
ಬೆಂಗಳೂರು (ಸೆ.04): ಯೂಟೂಬರ್ ಸಮೀರ್ ಮೇಲೆ ದಾಖಲಾಗಿರುವುದು ಒಂದು ಸುಳ್ಳು ಕೇಸು. ಸಮೀರ್‌ನ ಎಐ ವಿಡಿಯೋದಲ್ಲಿ ಬಂದಿರುವ ಮಾಹಿತಿ ಸಂಪೂರ್ಣ ಸತ್ಯ. ಈ ವಿಡಿಯೋದಲ್ಲಿ ಬೆಳ್ತಂಗಡಿ ಪೊಲೀಸರು ಧಣಿಗಳ ಚಾಟುಗಳು ಎಂಬ ಬದ ಬಳಕೆ ಮಾಡಿದ್ದಕ್ಕೆ ಇಷ್ಟೊಂದು ಗಂಭೀರ ತನಿಖೆ ಮಾಡುತ್ತಿದ್ದಾರೆ. ಸಮೀರ್ ಬೆಂಬಲಕ್ಕೆ ನಾವಿರುತ್ತೇವೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾನೆ.
ಧರ್ಮಸ್ಥಳದ ವಿರುದ್ಧ ಸುಳ್ಳು ಮಾಹಿತಿ ಇರುವ ಕೃತಕ ಬುದ್ಧಿಮತ್ತೆ (AI) ವಿಡಿಯೋ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಯೂಟ್ಯೂಬರ್ ಸಮೀರ್ ಎಂ.ಡಿ. ಅವರ ಬನ್ನೇರುಘಟ್ಟ ಬಳಿಯಿರುವ ನಿವಾಸದಲ್ಲಿ ಬೆಳ್ತಂಗಡಿ ಪೊಲೀಸರು ಮತ್ತು ಎಫ್‌ಎಸ್‌ಎಲ್ (FSL) ತಂಡ ಜಂಟಿಯಾಗಿ ಮಹಜರು ನಡೆಸಿದರು. ಸುಮಾರು ಆರು ಗಂಟೆಗಳ ಕಾಲ ನಡೆದ ಈ ಪರಿಶೀಲನೆಯ ನಂತರ, ಪೊಲೀಸರು ಸಮೀರ್ ನಿವಾಸದಿಂದ ಕ್ಯಾಮರಾ, ಕಂಪ್ಯೂಟರ್, ಹಾರ್ಡ್ ಡಿಸ್ಕ್, ಮೊಬೈಲ್ ಫೋನ್‌ಗಳು ಸೇರಿದಂತೆ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡರು.
ಪೊಲೀಸರ ಪರಿಶೀಲನೆಯ ನಂತರ ಯೂಟ್ಯೂಬರ್ ಸಮೀರ್ ಪರವಾಗಿರುವ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಮಾಧ್ಯಮಗಳೊಂದಿಗೆ ಮಾತನಾಡಿ, 'ಇದು ಯಾವುದೇ ರೀತಿಯ ದಾಳಿ ಅಲ್ಲ. ಧರ್ಮಸ್ಥಳ ಠಾಣೆಯಲ್ಲಿ ಸಮೀರ್ ಮೇಲೆ ಒಂದು ಕೇಸು ದಾಖಲಾಗಿತ್ತು. ವಿಡಿಯೋದಲ್ಲಿ ಅವರು ಬಳಸಿದ್ದ 'ಚಾಟು' ಎಂಬ ಪದಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿದೆ. ಅದರ ತನಿಖೆಗಾಗಿ ಪೊಲೀಸರು ಇಲ್ಲಿಗೆ ಸ್ಥಳ ಮಹಜರು ಮಾಡಲು ಬಂದಿದ್ದರು' ಎಂದು ಹೇಳಿದರು.
ಸಮೀರ್ ಮನೆಯಲ್ಲಿ ಮಹಜರು ಪ್ರಕ್ರಿಯೆಯನ್ನು ಎಫ್‌ಎಸ್‌ಎಲ್‌ನವರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಸೌಜನ್ಯ ಅಥವಾ ಆನೆ ಮಾವುತ ಸಾವಿನ ಪ್ರಕರಣಗಳಲ್ಲಿ ಈ ರೀತಿಯ ವೃತ್ತಿಪರ ಕೆಲಸ ನಡೆದಿರಲಿಲ್ಲ. ಮಹಜರು ಮಾಡಿದ ನಂತರ ಬೆಳ್ತಂಗಡಿ ಪೊಲೀಸರು, ಮೊಬೈಲ್, ಕ್ಯಾಮೆರಾ, ಕಂಪ್ಯೂಟರ್, ಹಾರ್ಡ್ ಡಿಸ್ಕ್ ಜಪ್ತಿ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದಾರೆ. ಸಮೀರ್ ವಿರುದ್ಧ ದಾಖಲಾಗಿರುವುದು ಸುಳ್ಳು ಕೇಸು. ನಾವು ಸಂಪೂರ್ಣ ತನಿಖೆಗೆ ಸಹಕಾರ ನೀಡುತ್ತೇವೆ ಎಂದರು.
ಧಣಿಗಳ ಚಾಟುಗಳು' ಪದಕ್ಕಾಗಿ ತನಿಖೆ:
ಸಮೀರ್ ಅವರ ಎಐ ವಿಡಿಯೋದಲ್ಲಿ ಬಂದಿರುವ ಮಾಹಿತಿ ಸಂಪೂರ್ಣ ಸತ್ಯ. ಯಾವುದೇ ಸುಳ್ಳು ಅಂಶಗಳಿಲ್ಲ. 'ಬೆಳ್ತಂಗಡಿ ಪೊಲೀಸರು ಧಣಿಗಳ ಚಾಟುಗಳು' ಎಂದು ಸಮೀರ್ ಉಲ್ಲೇಖಿಸಿದ್ದರಿಂದ ಇದನ್ನು ಪೊಲೀಸರು ವೈಯಕ್ತಿಕವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಸಮೀರ್ ಎಂ.ಡಿ.ಗೆ ತಮ್ಮ ಬೆಂಬಲ ಯಾವಾಗಲೂ ಇರುತ್ತದೆ. ಸದ್ಯ ಪೊಲೀಸರು ಜಪ್ತಿ ಮಾಡಿರುವ ದಾಖಲೆಗಳ ಆಧಾರದ ಮೇಲೆ ಮುಂದಿನ ತನಿಖೆಯನ್ನು ನಡೆಸಲಾಗುವುದು ಎಂದು ತಿಳಿದುಬಂದಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳು ಏನಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ