ಪ್ರಧಾನಿ ಮೋದಿ ಮಾರ್ಗದಲ್ಲಿ ಪತ್ತೆಯಾದ ಜಿಲೆಟಿನ್‌ ಕಡ್ಡಿಗಳು ಪತ್ತೆ; ಓರ್ವ ಶಂಕಿತನ ಬಂಧನ

Published : May 11, 2026, 05:20 AM IST
narendra modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟ್‌ ಆಫ್‌ ಲಿವಿಂಗ್‌ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಎರಡು ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿ ಆತಂಕ ಸೃಷ್ಟಿಸಿವೆ. ಈ ಸಂಬಂಧ ಸ್ಫೋಟದ ಬೆದರಿಕೆ ಕರೆ ಮಾಡಿದ್ದ ಶಂಕಿತನನ್ನು ವಶಕ್ಕೆ ಪಡೆಯಲಾಗಿದ್ದು, ಭದ್ರತಾ ಲೋಪದ ಕುರಿತು ತನಿಖೆಗಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಬೆಂಗಳೂರು/ರಾಮನಗರ:  ಆರ್ಟ್‌ ಆಫ್‌ ಲಿವಿಂಗ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಭಾನುವಾರ ಬೆಳಗ್ಗೆ ಎರಡು ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ನ ಧ್ಯಾನಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ತೆರಳುವ ಒಂದೂವರೆ ತಾಸು ಮೊದಲು ಕಗ್ಗಲೀಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ತಾತಗುಣಿ ಬಳಿಯ ಒಡೆಯರಹಳ್ಳಿ ಗೇಟ್‌ ಬಳಿ ಬೆಳಗ್ಗೆ 10.30ರ ಸುಮಾರಿಗೆ ಈ ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿವೆ.

ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ, ಪ್ರಕರಣ ಕುರಿತು ತನಿಖೆಗೆ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತನಿಖಾ ತಂಡಗಳನ್ನೂ ರಚಿಸಲಾಗಿದೆ.

ಅನುಮಾನಾಸ್ಪದ ಪ್ಯಾಕೆಟ್‌ನಲ್ಲಿ ಪತ್ತೆ

ನೈಸ್ ರಸ್ತೆ ಜಂಕ್ಷನ್‌ನಿಂದ ಸುಮಾರು ಒಂದು ಕಿಲೋಮೀಟರ್ ಹಾಗೂ ರಸ್ತೆಯಿಂದ ಸುಮಾರು 50 ಮೀಟರ್‌ ದೂರದಲ್ಲಿರುವ ಕಾಂಪೌಂಡ್ ಬಳಿ ಅನುಮಾನಾಸ್ಪದ ಪ್ಯಾಕೆಟ್ ಒಂದನ್ನು ಕರ್ತವ್ಯ ನಿರತ ಕಾನ್‌ಸ್ಟೆಬಲ್‌ ಗಮನಿಸಿದ್ದಾರೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಕಂಡುಬಂದಿದೆ. ತಕ್ಷಣ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆ್ಯಂಟಿ ಸಬೊಟೇಜ್ ಚೆಕ್ (ಎಎಸ್‌ಸಿ) ತಂಡ, ಬಾಂಬ್‌ ನಿಷ್ಕ್ರಿಯ ದಳ, ಎಫ್‌ಎಸ್‌ಎಲ್‌ ತಂಡ ಸ್ಥಳಕ್ಕೆ ದೌಡಾಯಿಸಿ ತೀವ್ರ ತಪಾಸಣೆ ನಡೆಸಿ ಜಿಲೆಟಿನ್ ಕಡ್ಡಿಗಳನ್ನು ತೆರವುಗೊಳಿಸಿದರು. ಯಾವುದೇ ಅಪಾಯವಿಲ್ಲ ಎಂದು ಖಚಿತವಾದ ನಂತರ ಪ್ರಧಾನಿಗಳು ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ಬೆಂಗಳೂರು ನಗರ ಪೊಲೀಸರು ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.

ಹೈ ಅಲರ್ಟ್‌:

ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ ನಂತರ ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ನ ಧ್ಯಾನಮಂದಿರ ಉದ್ಘಾಟನೆಗೆ ಪ್ರಧಾನಿ ತೆರಳಬೇಕಿತ್ತು. ಆದರೆ ಅದಕ್ಕೂ ಮುನ್ನ ಜಿಲೆಟಿನ್‌ ಕಡ್ಡಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್‌ ಘೋಷಿಸಿದರು. ಎಚ್‌ಎಎಲ್‌ ಏರ್‌ಪೋರ್ಟ್‌ನಿಂದ ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ವರೆಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಯಾವುದೇ ಅನಾಹುತ ಸಂಭವಿಸದ ಹಿನ್ನೆಲೆಯಲ್ಲಿ ಪೊಲೀಸರು ನಿಟ್ಟುಸಿರು ಬಿಟ್ಟರು.

ಪ್ರಧಾನಿ ಸಾಗುವ ದಾರಿ ಉದ್ದಕ್ಕೂ 7 ಹಂತದ ಭದ್ರತೆ ಕಲ್ಪಿಸಲಾಗಿರುತ್ತದೆ. ಅಲ್ಲದೆ ಒಂದು ವಾರ ಮುಂಚಿತವಾಗಿ ತೀವ್ರ ಪರಿಶೀಲನೆ ನಡೆಸುತ್ತಾರೆ. ಇದರ ನಡುವೆಯೂ ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿರುವುದು ಪೊಲೀಸರ ತಲೆ ಬಿಸಿ ಹೆಚ್ಚಿಸಿತ್ತು.

ಅಪರಿಚಿತನ ಕರೆಯಿಂದ ಎಚ್ಚೆತ್ತ ಪೊಲೀಸರು

ಬೆಳಗ್ಗೆ 8 ಗಂಟೆ ಸುಮಾರಿಗೆ ತುರ್ತು ಸಹಾಯವಾಣಿ 112ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಆರ್ಟ್ ಆಫ್ ಲಿವಿಂಗ್ ಬಳಿ ಸ್ಫೋಟ ನಡೆಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ತಕ್ಷಣ ಅಲರ್ಟ್ ಆದ ಬೆಂಗಳೂರು ಮತ್ತು ರಾಮನಗರ ಪೊಲೀಸರು ತಪಾಸಣೆ ಚುರುಕುಗೊಳಿಸಿದ್ದರು. ಬೆಂಗಳೂರು ಪೊಲೀಸರು ತಕ್ಷಣ ಎಚ್‌ಎಎಲ್‌ ಬಳಿ ತೀವ್ರ ಶೋಧ ನಡೆಸಿದ್ದಾರೆ. ಈ ಮಧ್ಯೆ, ರಾಮನಗರ ಪೊಲೀಸರು ಆರ್ಟ್‌ ಆಫ್‌ ಲಿವಿಂಗ್‌ ಸುತ್ತಮುತ್ತ ತೀವ್ರ ತಪಾಸಣೆ ನಡೆಸಿದಾಗ ಆಶ್ರಮದ ಹೊರಗಿನ ರಸ್ತೆಯ 50 ಮೀಟರ್‌ ದೂರದಲ್ಲಿ ಕಸದ ಬಳಿ 5 ಇಂಚಿನ ಎರಡು ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದೆ.

ಬೆದರಿಕೆ ಹಾಕಿದವನನ್ನು ವಶಕ್ಕೆ ಪಡೆದು ವಿಚಾರಣೆ 

ಸ್ಫೋಟದ ಬೆದರಿಕೆ ಕರೆ ಮಾಡಿದ್ದ ಶಂಕೆ ಮೇರೆಗೆ ಕೋರಮಂಗಲ ಠಾಣೆ ಪೊಲೀಸರು ಲೋಹಿತ್‌ (40) ಎಂಬಾತನನ್ನು ಕೋರಮಂಗಲದ ಕೆಎಚ್‌ಬಿ ಕಾಲೊನಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಈತನನ್ನು ರಹಸ್ಯ ಸ್ಥಳದಲ್ಲಿರಿಸಿ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್‌ ಸುಜಿತಾ ಅವರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಈತ ಹಿಂದೆಯೂ ಗಣ್ಯರು ನಗರಕ್ಕೆ ಬಂದಾಗಲೆಲ್ಲ ಇದೇ ರೀತಿ ಹುಸಿ ಬಾಂಬ್ ಕರೆ ಮಾಡುತ್ತಿದ್ದ ವಿಷಯ ಬಯಲಾಗಿದೆ. ಹಿಂದೆ ಈತನನ್ನು ವಶಕ್ಕೆ ಪಡೆದಿದ್ದಾಗ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಕಾರಣಕ್ಕೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿಕೊಡಲಾಗಿತ್ತು. ಲೋಹಿತ್‌ ಪದವೀಧರನಾಗಿದ್ದು, ಈತನ ತಂದೆ-ತಾಯಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಕೌಟುಂಬಿಕ ವಿಚಾರದಿಂದಾಗಿ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ತನಿಖೆಗಾಗಿ ನಾಲ್ಕು ತಂಡ ರಚನೆ

ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣದ ತನಿಖೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ 50 ಪೊಲೀಸರನ್ನೊಳಗೊಂಡ ನಾಲ್ಕು ತಂಡಗಳನ್ನು ರಚಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ ಶ್ರೀನಿವಾಸ್‌ ಗೌಡ ಆದೇಶಿಸಿದ್ದಾರೆ. ಜಿಲೆಟಿನ್ ಕಡ್ಡಿ ಹೇಗೆ ಬಂತು? ಯಾರು ತಂದು ಹಾಕಿದ್ದಾರೆ? ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಪತ್ತೆಯಾದ ಜಿಲೆಟಿನ್ ಕಡ್ಡಿಗಳು ಕಲ್ಲು ಕ್ವಾರಿ ಸ್ಫೋಟಿಸಲು ಬಳಸುವಂಥ ಸ್ಫೋಟಕ ಎಂಬ ಅನುಮಾನದ ಮೇರೆಗೆ ತಾತಗುಣಿ ಸುತ್ತಮುತ್ತಲಿನ ಕಾರ್ಮಿಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ತಾತಗುಣಿ ಸಮೀಪದ ಆಶ್ರಮದ ಹೊರಗಡೆ ಎರಡು ಜಿಲೆಟಿನ್ ಕಡ್ಡಿಗಳು ಸಿಕ್ಕಿದೆ. ಭಾನುವಾರ ಬೆಳಗ್ಗೆ ಕೋರಮಂಗಲ ಪೊಲೀಸರಿಗೆ ವ್ಯಕ್ತಿ ಓರ್ವ ಬೆದರಿಕೆ ಕರೆ ಮಾಡಿದ್ದ. ಆತನಿಗೂ ಈ ಜಿಲೆಟಿನ್‌ ಕಡ್ಡಿಗೂ ಸಂಬಂಧ ಇದೆಯೇ, ಇಲ್ವೇ ಅಂತ ತನಿಖೆ ಮಾಡಲಾಗುತ್ತಿದೆ. ಜೆಲೆಟಿನ್ ಕಡ್ಡಿಗಳು ಯಾರು ಇಟ್ಟಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಅವರಿಗಾಗಿ ಹುಡುಕಾಟ ನಡೆಸಲಾಗಿದೆ.

ಗಿರೀಶ್, ಕೇಂದ್ರ ವಲಯ ಡಿಐಜಿ

ಪ್ರಧಾನಿಗಳು ಬರುವ ಎರಡು ಗಂಟೆ ಮುಂಚಿತವಾಗಿ ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಆಗಿಲ್ಲ. ಕಂಟ್ರೋಲ್ ರೂಂಗೆ ಬಂದಿರುವ ಕರೆಗೂ, ಈ ಘಟನೆಗೂ ಮೇಲ್ನೋಟಕ್ಕೆ ಸಂಬಂಧವಿಲ್ಲ ಅಂತ ಗೊತ್ತಾಗಿದೆ. ನಮ್ಮ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿ ಇನ್ನೂ ಯಾರು ಪತ್ತೆಯಾಗಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ವಿಶೇಷ ತಂಡ ರಚನೆ ಮಾಡಿ ತನಿಖೆ ಕೂಡ ನಡೆಸುತ್ತಿದ್ದೇವೆ.

ಶ್ರೀನಿವಾಸ್‌ ಗೌಡ, ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ

ಜಿಲೆಟಿನ್‌ ಕಡ್ಡಿ ಪತ್ತೆ ಭಾರೀ ಭದ್ರತಾ ಲೋಪ: ಬಿವೈವಿ

ದೇಶದ ಪ್ರಧಾನಿಗಳ ನಿಗದಿತ ಸಂಚಾರದ ರಸ್ತೆಯಲ್ಲೇ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಗಂಭೀರ ಭದ್ರತಾ ಲೋಪ ಮಾತ್ರವಲ್ಲ, ರಾಜ್ಯದ ಕಾಂಗ್ರೆಸ್ ಸರ್ಕಾರದ ಗಂಭೀರ ವೈಫಲ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಮತ್ತು ಭದ್ರತೆ ಸಂಪೂರ್ಣ ಕುಸಿದಿದೆ. ಗರಿಷ್ಠ ಭದ್ರತೆ ನೀಡಬೇಕಾದ ದೇಶದ ಪ್ರಧಾನಮಂತ್ರಿ ಅವರ ಸುರಕ್ಷತೆ ವಿಷಯದಲ್ಲಿ ಕಿಂಚಿತ್ ಲೋಪಕ್ಕೂ ಅವಕಾಶ ನೀಡಬಾರದು ಎಂದಿದ್ದಾರೆ.

ಇಂತಹ ಸೂಕ್ಷ್ಮ, ಗಂಭೀರ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಶೀಘ್ರದಲ್ಲೇ ಕೂಲಂಕಷ ತನಿಖೆ ನಡೆಸಿ, ಕೃತ್ಯದ ಹಿಂದಿನ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಶಿಕ್ಷಿಸಬೇಕು. ಜೊತೆಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಪ್ರಧಾನಿ ಮೋದಿ ಮಾರ್ಗದಲ್ಲಿ ಪತ್ತೆಯಾದ ಜಿಲೆಟಿನ್‌ ಕಡ್ಡಿಗಳು ಪತ್ತೆ; ಓರ್ವ ಶಂಕಿತನ ಬಂಧನ
ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ