
ಹುಬ್ಬಳ್ಳಿ (ಸೆ.17): ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಜಿಲ್ಲಾಡಳಿತ ಹಲವಾರು ಷರತ್ತುಗಳನ್ನು ವಿಧಿಸಿದೆ. ಇದು ಸರಿಯಲ್ಲ, ನಮ್ಮ ಧಾರ್ಮಿಕ ಹಬ್ಬದ ಆಚರಣೆಗೆ ಷರತ್ತು ವಿಧಿಸಲು ಇವರು ಯಾರು? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾಮಾನ್ಯವಾಗಿ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಗಣಪತಿ ಮೂರ್ತಿಗಳು 4 ಅಡಿಗಳಿಗಿಂತ ಎತ್ತರವಿರುತ್ತದೆ. ಇದು ನಮ್ಮ ಭಕ್ತಿಯ ಸಂಕೇತ. ಆದರೆ, ಇವರು ವಿಧಿಸಿರುವ ಷರತ್ತಿನಲ್ಲಿ 4 ಅಡಿ ಮೀರಬಾರದು ಎಂದಿರುವುದು ಹಾಸ್ಯಾಸ್ಪದ ಎಂದಿದ್ದಾರೆ.
ಜನರ ಭಾವನೆಗಳನ್ನು ಕೆಣಕುವ ರಾಜ್ಯ ಸರ್ಕಾರದ ಇಂತಹ ವರ್ತನೆ ಸಹಿಸಲಸಾಧ್ಯ. ಈ ಕೂಡಲೇ ವಿಧಿಸಿರುವ ಷರತ್ತುಗಳನ್ನು ವಾಪಸ್ ಪಡೆದು ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲು ಅನುಮತಿ ನೀಡಬೇಕು ಎಂದು ಸಚಿವ ಜೋಶಿ(Pralhad joshi) ಒತ್ತಾಯಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಸನಾತನ ಹೇಳಿಕೆಯನ್ನು ಕಾಂಗ್ರೆಸ್ ಯಾಕೆ ಖಂಡಿಸಿಲ್ಲ: ಪ್ರಲ್ಹಾದ್ ಜೋಶಿ
ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಶಿಗ್ಗಾಂವಿಗಳನ್ನೂ ಬರಪೀಡಿತ ಘೋಷಿಸಿ:
ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಶಿಗ್ಗಾಂವ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿ, ಈ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗದ ಸಂಕಷ್ಟ ಹೇಳತೀರದಾಗಿದೆ. ಮಳೆ ನಂಬಿ ಈಗಾಗಲೇ ಬಿತ್ತನೆ ಮಾಡಿದ್ದ ಬೆಳೆ ನಾಶವಾಗಿದ್ದು, ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಲು ಎಲ್ಲ ಮಾನದಂಡವನ್ನು ಈ ತಾಲೂಕುಗಳು ಹೊಂದಿದ್ದರೂ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದು ತಾಲೂಕಿನ ರೈತರ ಆಕ್ರೊಶಕ್ಕೆ ಕಾರಣವಾಗಿದೆ.
ಧಾರವಾಡ ಜಿಲ್ಲೆಯ ಈ ತಾಲೂಕುಗಳು ಬಹುತೇಕ ಒಣಭೂಮಿ ಹೊಂದಿದ್ದು, ಮಳೆ ಬಂದರೆ ಮಾತ್ರ ಇಲ್ಲಿ ಬೆಳೆ ಬೆಳೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮಳೆಯ ಆಧಾರದ ಮೇಲೆಯೇ ಕೃಷಿ ಚಟುವಟಿಕೆ ನಡೆಯುತ್ತವೆ. ಸಾಮಾನ್ಯವಾಗಿ ಮುಂಗಾರು ಜೂನ್ ತಿಂಗಳಿನಲ್ಲಿ ಆರಂಭವಾಗಿ ಸೆಪ್ಟೆಂಬರ್ ತಿಂಗಳಿನ ವರೆಗೂ ಇರುತ್ತದೆ. ಆದರೆ, ಈ ಬಾರಿ ಜೂನ್ ತಿಂಗಳಿನಲ್ಲಿಯೇ ಶೇ. 65ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಒಂದೊಂದು ತಾಲೂಕಿಲ್ಲಿಯೂ ಮಳೆ ಹಾಗೂ ಬೆಳೆ ಹಾನಿ ಪ್ರಮಾಣ ವ್ಯತ್ಯಾಸವಾಗಿದೆ.
ವಿಶೇಷ ಅಧಿವೇಶನವೇ ಕೊನೇ ಅಧಿವೇಶನವಾಗುತ್ತಾ? ಸಂಸದರ ಫೋಟೋ ಸೆಷನ್, ಮಹತ್ವ ಅಧಿವೇಶನ ಎಂದು ಜೋಶಿ ಹೇಳಿದ್ದೇಕೆ?
ರೈತರು ಬೆಳೆಗಳಿಗೆ ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳ ನೀರನ್ನು ಬಳಸಿಕೊಂಡು ಅಲ್ಪ ಸ್ವಲ್ಪ ಬೆಳೆಯನ್ನು ಉಳಿಸಿಕೊಂಡಿದ್ದಾರೆ. ಆದರೆ, ತೀವ್ರ ಮಳೆ ಕೊರತೆಯಿಂದ ಬಿತ್ತಿದ ಸಾಕಷ್ಟು ಬೆಳೆಗಳು ನಾಷವಾಗಿದೆ. ಬರ ಘೋಷಣೆಯಾಗದ ತಾಲೂಕುಗಳಾದ ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಶಿಗ್ಗಾಂವಿ ತಾಲೂಕುಗಳು ತೀವ್ರ ಬರದಿಂದ ಈ ಭಾಗದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಕೂಡಲೇ ನನ್ನ ಲೋಕಸಭಾ ವ್ಯಾಪ್ತಿಯಲ್ಲಿನ ಈ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವುದರ ಮೂಲಕ ತಾಲೂಕಿನ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ