
ಚಿತ್ರದುರ್ಗ (ನ.4): 'ಗಣಪತಿ ನಮ್ಮ ಸಂಸ್ಕೃತಿ ಅಲ್ಲ' ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದು, ಈಗಲೂ ಹೇಳುತ್ತೇನೆ ಗಣಪತಿ ಪೂಜಿಸುವುದು ನಮ್ಮ ಸಂಸ್ಕೃತಿಯಲ್ಲ ಎಂದು ಪುನರುಚ್ಚರಿಸಿದರು.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು, ಗಣಪತಿ ನಮ್ಮ ಸಂಸ್ಕೃತಿ ಅಲ್ಲ, ನಮ್ಮ ಸಂಸ್ಕೃತಿ ಅಂದರೆ ಲಿಂಗಾಯತ, ಶರಣ ಸಂಸ್ಕೃತಿ ಎಂದು ಹೇಳಿದ್ದೆವು. ಅದಕ್ಕೆ ಕೆಲ ಮಹಾನುಭಾವರು ದೊಡ್ಡ ಲೇಖನ ಬರೆದಿದ್ದಾರೆ. ಈ ರೀತಿ ಹೇಳಿಕೆ ನೀಡಿ ನಿಜಗುಣಾನಂದಶ್ರೀ ರಾಜ್ಯೋತ್ಸವ ಪ್ರಶಸ್ತಿ ಪಡೆದರು ಎಂದು ಬರೆದಿದ್ದಾರೆ. ಆದರೆ ಪಂಡಿತಾರಾಧ್ಯಶ್ರೀಗೆ ಮೊಟ್ಟ ಮೊದಲ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಅವರಿಗೆ ಗೊತ್ತಿಲ್ಲ. ಪ್ರಚಾರಕ್ಕೆ ಬರಲು ಈ ರೀತಿ ಹೇಳಿಕೆ ನೀಡುತ್ತಾರೆಂದು ಕೆಲವರು ಬರೆದುಕೊಂಡಿದ್ದಾರೆ. ಆದರೆ ನಾವು ವಿದ್ಯಾರ್ಥಿ ದೆಸೆಯಿಂದ ಸ್ವಾಮಿಗಳಾದಾಗಲೂ ಈ ರೀತಿ ಹೇಳಿದ್ದೇವೆ. ನಾವು ಗಣಪತಿ ಉತ್ಸವಕ್ಕೆ ಹೋಗಲ್ಲ, ಗಣಪತಿ ಪೂಜೆ ಮಾಡಲ್ಲ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ನಂಬಿದ್ದೇವೆ. ಅರ್ಥ ಮಾಡಿಕೊಳ್ಳದ ಅವಿವೇಕಿಗಳು ನಮ್ಮ ವಿರುದ್ಧ ಬರೆಯುತ್ತಾರೆ ಎಂದು ತಿರುಗೇಟು ನೀಡಿದರು.
ಜಗತ್ತಿನ ಸಮಸ್ಯೆಗೆ ವಚನದಲ್ಲಿ ಪರಿಹಾರ : ಸಾಣೇಹಳ್ಳಿ ಸ್ವಾಮೀಜಿ
ನಾವು ಸಮಾಧಾನ ಕಳೆದುಕೊಂಡರೆ ಗತಿಯೇನು?
ನಾವು ಶರಣ ಸಂಸ್ಕೃತಿ ಎಂದರೆ ಏನೆಂದು ಹೇಳುತ್ತೇವೆ. ಶರಣರ ವಚನಗಳಲ್ಲೇ ಗಣಪತಿ ವಿರೋಧ ಮಾಡಿದ ನಿದರ್ಶನವಿದೆ. ಸರಿಯಾದ ಉತ್ತರ ನೀಡುವ ವಿವೇಕ ಬೇಕಾಗುತ್ತದೆ. ವಿವೇಕವಿಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಲೇಖನ ಬರೆದುಕೊಂಡ ಮಹಾನುಭಾವರಿಗೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಮಹಾನುಭಾವರು ಏನೋ ಬರೆದುಕೊಂಡರೆಂದು ನಾವು ಸಮಾಧಾನ ಕಳೆದುಕೊಂಡರೆ ಗತಿಯೇನು? ಎಂದು ಪ್ರಶ್ನಿಸಿದರು.
ಕಂದಾಚಾರದ ಕೂಪದಲ್ಲಿ ಮುಳುಗಿಸುವ ಪುರೋಹಿತಶಾಹಿ ಪರಂಪರೆ ಈ ನಾಡಲ್ಲಿದೆ. ಅವರು ಸದಾ ಇನ್ನೊಬ್ಬರ ತಲೆ ಬೋಳಿಸುವ ಕೆಲಸ ಮಾಡುತ್ತಿರುತ್ತಾರೆ. ದೇವಸ್ಥಾನ ನಿರ್ಮಿಸಿದಾಕ್ಷಣ ಜನ ಅಲ್ಲಿ ಸುತ್ತುವರಿಯುತ್ತಾರೆ. ಪೂಜೆ ಮಾಡಿಸಿ ಪುಣ್ಯ ಸಿಗುತ್ತದೆ ಎಂದು ಹೇಳುತ್ತಾರೆ. ನಿಜವಾಗಿಯೂ ಯಾರಿಗಾದರೂ ಪುಣ್ಯ ಲಭ್ಯ ಆಗಿದೆಯೇ? ಯಾವ ದೇವರು ಈವರೆಗೆ ಯಾರಿಗೂ ವರ ಆಗಲಿ, ಶಾಪವಾಗಲಿ ನೀಡಿಲ್ಲ. ಈ ಸತ್ಯದ ಅರಿವು ಮೌಢ್ಯದಲ್ಲಿ ಮುಳುಗಿದವರಿಗೆ ಅರ್ಥ ಆಗುವುದು ಕಷ್ಟ. ಇನ್ನೊಬ್ಬರ ವಿಚಾರ ಅರ್ಥ ಮಾಡಿಕೊಂಡು ಒಪ್ಪುವ ಮನಸ್ಥಿತಿ ಅವರಿಗೆ ಇಲ್ಲ. ಶರಣರ ವಚನ ಸಾಹಿತ್ಯದ ಪರಿಚಯ, ವೈಚಾರಿಕ ಪ್ರಜ್ಞೆ ಇದ್ದರೆ ಆ ರೀತಿ ಪದ ಬಳಕೆ ಮಾಡುತ್ತಿರಲಿಲ್ಲ.ಇದೇ ವೇಳೆ 'ಲೋಕದಲ್ಲಿ ಹುಟ್ಟಿದ ಬಳಿಕ' ವಚನ ಪ್ರಸ್ತಾಪಿಸಿದ ಪಂಡಿತಾರಾಧ್ಯಶ್ರೀಗಳು.
ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ಮುನ್ನಲೆಗೆ ಫೆ.26ರಂದು ಸಾಣೇಹಳ್ಳಿ ಮಠದಲ್ಲಿ ಸಮಾವೇಶ
ಸದ್ಯ 'ಗಣಪತಿ ನಮ್ಮ ಸಂಸ್ಕೃತಿಯಲ್ಲ' ಎಂಬ ಶ್ರೀಗಳ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳನ್ನ ಹುಟ್ಟುಹಾಕಿದೆ. ಅಲ್ಲದೇ ಹಿಂದೂಪರ ಸಂಘಟನೆಗಳು ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ