ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ

Kannadaprabha News, Ravi Janekal |   | Kannada Prabha
Published : Dec 20, 2025, 10:29 AM IST
GB Harish Literary Scholar and Journalistic Excellence

ಸಾರಾಂಶ

ವಿದ್ವಾಂಸ ಜಿ.ಬಿ.ಹರೀಶರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಶೈಕ್ಷಣಿಕ ಸಾಧನೆ ಮತ್ತು ನಂತರ ಪತ್ರಿಕಾರಂಗಕ್ಕೆ ಪ್ರವೇಶಿಸಿ ತಮ್ಮ ಸರಳ, ನೇರ ಹಾಗೂ ದಿಟ್ಟ ಬರವಣಿಗೆಯಿಂದ ಗುರುತಿಸಿಕೊಂಡಿದ್ದನ್ನು ಈ ಲೇಖನ ವಿವರಿಸುತ್ತದೆ. ಸಾಹಿತ್ಯ, ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಮೂಡಿಸಿದ ವಿಶಿಷ್ಟ ಛಾಪು..

ಚಿಂತನ-ಮಂಥನ ಕೂಟಗಳಿಂದ, ತಮ್ಮ ಪುಸ್ತಕಗಳಿಂದ ಪರಿಚಿತರಾದ ಜಿ.ಬಿ.ಹರೀಶರು ಆಪ್ತರೆನಿಸುತ್ತಾ ಹೋದದ್ದು ನಾವಿಬ್ಬರೂ ಒಂದೇ ಸಮಯದಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗಿಗಳಾದ ಮೇಲೆ. ಸಾಮಾನ್ಯವಾಗಿ ‘ಟೀ ಕುಡಿಯೋಣ, ಕಾಫಿ ಕುಡಿಯೋಣ’ ಎಂದು ಸಹೋದ್ಯೋಗಿಗಳೊಂದಿಗೆ ಓಡಾಡುವ ಅಭ್ಯಾಸ ಇಲ್ಲದ ನಾವು, ಇಬ್ಬರೇ ಒಟ್ಟಾದರೆ ಒಂದು ಗುಟುಕು ಕಾಪಿ ಜೊತೆ ಗಂಟೆಗಟ್ಟಲೆ ಕಳೆದದ್ದುಂಟು. ಸಾಹಿತ್ಯ, ಹೊಸ ಪುಸ್ತಕ, ಪ್ರಚಲಿತ ವಿದ್ಯಮಾನ... ಹೀಗೆ ನಮ್ಮ ಮಾತುಗಳಿಗೆ ವಸ್ತುವಿನ ಕೊರತೆ ಎಂದೂ ಇರಲಿಲ್ಲ. ಮಾತಾಡುವುದಕ್ಕೆಂದೇ ಕೆಲವೊಮ್ಮೆ ಅವರು ನಮ್ಮ ಮನೆಯಲ್ಲಿ ಉಳಿದುಕೊಂಡದ್ದಿತ್ತು. ಆಗೆಲ್ಲ ತಡರಾತ್ರಿಯವರೆಗೆ, ಮುಂಜಾನೆಯವರೆಗೆ ಎಚ್ಚರವಿದ್ದು ಪ್ರಪಂಚ ಸುತ್ತಿ ಬರುವ ವಿಚಾರ ವಿನಿಮಯ ನಡೆಯುತ್ತಿದ್ದುದಿತ್ತು.

ಭೇಟಿಯಾದಾಗಲೆಲ್ಲ ತಾವು ಬರೆಯುತ್ತಿರುವ ಹೊಸ ಪುಸ್ತಕದ ಬಗ್ಗೆ ಹರೀಶ್ ಹೇಳುತ್ತಿದ್ದರು. ಕೆಲವೊಮ್ಮೆ ಎರಡು-ಮೂರು ಪುಸ್ತಕಗಳನ್ನು ಒಟ್ಟೊಟ್ಟಿಗೆ ಬರೆಯುತ್ತಿರುವುದಾಗಿ ಹೇಳುತ್ತಿದ್ದುದೂ ಉಂಟು. ಒಂದು ಪುಸ್ತಕ ಸರಿ, ಎರಡು-ಮೂರನ್ನು ಸಮಾನಾಂತರವಾಗಿ ಹೇಗೆ ಬರೆಯುತ್ತೀರಿ ಎಂದು ನಾನು ಬೆರಗಾಗಿ ಕೇಳುತ್ತಿದ್ದೆ. ಬೆಳಗ್ಗೆ ಬರೆಯುವ ಪುಸ್ತಕ ಬೇರೆ, ಮಧ್ಯಾಹ್ನ ಬೇರೆ, ರಾತ್ರಿ ಬೇರೆ... ಎಲ್ಲದಕ್ಕೂ ಪ್ರತ್ಯೇಕ ಟಿಪ್ಪಣಿ ಚೀಟಿಗಳು... ಪ್ರತ್ಯೇಕ ಫೈಲ್‌ಗಳು. ಒಂದು ಚೀಟಿ ಮುಗಿದ ಕೂಡಲೇ ಅದರ ಫೈಲ್‌ಗೆ ಸೇರಿಸುವುದು, ಮುಂದೆ ಬೇರೆ ಪುಸ್ತಕಕ್ಕೆ ಸಂಬಂಧಿಸಿದ್ದು ಬರೆದರೆ ಇನ್ನೊಂದು ಫೈಲಿಗೆ... ಹೀಗೆಲ್ಲ ಅವರು ವಿವರಿಸುತ್ತಿದ್ದರೆ ‘ಅದು ಹೇಗೆ ಸಾಧ್ಯ’ ಎಂದು ನಾನು ಇನ್ನೂ ಗೊಂದಲಕ್ಕೆ ಒಳಗಾಗುತ್ತಿದ್ದೆ. ಆದರೆ ಹರೀಶರಲ್ಲಿ ಗೊಂದಲವಿರುತ್ತಿರಲಿಲ್ಲ. ಅವರಲ್ಲಿ ಅಂಥದ್ದೊಂದು ಅವಧಾನ ಕಲೆ ಇದೆ. ನಾಲ್ಕಾರು ದಿಕ್ಕುಗಳಲ್ಲಿ ಒಟ್ಟೊಟ್ಟಿಗೆ ಯೋಚಿಸಬಲ್ಲ ಸಾಮರ್ಥ್ಯ ಅದು.

ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಅವರು ಸೇರಿದ ಆರಂಭದಲ್ಲೇ ಕನ್ನಡ ಭಾಷಾಭಿವೃದ್ಧಿ ಯೋಜನೆಯ ಸುಮಾರು 40 ಪುಸ್ತಕಗಳನ್ನು ಸಂಪಾದಿಸುವ ದೊಡ್ಡ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಆ ಯೋಜನೆ ಅವರು ಬರುವುದಕ್ಕಿಂತ ಮೊದಲೇ ಆರಂಭವಾಗಿದ್ದರೂ ಅನ್ಯಾನ್ಯ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿತ್ತು. ಆ ಯೋಜನೆಯ ನಿರ್ದೇಶಕರ ಜವಾಬ್ದಾರಿಯನ್ನು ವಹಿಸಿಕೊಂಡವರೇ ಹರೀಶರು ಮಿಂಚಿನಂತೆ ಕೆಲಸ ಮಾಡಿದರು. ಲೇಖಕರನ್ನು ಹುಡುಕಿ ಕೆಲಸಗಳನ್ನು ಒಪ್ಪಿಸಿ ಅವರ ಬೆನ್ನುಬಿದ್ದು ಬರೆುಸಿದರು. ಆರೆಂಟು ತಿಂಗಳಲ್ಲಿ 40 ವಿದ್ವತ್ ಕೃತಿಗಳನ್ನು ಸಂಪಾದಿಸಿ ಸರ್ಕಾರಕ್ಕೆ ವಾಪಸಾಗಬೇಕಿದ್ದ ಹಣ ಸದ್ಬಳಕೆ ಆಗುವಂತೆ ನೋಡಿಕೊಂಡರು. ಆಗ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ। ವಿ.ಎಸ್.ಆಚಾರ್ಯರು ಅಷ್ಟೂ ಪುಸ್ತಕಗಳನ್ನು ಒಟ್ಟಿಗೆ ಬಿಡುಗಡೆ ಮಾಡಿದರು.

ಪತ್ರಿಕಾ ರಂಗದಲ್ಲಿ ಮೂಡಿದ ಸಾಹಿತ್ಯ:

ಹರೀಶರಂಥ ವಿದ್ವಾಂಸರು ನಮ್ಮಲ್ಲಿ ಇರಬೇಕಿತ್ತು ಅಂತ ನಾನು ಎಷ್ಟೋ ಸಲ ಅಂದುಕೊಂಡದ್ದಿದೆ, ಅವರಲ್ಲೂ ಹೇಳಿಕೊಂಡದ್ದಿದೆ. ಆದರೆ ಅವರು ವಿಶ್ವವಿದ್ಯಾನಿಲಯದ ಕೆಲಸ ತೊರೆದರೂ ಅವರು ಸಂಪಾದಿಸಿದ ಪುಸ್ತಕದ ರಾಶಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಇಷ್ಟಾದ ಮೇಲೂ, ಹರೀಶರು ತುಮಕೂರಲ್ಲಿ ಅಂತಲ್ಲ, ದೇಶದ ಯಾವುದಾದರೂ ವಿಶ್ವ ವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಇರಬೇಕಿತ್ತು ಅಂತ ನನಗೆ ಪದೇಪದೆ ಅನಿಸುವುದುಂಟು. ಆ ಹುದ್ದೆಯಲ್ಲಿ ಇಲ್ಲದಿದ್ದರೂ ಅವರು ಅವರಿಗಿಂತ ಹೆಚ್ಚಿನ ಕೆಲಸಗಳನ್ನು ಮಾಡುತ್ತಿರುವುದು ಮಾತ್ರ ಸಂತೋಷದ ವಿಷಯವೇ.

ಸಾಹಿತ್ಯದ ಗಂಭೀರ ಅಭ್ಯಾಸಿಯಾದ ಹರೀಶರು ವೃತ್ತಿಪರ ಪತ್ರಕರ್ತರಾದ ಮೇಲೆ ಪತ್ರಿಕಾಲೋಕ ಬಯಸುವ ಹಲವು ಬರವಣಿಗೆಗಳನ್ನೂ ಆಸ್ಥೆಯಿಂದ ಮಾಡಿದರು. ಸರಳ, ನೇರ, ಸಂಕ್ಷಿಪ್ತ ಅಭಿವ್ಯಕ್ತಿ ಪತ್ರಿಕಾ ಬರವಣಿಗೆಗಳ ಪ್ರಮುಖ ಲಕ್ಷಣ ಮತ್ತು ಅಪೇಕ್ಷೆ. ಪ್ರಜಾವಾಣಿ ಹಾಗೂ ವಿಜಯವಾಣಿಯಲ್ಲಿ ಹರೀಶ್ ಅವರು ಉದ್ಯೋಗಿಯಾಗಿದ್ದಾಗ ಪ್ರಕಟಿಸಿದ ಬರಹಗಳು ಈ ಅಪೇಕ್ಷೆಯನ್ನು ಅವರು ಅರ್ಥೈಸಿಕೊಂಡದ್ದನ್ನು ತೋರಿಸುತ್ತವೆ. ಪ್ರಚಲಿತ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ಅವರು ಬರೆದ ಲೇಖನಗಳು, ಚುನಾವಣಾ ಸಂದರ್ಭದ ವ್ಯಕ್ತಿಚಿತ್ರಗಳು, ಸಂಪಾದಕೀಯಗಳು, ಅಲ್ಲಿ ಅವರು ಬಳಸಿರುವ ನೇರ, ಸರಳ ಅಭಿವ್ಯಕ್ತಿ, ಚುಟುಕಾದ ವಾಕ್ಯಗಳು, ಚುರುಕು ಶೀರ್ಷಿಕೆಗಳು ‘ಇದು ಪತ್ರಿಕಾ ಶೈಲಿ’ ಎಂದು ಸ್ಪಷ್ಟವಾಗಿ ಗುರುತಿಸುವಂತಿವೆ. ಮಾಧ್ಯಮ ವೃತ್ತಿ ಕೈಗೊಂಡವರಿಗೆ ಇರಬೇಕಾದ ತಟಸ್ಥ ನಿಲುವೂ ಅವರ ಬರವಣಿಗೆಗಳಲ್ಲಿ ಕಾಣಿಸುತ್ತದೆ. ವಾಜಪೇಯಿ, ಮೋದಿ, ಅರುಣ್ ಶೌರಿ, ಆಚಾರ್ಯ ಕೃಪಲಾನಿ, ಜಗನ್ನಾಥರಾವ್ ಜೋಶಿ ಕುರಿತು ವ್ಯಕ್ತಿಚಿತ್ರಗಳನ್ನು ಬರೆದಂತೆಯೇ ಸುಚೇತಾ ಮಜುಮ್ದಾರ್, ಭೂಪೇಶ್ ಗುಪ್ತಾ, ಫಿರೋಜ್‌ಗಾಂಧಿ, ಇಂದ್ರಜಿತ್ ಗುಪ್ತಾ, ವೆಂಕಟಗಿರಿಗೌಡ, ಪಾರ್ವತಿಕೃಷ್ಣನ್ ಬಗೆಗೂ ಅವರು ವ್ಯಕ್ತಿಚಿತ್ರಗಳನ್ನು ಬರೆದರು. ಅವರ ಪತ್ರಿಕಾ ಲೇಖನಗಳೆಲ್ಲ ಅವರೇ ಎದುರು ನಿಂತು ಮಾತಾಡಿದಷ್ಟು ಸುಲಲಿತವೂ ಆತ್ಮೀಯವೂ ಆಗಿವೆ.

ನೇರ ನುಡಿ, ದಿಟ್ಟ ಉತ್ತರ:

ಪತ್ರಕರ್ತನಿಗಿರಬೇಕಾದ ನಿಷ್ಠುರತೆ ಹಾಗೂ ನಿರ್ಭಿಢತೆಗಳನ್ನೂ ಅವರು ಬಿಟ್ಟಕೊಡಲಿಲ್ಲವೆಂಬುದನ್ನು ಅವರ ಅನೇಕ ಲೇಖನಗಳು ದೃಢಪಡಿಸುತ್ತವೆ. 2014ರಲ್ಲಿ ಆಗಿನ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ‘ಭಗವದ್ಗೀತೆಯನ್ನು ಭಾರತದ ರಾಷ್ಟ್ರೀಯ ಪವಿತ್ರ ಗ್ರಂಥವೆಂದು ಘೋಸಬೇಕು’ ಎಂದು ಹೇಳಿದಾಗ, ಹರೀಶರು ಲೇಖನವೊಂದರ ಮೂಲಕ ಸಕಾರಣವಾಗಿಯೇ ಅದನ್ನು ವಿರೋಧಿಸಿದರು. ಈ ಹಿನ್ನೆಲೆಯಲ್ಲಿ ಅವರು ಬರೆದ ‘ತಾಯಿಯ ಬಳಿ ಹೋಗಲು ಕಾನೂನು ಬೇಕಿಲ್ಲ’ ಎಂಬ ಲೇಖನ ಬಹಳ ಸೊಗಸಾಗಿದೆ.

‘ಕನ್ನಡ ನಿಜ, ಕರ್ನಾಟಕ ಭ್ರಮೆ. ಸಂಗೀತ ನಿಜ, ಉತ್ತರಾದಿ ದಕ್ಷಿಣಾದಿ ಭ್ರಮೆ. ತತ್ವಶಾಸ್ತ್ರದ ಗೀತೆ ನಿಜ, ರಾಷ್ಟ್ರಗ್ರಂಥ ಹಾಗೂ ಪವಿತ್ರ ಪುಸ್ತಕವಾದ ಭಗವದ್ಗೀತೆ ಒಂದು ಭ್ರಮೆ’ ಎಂದು ಬರೆಯುವ ಹರೀಶ್ ಮುಂದಿನ ಭಾಗದಲ್ಲಿ ‘ಅದೊಂದು ಮುಕ್ತ ಪಠ್ಯ. ಸಂವಿಧಾನಕ್ಕಿಂತ ಹಳೆಯದು, ಆದರೆ ಸಂವಿಧಾನಕ್ಕೆ ಪರ್ಯಾಯವಲ್ಲ ಎಂಬುದನ್ನು ಗೀತೆಯ ತತ್ವಶಾಸ್ತ್ರ ಮತ್ತು ಸಾಹಿತ್ಯದ ವಿದ್ಯಾರ್ಥಿಯಾಗಿ ನಮ್ರವಾಗಿ ತಿಳಿಸಲು ಬಯಸುತ್ತೇನೆ’ ಎಂದು ಬರೆಯುತ್ತಾರೆ. ಅಲ್ಲಿ ಹರೀಶರ ಸ್ವಂತಿಕೆ ಹಾಗೂ ಪತ್ರಕರ್ತನ ದಿಟ್ಟತನ ಎರಡೂ ಹದವಾಗಿ ಬೆರೆತಿವೆ.

ಯೋಗಗುರು ಬಿ.ಕೆ.ಎಸ್. ಅಯ್ಯಂಗಾರರ ಬಗ್ಗೆ ಬರೆಯುತ್ತಾ ‘ಯೋಗವೆಂದರೆ ಕೇವಲ ಆಸನಗಳ ತರಗತಿ, ಅಭ್ಯಾಸಗಳಲ್ಲ. ಅದೊಂದು ಜೀವನ ವಿಧಾನ ಎಂಬುದನ್ನು ವಿಶ್ವಕ್ಕೆ ತೋರಿಸಿದ ಮಹಾನ್ ಯೋಗ ಗುರು ಬಿ.ಕೆ.ಎಸ್... ಅವರ ಪಾಲಿಗೆ ದೇಹವೇ ದೇವಾಲಯವಾಯಿತು. ಯೋಗವೇ ಅವರ ನಿತ್ಯ ಪ್ರಾರ್ಥನೆಯಾಯಿತು...’ ಎಂದು ಉಲ್ಲೇಖಿಸುತ್ತಾರೆ.

‘ಸ್ವಾತಂತ್ರ್ಯ ಗೀತೆಯ ಹಕ್ಕಿ ಮಾಯಾ ಏಂಜೆಲೊ’ ಎಂಬ ಲೇಖನದಲ್ಲಿ ‘ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್‌ರಂತೆ, ಶಿವರಾಮ ಕಾರಂತರಂತೆ ಹಲವು ಪ್ರಯೋಗಗಳಿಗೆ ಒಡ್ಡಿಕೊಂಡ ಹಿರಿಯಚೇತನ ಮಾಯಾ ಏಂಜೆಲೊ. ಆಕೆ ಬದುಕು ರೆಕ್ಕೆ ಸುಟ್ಟಾಗಲೆಲ್ಲ ಮತ್ತೆಮತ್ತೆ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದರು’ ಎಂದು ಬರೆದಿದ್ದಾರೆ. ‘ಸುದ್ದಿಗೆ ಆಹಾರವಾದ ಸಂಜಯ ಬಾರು’ ಎಂಬ ಇನ್ನೊಂದು ಲೇಖನದಲ್ಲಿ ‘ಅಧಿಕಾರ ಕೇಂದ್ರಕ್ಕೆ ಅನೇಕ ಬಾಗಿಲುಗಳು, ಹಲವು ಕಿಟಕಿಗಳು. ಪ್ರತಿಯೊಂದು ಗೋಡೆಗೂ ಕಿವಿಗಳು ಇರುತ್ತವೆ. ಕೆಲವು ಕಿವಿಗಳು ಮಾತಾಡುತ್ತವೆ’ ಎಂದು ಎಚ್ಚರಿಸಿದ್ದಾರೆ. ಮಾಣಿಕ್ ಷಾ ಬಗ್ಗೆ ಬರೆಯುತ್ತಾ ‘ಬೇಸರದ ಸಂಗತಿ ಎಂದರೆ ಸ್ವಾತಂತ್ರ್ಯಾ ನಂತರದ ಎಲ್ಲ ಪ್ರಮುಖ ಸಮರಗಳ ಮುಂಚೂಣಿಯಲ್ಲಿದ್ದು 94 ವರ್ಷ ಬದುಕಿ ಮೃತರಾದ ಮಾಣಿಕ್ ಅವರ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ, ಪ್ರಧಾನಿ, ಗೃಹಮಂತ್ರಿಯಾರೂ ಭಾಗವಹಿಸಲಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿದ್ದು ಭ್ರಷ್ಟರೆಂಬ ಆಪಾದನೆಗೆ ಒಳಗಾದ ರಾಜಕಾರಣಿಗಳು ನಿಧನರಾದಾಗ ಕೂಡ ಕೆಳಕ್ಕಿಳಿಯುವ ರಾಷ್ಟ್ರಧ್ವಜ ಅಂದು ಮಾತ್ರ ಅರ್ಧ ಮಟ್ಟದಲ್ಲಿ ಹಾರಾಡಲಿಲ್ಲ. ಮೇರಾ ಭಾರತ್ ಮಹಾನ್!’ ಎಂದು ಕುಟುಕುತ್ತಾರೆ. ಪತ್ರಿಕಾ ಬರಹಗಳೆಂಬ ಅವಸರದ ಸಾಹಿತ್ಯ ಲೋಕದಲ್ಲೂ ತಮ್ಮ ನಿಷ್ಠುರ ನಿಲುವು ಹಾಗೂ ಅಧ್ಯಯನಶೀಲತೆಯನ್ನು ಕಡೆಗಣಿಸಿದವರಲ್ಲ ಹರೀಶ್.

ತಾವು ಸ್ಪರ್ಶಿಸಿದ ಕ್ಷೇತ್ರಗಳಲ್ಲೆಲ್ಲ ತಮ್ಮದೇ ಛಾಪು ಮೂಡಿಸಿರುವ ವೈಶಿಷ್ಟ್ಯ ಹರೀಶರದ್ದು. ಪತ್ರಿಕಾರಂಗದಲ್ಲೂ ಅವರದ್ದೇ ಆದ ಹೆಜ್ಜೆ ಗುರುತುಗಳಿರುವುದು ಅಭಿನಂದನೀಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪವರ್‌ ಪಾಯಿಂಟ್‌: ದ್ವೇಷ ಭಾಷಣ ಮಸೂದೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ
'ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಫೆಬ್ರವರಿ-ಮಾರ್ಚ್ ಹಣ ಯಾವಾಗ ಬರುತ್ತೆ? ಸದನಕ್ಕೆ ತಪ್ಪು ಮಾಹಿತಿ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು!