Gadag Municipal Council ಗದಗ: ವರ್ಷ ಕಳೆದರೂ ಗದಗ ನಗರಸಭೆ ಸದಸ್ಯರಿಗೆ ಅಧಿಕಾರವಿಲ್ಲ!

Kannadaprabha News, Ravi Janekal |   | Kannada Prabha
Published : Feb 07, 2026, 08:23 AM IST
Gadag Municipal Council members have no power

ಸಾರಾಂಶ

ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಅಧಿಕಾರದ ತಿಕ್ಕಾಟದಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಮೀಸಲಾತಿ, ನಕಲಿ ಠರಾವು ಮತ್ತು ಸದಸ್ಯರ ಅಮಾನತಿನಂತಹ ಪ್ರಕರಣಗಳಿಂದಾಗಿ ಅವಳಿ ನಗರದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತgo

ಶಿವಕುಮಾರ ಕುಷ್ಟಗಿ

ಗದಗ (ಫೆ.7): ಗದಗ- ಬೆಟಗೇರಿ ನಗರಸಭೆ ಸದಸ್ಯರಿಗೆ ಹಾಗೂ ಅವಳಿ ನಗರದ ಜನರಿಗೆ ಕಾನೂನು ಇಲಾಖೆ ಎನ್ನುವುದು ಗಂಭೀರವಾಗಿ ಕಾಡುತ್ತಿದ್ದು, ಸದಸ್ಯರಿಗೆ ಅಧಿಕಾರ ನಡೆಸಲು ಆಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಇದ್ದೂ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿ ಒಂದು ವರ್ಷ ಕಳೆದರೂ ಪರಿಹಾರ ಮಾತ್ರ ಇದುವರೆಗೂ ದೊರೆತಿಲ್ಲ.

35 ಜನ ಸದಸ್ಯ ಬಲದ ನಗರಸಭೆಯಲ್ಲಿ 18 ಸ್ಥಾನ ಹೊಂದಿರುವ ಬಿಜೆಪಿ, ಮೊದಲ ಅವಧಿಯಲ್ಲಿ ಅಧಿಕಾರ ಗದ್ದುಗೆ ಏರಿತ್ತು. 17 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿತ್ತು. ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯ ಮೊದಲ ದಿನವೇ ಮತದಾನದ ವೇಳೆಯಲ್ಲಿ ಗೊಂದಲವಾಗಿ ಅದು ಕೂಡಾ ನ್ಯಾಯಾಲಯದ ಮೆಟ್ಟಿಲೇರಿ ಪ್ರಾರಂಭದಲ್ಲಿಯೂ ವಿಳಂಬವಾಗಿತ್ತು.

2024ರ ಜು. 24ರಂದು ನಗರಸಭೆಯ ಮೊದಲ ಎರಡೂವರೆ ವರ್ಷಗಳ ಅವಧಿಯು ಪೂರ್ಣಗೊಂಡಿತು. ಆದರೆ, 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ನಾಟಕೀಯ ತಿರುವು ಪಡೆಯಿತು. ಕಾಂಗ್ರೆಸ್ ಸದಸ್ಯರು ಮೀಸಲಾತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದರು. ಇದರಿಂದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ 6 ತಿಂಗಳು ವಿಳಂಬವಾಯಿತು.

ನಕಲಿ ಠರಾವಿನ ಗೊಂದಲ: ಮೀಸಲಾತಿ ಗೊಂದಲ ನಿವಾರಣೆಗಾಗಿ ಚುನಾವಣೆ ದಿನಾಂಕ ನಿಗದಿಯಾದಾಗಲೇ ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂತು. ನಗರಸಭೆಯ ವಾಣಿಜ್ಯ ಮಳಿಗೆಗಳ ಗುತ್ತಿಗೆ ಅವಧಿ ವಿಸ್ತರಣೆಗೆ ಸಂಬಂಧಿಸಿದ ನಕಲಿ ಠರಾವು ಆರೋಪ ಕೇಳಿಬಂದು ಅಂದು ನಗರಸಭೆಯ ಪೌರಾಯುಕ್ತರಾಗಿದ್ದ ಪ್ರಶಾಂತ ವರಗಪ್ಪನವರ ಮೂವರು ಬಿಜೆಪಿ ಸದಸ್ಯರಾದ ಉಷಾ ದಾಸರ, ಅನಿಲ ಅಬ್ಬಿಗೇರಿ, ಮುತ್ತು ಮುಶಿಗೇರಿ ಅವರ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ನಡೆದು ಬೆಳಗಾವಿ ಪ್ರಾದೇಶಿಕ ಆಯುಕ್ತರು 3 ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಅಮಾನತುಗೊಳಿಸಿದರು.

ಫೆ. 28ಕ್ಕೆ ಒಂದು ವರ್ಷ:

ಅಮಾನತು ಆದೇಶದ ಬೆನ್ನಲ್ಲಿಯೇ ಚುನಾವಣೆ ಘೋಷಣೆ ಮಾಡಿ ಕಾಂಗ್ರೆಸ್ ಸರ್ಕಾರ ಮತ್ತು ಕಾನೂನು ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಗದಗ- ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತಿದ್ದಾರೆ ಎನ್ನುವ ಬಿಜೆಪಿ ಸದಸ್ಯರ ಆರೋಪಗಳ ಮಧ್ಯೆ 2025ರ ಫೆ. 28ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ನಡೆದು ಹೋಯಿತು. ಕಾಂಗ್ರೆಸ್ ಅಂದಿನ ಮಟ್ಟಿಗೆ ಅಧಿಕಾರಕ್ಕೂ ಬಂತು. ಬಹುಮತವಿದ್ದರೂ ಅಧಿಕಾರ ಕೈತಪ್ಪಿದ ಬಿಜೆಪಿ, ಕೂಡಲೇ ಆಯ್ಕೆಯನ್ನು ಪ್ರಶ್ನಿಸಿ ಹೈಕೋರ್ಟನಲ್ಲಿ ತಡೆಯಾಜ್ಞೆ ಪಡೆಯಿತು. ಸದ್ಯ ನಕಲಿ ಠರಾವು ಪ್ರಕರಣ, ಸದಸ್ಯರ ಅಮಾನತು ಮತ್ತು ಹೊಸ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ಫೆ. 28ಕ್ಕೆ ಒಂದು ವರ್ಷ ತುಂಬುತ್ತಿದ್ದರೂ ಯಾವುದೇ ಪ್ರಕರಣ ಇತ್ಯರ್ಥವಾಗಿಲ್ಲ.

ಜನರಿಗೆ ಸಮಸ್ಯೆ: ಗದಗ- ಬೆಟಗೇರಿ ಜನರು ಪ್ರತಿವರ್ಷವೂ ತಪ್ಪದೇ ತೆರಿಗೆ ಕಟ್ಟುತ್ತಾರೆ. ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸುತ್ತಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಧಿಕಾರದ ತಿಕ್ಕಾಟಕ್ಕಾಗಿ ಅಮಾಯಕ ಅವಳಿ ನಗರದ ಜನರನ್ನು ಬಲಿ ಕೊಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ನೀರು ಸರಬರಾಜು, ರಸ್ತೆ ದುರಸ್ತಿ, ಕಸ ವಿಲೇವಾರಿ ಸೇರಿದಂತೆ ಅನೇಕ ಮೂಲ ಸೌಕರ್ಯ ಮತ್ತು ನಾಗರಿಕ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ. ನಗರಸಭೆಗೆ ಸದಸ್ಯರಾಗಿ ಆಯ್ಕೆಯಾದವರು ಕಳೆದೊಂದು ವರ್ಷದಿಂದ ಸದಸ್ಯರಿದ್ದರೂ ಇಲ್ಲದಂತಾಗಿದೆ.

ನಗರಸಭೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಇದ್ದರೂ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸಿ, ಅವಳಿ ನಗರದ ಜನತೆಗೆ ಕಾನೂನು ಸಚಿವರು ದ್ರೋಹ ಮಾಡುತ್ತಿದ್ದಾರೆ. ಕೇವಲ ಅಧಿಕಾರಿಗಳನ್ನು(ಆಡಳಿತಾಧಿಕಾರಿಗಳನ್ನು) ಇಟ್ಟುಕೊಂಡು ತಮಗೆ ಬೇಕಾದಂತೆ ಅಧಿಕಾರ ನಡೆಸುತ್ತಿದ್ದಾರೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದರೂ ತೀರ್ಪು ಇದುವರೆಗೂ ಹೊರಬರುತ್ತಿಲ್ಲ ಎಂದು ಬಿಜೆಪಿ ನಗರಸಭಾ ಸದಸ್ಯರಾದ ಅನಿಲ ಅಬ್ಬಿಗೇರಿ ತಿಳಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳದಲ್ಲಿಂದು ಬಲ್ಡೋಟಾ ವಿರೋಧಿ ಬೃಹತ್ ಸಮಾವೇಶ: ಗವಿಸಿದ್ದೇಶ್ವರ ಶ್ರೀ ಗೈರು?
ರೈಲ್ವೆಯಿಂದ ಮತ್ತೆ ಕನ್ನಡಕ್ಕೆ ಅನ್ಯಾಯ