ ವರದಿ ಆಧಾರವಿಟ್ಟುಕೊಂಡು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ರಾಜಕೀಯ ಕ್ಷೇತ್ರಕ್ಕೆ ಅನ್ವಯಿಸಲಾಗದು ಎಂಬ ಆದೇಶವನ್ನು ಸುಪ್ರೀಂ ಕೋರ್ಟ್‌ ಪುನರುಚ್ಚಾರ ಮಾಡಿದೆ. ಈ ಸಂಬಂಧ ಪರಿಷ್ಕೃತ ರಾಜಕೀಯ ಮೀಸಲಾತಿ ತಕ್ಷಣಕ್ಕೆ ಲಭ್ಯ ಇಲ್ಲದೆ ಹೋದರೆ ಅದಕ್ಕಾಗಿ ಕಾಯದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡಗಳ ಮೀಸಲು(Reservation) ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳೆಂದು ಪರಿಗಣಿಸಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಮಂಗಳವಾರ ಆದೇಶ ಮಾಡಿದೆ. ಬೇರೆ ರಾಜ್ಯಗಳಲ್ಲಿ ಅಂಕಿ-ಅಂಶಗಳ ಕೊರತೆ ಇದೆ. ಆದರೆ ರಾಜ್ಯದಲ್ಲಿ ಕಾಂತರಾಜ್‌ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗದ ವರದಿ ಸಿದ್ಧವಿದೆ.

ಇದನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಸುಪ್ರೀಂ ಕೋರ್ಟ್‌ ಹಿಂದಿನ ತನ್ನ ಆದೇಶಗಳಲ್ಲಿ ರಾಜ್ಯ ಸರ್ಕಾರಗಳು ಈಗಾಗಲೇ ನಡೆಸಿರುವ ಸಮೀಕ್ಷೆಯ(Survey) ಅಂಕಿ-ಅಂಶ ಮತ್ತು ಮಾಹಿತಿಯನ್ನು ಹೊಸ ಆಯೋಗಕ್ಕೆ ನೀಡಬಹುದು ಎಂದು ಹೇಳಿದೆ. ಹೀಗಾಗಿ ಕಾಲಹರಣ ಮಾಡದೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್