ಪಂಚಮಸಾಲಿ ಮೀಸಲು ವರದಿ ಪ್ರತಿ ನೀಡಿ: ಹೈಕೋರ್ಟ್‌

By Kannadaprabha News  |  First Published May 30, 2023, 8:53 AM IST

ಕನ್ನಡ ಭಾಷೆಯಲ್ಲಿರುವ ವರದಿಯನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಿ ಸಲ್ಲಿಸುವಂತೆ ರಾಜ್ಯ ಅಡ್ವೋಕೇಟ್‌ ಜನರಲ್‌ ಅವರಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದ ನ್ಯಾಯಾಲಯ 


ಬೆಂಗಳೂರು(ಮೇ.30):  ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಸೋಮವಾರ ಪರಿಶೀಲಿಸಿದ ಹೈಕೋರ್ಟ್‌, ಅದರ ಪ್ರತಿಯನ್ನು ಅರ್ಜಿದಾರರ ಮತ್ತು ಸರ್ಕಾರದ ಪರ ವಕೀಲರಿಗೆ ಒದಗಿಸುವಂತೆ ನ್ಯಾಯಾಲಯದ ಅಧಿಕಾರಿಗೆ ಸೂಚಿಸಿತು.

ಪಂಚಮಸಾಲಿ ಉಪ ಪಂಗಡಕ್ಕೆ ಮೀಸಲಾತಿ ನೀಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿದ್ದ ಮಧ್ಯಂತರ ವರದಿ ಕಾನೂನು ಬಾಹಿರ ಎಂದು ಘೊಷಣೆ ಮಾಡಲು ಕೋರಿ ಬೆಂಗಳೂರಿನ ಡಿ.ಜಿ.ರಾಘವೇಂದ್ರ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿತು. ಅಲ್ಲದೆ, ಕನ್ನಡ ಭಾಷೆಯಲ್ಲಿರುವ ವರದಿಯನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಿ ಸಲ್ಲಿಸುವಂತೆ ರಾಜ್ಯ ಅಡ್ವೋಕೇಟ್‌ ಜನರಲ್‌ ಅವರಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

Tap to resize

Latest Videos

ಕೆಲವರ ಒತ್ತಡ ತಾಳಲಾರದೇ ಕಣ್ಣೀರಿಟ್ಟ ಶ್ರೀಗಳು: ಸಂಗಮೇಶ ಬಬಲೇಶ್ವರ ಆರೋಪ

ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ 2(ಬಿ) ಪ್ರವರ್ಗದಲ್ಲಿ ಮುಸ್ಲಿಂ ಸಮುದಾಯಕ್ಕೆ ಕಲ್ಪಿಸಲಾಗಿದ್ದ ಮೀಸಲಾತಿಯನ್ನು ರದ್ದು ಮಾಡಿದ ಹಿಂದಿನ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಅರ್ಜಿ ಸುಪ್ರೀಂ ಕೋರ್ಚ್‌ನಲ್ಲಿ ವಿಚಾರಣಾ ಹಂತದಲ್ಲಿದ್ದು, ಜು.25ರಂದು ವಿಚಾರಣೆಗೆ ಬರಲಿದೆ. ಸುಪ್ರಿಂ ಕೋರ್ಚ್‌ನಲ್ಲಿ ಬೆಳವಣಿಗೆ ಆಧರಿಸಿ, ಈ ಪಿಐಎಲ್‌ ಅನ್ನು ಹೈಕೋರ್ಚ್‌ನಲ್ಲಿ ವಿಚಾರಣೆಗೆ ನಿಗದಿಪಡಿಸಲು ಕೋರಲು ಅರ್ಜಿದಾರರು ಮತ್ತು ಪ್ರತಿವಾದಿಗಳು ಸ್ವತಂತ್ರವಾಗಿದ್ದಾರೆ ಎಂದು ನ್ಯಾಯಪೀಠ ಇದೇ ವೇಳೆ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿ ನಮಗೆ ಲಭ್ಯವಾಗಿಲ್ಲ. ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆ ಅಡಿ ಕೋರಿದ್ದರೂ ಈವರೆಗೂ ವರದಿ ದೊರೆತಿಲ್ಲ. ವರದಿಯಲ್ಲಿನ ಅಂಶಗಳನ್ನು ಪರಿಗಣಿಸಿ ಮುಂದಿನ ವಾದ ಮಂಡಿಸಬೇಕಿದೆ ಎಂದು ವಿವರಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ತೆಗೆದು ಪರಿಶೀಲನೆ ನಡೆಸಿತು. ನಂತರ ವರದಿಯನ್ನು ಅಡ್ವೋಕೇಟ್‌ ಜನರಲ್‌ ಹಾಗೂ ಅರ್ಜಿದಾರರ ವಕೀಲರಿಗೆ ಒದಗಿಸುವಂತೆ ನ್ಯಾಯಾಲಯದ ಅಧಿಕಾರಿಗೆ ಸೂಚಿಸಿತು. ರಾಜ್ಯ ಅಡ್ವೋಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಲಹೆ, ಸೂಚನೆ ಪಡೆಯಲು ಎರಡು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು.

click me!