ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ಕಲುಷಿತಗೊಂಡಿರುವುದು ಹಾಗೂ ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಕರಳು ಬೇನೆ (ಗ್ಯಾಸ್ಟ್ರೋ ಎಂಟರಿಟೈಸ್) ಸೇರಿದಂತೆ ಕರುಳು ಸಂಬಂಧಿ ರೋಗಕ್ಕೀಡಾಗುವವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.
ಬೆಂಗಳೂರು (ಮೇ.12): ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ಕಲುಷಿತಗೊಂಡಿರುವುದು ಹಾಗೂ ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಕರಳು ಬೇನೆ (ಗ್ಯಾಸ್ಟ್ರೋ ಎಂಟರಿಟೈಸ್) ಸೇರಿದಂತೆ ಕರುಳು ಸಂಬಂಧಿ ರೋಗಕ್ಕೀಡಾಗುವವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ಆರೋಗ್ಯ ಇಲಾಖೆಯು ಕಳೆದ ವಾರ ರಾಜ್ಯದಲ್ಲಿ ವರದಿಯಾಗಿರುವ ಸೋಂಕು ಪ್ರಕರಣಗಳ ವರದಿ ಪ್ರಕಟಗೊಳಿಸಿದೆ. ಏಪ್ರಿಲ್ 29 ರಿಂದ ಮೇ 5ರವರೆಗಿನ ಒಂದು ವಾರದ ಅವಧಿಯಲ್ಲಿ ಬರೋಬ್ಬರಿ 4,375 ಮಂದಿಗೆ ಎಡಿಡಿ (ಅಕ್ಯುಟ್ ಡಯಾರಿಯಲ್ ಡಿಸೀಸ್) ಕಾಣಿಸಿಕೊಂಡಿದೆ. ಕಳೆದ ನಾಲ್ಕು ತಿಂಗಳಲ್ಲಿ 56,909 ಮಂದಿಗೆ ಸಮಸ್ಯೆ ಅಧಿಕೃತವಾಗಿ ವರದಿಯಾಗಿದೆ.
ರಾಜ್ಯದಲ್ಲಿ ಮೇ 5 ರಿಂದ ಮಳೆ ಶುರುವಾಗಿರುವ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಲ್ಲಿ ಕರುಳು ಬೇನೆ, ಟೈಫಾಯಿಡ್, ವೈರಲ್ ಹೆಪಟೈಟಿಸ್‌ನಂತಹ ಕರುಳು ಸಂಬಂಧಿ ರೋಗಗಳು ದ್ವಿಗುಣಗೊಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈಗಾಗಲೇ ಸೊಳ್ಳೆಗಳಿಂದ ಹರಡುವ ಡೆಂಘಿ, ಚಿಕೂನ್ ಗುನ್ಯಾ ಪ್ರಕರಣಗಳೂ ಶುರುವಾಗಿವೆ. ಕಳೆದ ವಾರ 3,443 ಮಂದಿಗೆ ಡೆಂಘಿ ಪರೀಕ್ಷೆ ನಡೆಸಿದ್ದರೆ 179 ಮಂದಿಗೆ ದೃಢಪಟ್ಟಿದೆ. ಅಲ್ಲದೆ 1,207 ಮಂದಿಗೆ ಚಿಕುನ್ ಗುನ್ಯಾ ಪರೀಕ್ಷೆ ನಡೆಸಿದ್ದು ಈ ಪೈಕಿ 31 ಮಂದಿಗೆ ಚಿಕುನ್‌ಗುನ್ಯಾ ಖಚಿತವಾಗಿದೆ. ಹೀಗಾಗಿ ಚಿಕುನ್ ಗುನ್ಯಾ ಹಾಗೂ ಡೆಂಘಿ ಲಕ್ಷಣಗಳೂ ಶುರುವಾಗಿವೆ ಎಂದು ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
undefined
ರಾಜ್ಯ ಸರ್ಕಾರ ಬೀಳಿಸುವುದು ಅಸಾಧ್ಯ: ಎಚ್ಡಿಕೆಗೆ ಸಚಿವ ಎಂ.ಬಿ.ಪಾಟೀಲ್ ಸವಾಲು
ಇನ್ನು ಕರುಳುಬೇನೆ ಮತ್ತಿತರ ಕರುಳು ಸಂಬಂಧಿ ಸಮಸ್ಯೆಗಳು ಪ್ರಮುಖವಾಗಿ ಕಲುಷಿತ ನೀರಿನಿಂದ, ಇಲ್ಲವೇ ಆಹಾರದಿಂದ ಹರಡುತ್ತದೆ. ನಗರದ ಹಳೇ ಮದ್ರಾಸು ರಸ್ತೆಯಲ್ಲಿರುವ ರಾಜ್ಯ ಸರಕಾರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಕರುಳುಬೇನೆ, ವೈರಲ್ ಹೆಪಟೈಟಿಸ್, ಟೈಫಾಯಿಡ್ ನಂತಹ ಪ್ರಕರಣಗಳು ನಿತ್ಯ 10ಕ್ಕೂ ಹೆಚ್ಚು ವರದಿಯಾಗುತ್ತಿವೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನಿತ್ಯ ಚಿಕಿತ್ಸೆಗೆ ಬರುವ 250 ಮಕ್ಕಳಲ್ಲಿ 10ಕ್ಕೂ ಹೆಚ್ಚು ಟೈಫಾಯಿಡ್, ನ್ಯುಮೋನಿಯಾ, ಕರುಳುಬೇನೆ ಪ್ರಕರಣಗಳು ವರದಿಯಾಗುತ್ತಿವೆ. ಜತೆಗೆ ವಾತಾವರಣದಲ್ಲಿನ ಬದಲಾವಣೆಯಿಂದಾಗಿ, ಶ್ವಾಸಕೋಶದ ಸಮಸ್ಯೆ, ವೈರಲ್ ಕೆಮ್ಮು (ಶೀತಸಂಬಂಧಿ ಕೆಮ್ಮು)ಉಳ್ಳವರು ಹೆಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೆ ವಿಕ್ಟೋರಿಯಾ, ಕೆ.ಸಿ.ಜನರಲ್, ಜಯನಗರ ಜನರಲ್, ವಾಣಿವಿಲಾಸ ಮಕ್ಕಳ ಆಸ್ಪತ್ರೆ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಸೇರಿದಂತೆ ನಗರದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕರುಳು ಸಂಬಂಧಿ ರೋಗಗಳಿಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕರುಳುಬೇನೆ ಪ್ರಕರಣಗಳಲ್ಲಿ ರೋಗಿಗಳಿಗೆ ಸಾಕಷ್ಟು ದ್ರವಾಹಾರ ನೀಡಬೇಕು. ಇಲ್ಲವಾದಲ್ಲಿ ಮೂತ್ರಪಿಂಡ ವೈಫಲ್ಯದ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ಎಚ್ಚರಿಕೆ ಅತ್ಯಗತ್ಯ ಎನ್ನುತ್ತಾರೆ ವೈದ್ಯರು.
ನಿಂತ ನೀರಿನ ಬಗ್ಗೆ ಎಚ್ಚರ: ಮಳೆ ನೀರು ನಿಂತು ಸಂಗ್ರಹವಾಗಿರುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಗಳು ಹೆಚ್ಚಿದ್ದು, ಇವುಗಳಿಂದ ಸಾಂಕ್ರಾಮಿಕ ರೋಗ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೀಗಾಗಿ ಎಚ್ಚರಿಕೆ ವಹಿಸುವ ಅಗತ್ಯವಿದೆ. ಇನ್ನು ಇಲಾಖೆಯಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಜಾಗೃತಿಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಯೋಜನಾ ನಿರ್ದೇಶಕ ಡಾ.ಅನ್ಸರ್ ಅಹ್ಮದ್ ಹೇಳಿದ್ದಾರೆ.
ರೋಗ ಲಕ್ಷಣಗಳು: ಕರುಳು ಸಂಬಂಧಿ ರೋಗಗಳಲ್ಲಿ ಆಗಾಗ್ಗೆ ಭೇದಿ, ವಾಕರಿಕೆ, ವಾಂತಿ, ಕಿಬ್ಬೊಟ್ಟೆಯ ಸೆಳೆತ, ಹೊಟ್ಟೆನೋವು, ಜ್ವರ ಮತ್ತಿತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಲುಷಿತ ನೀರು ಅಥವಾ ಆಹಾರ ಸೇವನೆಯ ಮೂಲಕ, ಸೋಂಕಿಗೆ ಒಳಗಾದ ವ್ಯಕ್ತಿಗಳು ಅಥವಾ ಪ್ರಾಣಿಗಳೊಂದಿಗೆ ನೇರ ಸಂಪರ್ಕದಿಂದ ಇವು ಹರಡುತ್ತವೆ. ಅಶುಚಿತ್ವ ಇರುವ ಕಡೆಯೂ ಇವು ವರದಿಯಾವುದು ಎಂದು ಹೆಚ್ಚು ಎಂದು ವೈದ್ಯರು ತಿಳಿಸಿದ್ದಾರೆ.
ಬಿಜೆಪಿ ಗೆದ್ದರೆ ವಿಪಕ್ಷ ನಾಯಕರು ಜೈಲಿಗೆ: ಅರವಿಂದ ಕೇಜ್ರಿವಾಲ್ ಭವಿಷ್ಯ
ಮುನ್ನೆಚ್ಚರಿಕೆ ಕ್ರಮಗಳು
*ಹೊರಗಿನ ಅನಾರೋಗ್ಯಕರ ಆಹಾರ ಸೇವನೆಯಿಂದ ದೂರವಿರಿ
* ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ
*ಕೈಗಳನ್ನು ಸಾಬೂನಿಂದ ತೊಳೆದುಕೊಂಡು ಆಹಾರ ಸೇವಿಸಿ
*ಬಿಸಿ ಹಾಗೂ ತಾಜಾ ಆಹಾರವನ್ನೇ ಸೇವಿಸಿ
* ಹೊಟ್ಟೆ ನೋವಿನಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ