ಜಿಬಿಎ ಚುನಾವಣೆಗೆ ಆ.31 ಸುಪ್ರೀಂ ಕೋರ್ಟ್ ಅಂತಿಮ ಗಡುವು: ರಾಜ್ಯ ಸರ್ಕಾರಕ್ಕೆ 'ನೋ ಮೋರ್' ಎಕ್ಸ್‌ಟೆನ್ಷನ್!

Published : May 20, 2026, 06:56 PM IST
GBA Elections

ಸಾರಾಂಶ

ಸುಪ್ರೀಂ ಕೋರ್ಟ್ ಆಗಸ್ಟ್ 31ರೊಳಗೆ ಜಿಬಿಎ ಚುನಾವಣೆ ನಡೆಸಲು ಆದೇಶಿಸಿದ್ದು, ಇದು ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವ ಬದಲಾವಣೆಯ ಚರ್ಚೆಗೆ ತಾತ್ಕಾಲಿಕ ತಡೆ ನೀಡಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದೆ.

ಬೆಂಗಳೂರು (ಮೇ 20): ರಾಜಧಾನಿ ಬೆಂಗಳೂರಿನ ಆ ಜಿಬಿಎ (Greater Bengaluru Authority) ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ಆದೇಶ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಆಗಸ್ಟ್ 31ರೊಳಗೆ ಜಿಬಿಎ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಅಂತಿಮ ಗಡುವು ವಿಧಿಸಿದೆ. ಈ ಆದೇಶವು ಕೇವಲ ಚುನಾವಣಾ ಘೋಷಣೆಯಲ್ಲ, ಬದಲಾಗಿ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಹೊಗೆಯಾಡುತ್ತಿದ್ದ 'ನಾಯಕತ್ವ ಬದಲಾವಣೆ'ಯ ಚರ್ಚೆಗೆ ತಾತ್ಕಾಲಿಕವಾಗಿ ಪೂರ್ಣವಿರಾಮ ಹಾಕುವ ಮುನ್ಸೂಚನೆಯನ್ನೂ ನೀಡಿದೆ.

ನಾಯಕತ್ವ ಬದಲಾವಣೆ ಚರ್ಚೆಗೆ ಬ್ರೇಕ್ ಸಾಧ್ಯತೆ:

ಕಳೆದ ಕೆಲವು ದಿನಗಳಿಂದ ಸಿದ್ದರಾಮಯ್ಯ ಸರ್ಕಾರದ ಮೂರು ವರ್ಷಗಳ ಅವಧಿ ಮುಗಿಯುತ್ತಿದ್ದಂತೆಯೇ ನಾಯಕತ್ವದ ಬದಲಾವಣೆ ಆಗಲಿದೆ ಎಂಬ ಚರ್ಚೆ ಜೋರಾಗಿತ್ತು. ಡಿಸಿಎಂ ಡಿ.ಕೆ. ಶಿವಕುಮಾರ್ ಅಥವಾ ಡಾ. ಜಿ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯಲಿದೆ ಎಂಬ ಮಾತುಗಳು ಹರಿದಾಡುತ್ತಿದ್ದವು. 'ಸಾಧನಾ ಸಮಾವೇಶ'ದ ಬೆನ್ನಲ್ಲೇ ಈ ಚರ್ಚೆಗಳು ಮತ್ತಷ್ಟು ತೀವ್ರಗೊಂಡಿದ್ದವು. ಆದರೆ, ಈಗ ಸುಪ್ರೀಂ ಕೋರ್ಟ್ ಆಗಸ್ಟ್ ಅಂತ್ಯದೊಳಗೆ ಜಿಬಿಎ ಚುನಾವಣೆ ನಡೆಸುವಂತೆ ಆದೇಶಿಸಿರುವುದರಿಂದ, ಕನಿಷ್ಠ ಮುಂದಿನ ಮೂರು ತಿಂಗಳು ಯಾವುದೇ ಗಂಭೀರ ರಾಜಕೀಯ ನಿರ್ಧಾರಗಳು ಹೊರಬರುವ ಸಾಧ್ಯತೆ ತೀರಾ ಕಡಿಮೆ.

ಬೆಂಗಳೂರಿನಂತಹ ಪ್ರತಿಷ್ಠಿತ ನಗರದ ಚುನಾವಣೆಯನ್ನು ಎದುರಿಸುವ ಸಮಯದಲ್ಲಿ ನಾಯಕತ್ವದ ಬದಲಾವಣೆಗೆ ಕೈ ಹಾಕಿದರೆ ಅದು ಪಕ್ಷಕ್ಕೆ ಮುಳುವಾಗಬಹುದು ಎಂಬ ಆತಂಕ ಹೈಕಮಾಂಡ್‌ನಲ್ಲಿದೆ. ಹೀಗಾಗಿ, ಸದ್ಯಕ್ಕೆ 'ನಾಯಕತ್ವ ಬದಲಾವಣೆ' ವಿಷಯವನ್ನು ಬದಗಿಟ್ಟು, 'ಬೆಂಗಳೂರು ಗೆಲ್ಲುವ' ಗುರಿಯತ್ತ ಮಾತ್ರ ಗಮನಹರಿಸಲು ಕಾಂಗ್ರೆಸ್ ನಾಯಕತ್ವ ಸೂಚಿಸುವ ಸಾಧ್ಯತೆ ಇದೆ.

ಡಿಕೆಶಿಗೆ ಇದು ಅಗ್ನಿಪರೀಕ್ಷೆ:

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಈ ಚುನಾವಣೆ ಅತ್ಯಂತ ನಿರ್ಣಾಯಕ. ರಾಜ್ಯದಲ್ಲಿ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತು ಮುಂದಿನ ಸಿಎಂ ರೇಸ್‌ನಲ್ಲಿ ಭದ್ರವಾಗಿ ನಿಲ್ಲಲು ಜಿಬಿಎ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ಅವರಿಗೆ ಅನಿವಾರ್ಯವಾಗಿದೆ. ಒಂದು ವೇಳೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಸೋಲುಂಡರೆ, ಅದು ನೇರವಾಗಿ ಸರ್ಕಾರದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ.

ವಿರೋಧ ಪಕ್ಷಗಳ ವಾಗ್ದಾಳಿ:

ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, "ಸರ್ಕಾರಕ್ಕೆ ಸೋಲಿನ ಭಯವಿದೆ, ಅದಕ್ಕಾಗಿಯೇ ಪದೇ ಪದೇ ಅಫಿಡವಿಟ್ ಹಾಕಿ ಚುನಾವಣೆ ಮುಂದೂಡುತ್ತಿತ್ತು. ರಾಜ್ಯ ಸರ್ಕಾರದ ಆಂತರಿಕ ಸರ್ವೆಯಲ್ಲೇ ಕಾಂಗ್ರೆಸ್ ಐದೂ ಪಾಲಿಕೆಗಳಲ್ಲಿ ಸೋಲಲಿದೆ ಎಂಬ ವರದಿ ಬಂದಿದೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವವರೆಗೆ ಚುನಾವಣೆ ಮಾಡಬಾರದು ಎಂದು ಸಂಚು ರೂಪಿಸಿದ್ದರು. ಆದರೆ ಈಗ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ," ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಅವರು ಸಹ ದರ ಏರಿಕೆಯಿಂದ ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಬಿಜೆಪಿ ಗೆಲುವು ಖಚಿತ ಎಂದಿದ್ದಾರೆ.

ಸರ್ಕಾರದ ಪ್ರತಿಕ್ರಿಯೆ:

ಇನ್ನೊಂದೆಡೆ, ಸರ್ಕಾರದ ಪರವಾಗಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್, 'ಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ ಮತ್ತು ಅದರಂತೆ ನಡೆದುಕೊಳ್ಳುತ್ತೇವೆ' ಎಂದಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಮಾತನಾಡಿ, "ಆಗಸ್ಟ್ 31ರೊಳಗೆ ಎಲ್ಲಾ ತಯಾರಿ ಮಾಡುತ್ತೇವೆ. ಬಿಜೆಪಿಯವರಿಗೂ ಚುನಾವಣೆ ನಡೆಸುವ ಮನಸ್ಸಿರಲಿಲ್ಲ, ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನಾವು ಜಿಬಿಎ ಚುನಾವಣೆಯಲ್ಲಿ ಗೆಲ್ಲುತ್ತೇವೆ," ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗೆ ಹೆಚ್ಚಿನ ಆದ್ಯತೆ:

ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ಮತ್ತು ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ. ಆರು ವರ್ಷಗಳಿಂದ ಚುನಾವಣೆ ನಡೆಯದ ಕಾರಣ ಸ್ಥಳೀಯ ಮಟ್ಟದಲ್ಲಿ ಆಡಳಿತ ಕುಸಿದಿದ್ದು, ಈಗಲಾದರೂ ಚುನಾವಣೆ ನಡೆಯುತ್ತಿರುವುದು ಸಂತಸದ ವಿಷಯ ಎಂದಿದ್ದಾರೆ.

ಒಟ್ಟಾರೆಯಾಗಿ, ಆಗಸ್ಟ್ 31ರ ಗಡುವು ಕರ್ನಾಟಕ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಈ ಮೂರು ತಿಂಗಳು 'ಸಿಎಂ ಪಟ್ಟ'ದ ಕಸರತ್ತಿಗಿಂತ 'ಬೆಂಗಳೂರು ಪಟ್ಟ'ವನ್ನು ಅಲಂಕರಿಸಲು ಎರಡೂ ಪಕ್ಷಗಳು ರಣತಂತ್ರ ರೂಪಿಸಲಿವೆ. ಅಲ್ಲಿಯವರೆಗೆ ರಾಜ್ಯ ರಾಜಕೀಯದ ದೃಷ್ಠಿ ದೆಹಲಿಯಿಂದ ಬೆಂಗಳೂರಿನ ಗಲ್ಲಿಗಳತ್ತ ವಾಲಿರುವುದಂತೂ ಸತ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಗಾಳ ಕೊಲ್ಲಿಯಲ್ಲಿ ಮುಂಗಾರು ಸಕ್ರಿಯ: ಬೆಂಗಳೂರು, ಕೋಲಾರ, ತುಮಕೂರು ಸೇರಿ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!
Wildlife Human Conflict ವನ್ಯಜೀವಿ-ಮಾನವ ಸಂಘರ್ಘ: ಐದೇ ವರ್ಷದಲ್ಲಿ 270 ಸಾವು!