ದಕ್ಷಿಣ ಕನ್ನಡ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಮತ್ತೆ ಎಚ್ಚರಿಕೆ ನೀಡಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಆ.18ರೊಳಗೆ ಶರಣಾಗುವಂತೆ ತಿಳಿಸಿದೆ.
ಮಂಗಳೂರು (ಜು.16): ದಕ್ಷಿಣ ಕನ್ನಡ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಮತ್ತೆ ಎಚ್ಚರಿಕೆ ನೀಡಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಆ.18ರೊಳಗೆ ಶರಣಾಗುವಂತೆ ತಿಳಿಸಿದೆ. ಈ ಸಂಬಂಧ ಕೋರ್ಟ್ ಆದೇಶದಂತೆ ಎನ್‌ಐಎ ಅಧಿಕಾರಿಗಳು ಶನಿವಾರ ದ.ಕ. ಜಿಲ್ಲೆಯ ಪುತ್ತೂರು ಹಾಗೂ ಸುಳ್ಯದಲ್ಲಿ ಆರೋಪಿಗಳ ಮನೆಗಳಿಗೆ ತೆರಳಿ ಎಚ್ಚರಿಕೆ ನೋಟಿಸ್ ಅಂಟಿಸಿದರು. ಜೊತೆಗೆ, ಅವರ ಮನೆ ಇರುವ ಪ್ರದೇಶಗಳಲ್ಲಿ ಧ್ವನಿವರ್ಧಕದ ಮೂಲಕವೂ ಎಚ್ಚರಿಕೆ ನೀಡಿದರು. ಶರಣಾಗದಿದ್ದರೆ ಆರೋಪಿಗಳ ಹೆಸರಿನಲ್ಲಿರುವ ಮನೆ, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ನೀಡಿದರು.
ಈ ಪ್ರಕರಣದಲ್ಲಿ ಮುಸ್ತಫಾ ಪೈಚಾರ್, ಅಬೂಬಕ್ಕರ್ ಸಿದ್ಧಿಕ್, ಉಮ್ಮರ್ ಫಾರೂಕ್, ತುಫೇಲ್, ಮಸೂದ್ ಅಗ್ನಾಡಿ ತಲೆ ಮರೆಸಿಕೊಂಡಿದ್ದು, ಇವರ ಪತ್ತೆಗೆ ಎನ್‌ಐಎ ಕಾರ್ಯಾಚರಣೆಗೆ ಇಳಿದಿದೆ. ಆಶ್ರಯ ನೀಡಿರುವುದೂ ಸೇರಿ ಹತ್ಯೆಯ ಪ್ರಮುಖ ಆರೋಪಿಗಳಿಗೆ ಸಹಾಯ ಮಾಡಿದ ಆರೋಪ ಇವರುಗಳ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸೇರಿ ಈವರೆಗೆ 16 ಮಂದಿಯನ್ನು ಬಂಧಿಸಲಾಗಿದೆ. ಜೂನ್ ತಿಂಗಳಲ್ಲಿ ಕೂಡ ಎನ್‌ಐಎ ಅಧಿಕಾರಿಗಳು ಇದೇ ರೀತಿಯ ಎಚ್ಚರಿಕೆ ನೀಡಿದ್ದರು. ಜೂ.30ರೊಳಗೆ ಶರಣಾಗುವಂತೆ ಗಡುವು ವಿಧಿಸಿದ್ದರು. ಆದರೆ, ತಲೆಮರೆಸಿಕೊಂಡಿರುವ ಆರೋಪಿಗಳು ಈವರೆಗೂ ಶರಣಾಗಿಲ್ಲ.
ಕುಡಿಯೋದಕ್ಕೇ ನೀರಿಲ್ಲ, ತ.ನಾಡಿಗೆ ಕೊಡೋದು ಹೇಗೆ?: ಸಚಿವ ಚಲುವರಾಯಸ್ವಾಮಿ
ಎನ್‌ಐಎ ದಾಳಿ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಐವರು ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ಏಜೆನ್ಸಿಯ (ಎನ್‌ಐಎ) ಅಧಿಕಾರಿಗಳ ತಂಡ ಮಂಗಳವಾರ ದ.ಕ. ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿದೆ.
ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳಾದ ಮುಸ್ತಫಾ ಪೈಚಾರ್, ಅಬೂಬಕ್ಕರ್ ಸಿದ್ಧಿಕ್, ಉಮರ್ ಫಾರೂಕ್, ನೌಷದ್ ಹಾಗೂ ಮಸೂದ್ ಅಗ್ನಾಡಿಗಾಗಿ ಎನ್‌ಐಎ ತಂಡ ತೀವ್ರ ಶೋಧ ಕಾರ್ಯ ಕೈಗೊಂಡಿದೆ. ಇವರ ಪತ್ತೆಗೆ ಈಗಾಗಲೇ ಆರೋಪಿಗಳ ಭಾವಚಿತ್ರ ಇರುವ ವಾಂಟೆಡ್ ಲಿಸ್ಟ್‌ನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿತ್ತು. ಆರೋಪಿಗಳು ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಮಂಗಳವಾರ ಆರೋಪಿಗಳ ಮನೆಗಳಿಗೆ ಭೇಟಿ ನೀಡಿ, ಮನೆಯವರ ವಿಚಾರಣೆ ನಡೆಸಿ, ಮನೆಗಳಿಗೆ ನೋಟಿಸ್ ಅಂಟಿಸಿದೆ.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿ ನೌಷದ್‌ನ ಮನೆಗೆ ಭೇಟಿ ನೀಡಿದ ತಂಡ, ಮನೆಯವರ ವಿಚಾರಣೆ ನಡೆಸಿತು. ನೆಟ್ಟಾರು ಹತ್ಯೆಯ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಈತನ ಮೇಲಿದೆ. ಆರೋಪಿಗಳಿಗೆ ನೌಷದ್ ತಮಿಳ್ನಾಡಿನ ಈರೋಡ್‌ನಲ್ಲಿ ಆಶ್ರಯ ಕಲ್ಪಿಸಿದ್ದ. ಬಳಿಕ, ಬೆಳ್ಳಾರೆ, ಸುಳ್ಯಗಳಿಗೂ ತಂಡ ಭೇಟಿ ನೀಡಿತು.
ಕರಾವಳಿಯಲ್ಲಿ ಇನ್ನೂ 5 ದಿನ ಭಾರಿ ಮಳೆ: ಯೆಲ್ಲೋ ಅಲರ್ಟ್
ಕೊಡಗಿಗೂ ಭೇಟಿ: ನಂತರ, ಕೊಡಗಿನ ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದ ಕಾನ್ವೆಂಟ್ ಬಾಣೆಯ ನಿವಾಸಿ ಅಬ್ಲುಲ್ ನಜೀರ್ ಮತ್ತು ಕಲ್ಕಂದೂರು ಗ್ರಾಮದ ನಿವಾಸಿ ಅಬ್ಲುಲ್ ರೆಹಮಾನ್ ಅಲಿಯಾಸ್ ಅದ್ರಮನ ಮನೆಗಳಿಗೆ ತೆರಳಿ ವಿಚಾರಣೆ ನಡೆಸಿತು. ಇಬ್ಬರೂ ವಿದೇಶಕ್ಕೆ ತೆರಳಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇವರಿಬ್ಬರೂ ನಿಷೇಧಿತ ಪಿಎಫ್‌ಐ ಸಂಘಟನೆಗೆ ಸೇರಿದ ಕಾರ್ಯಕರ್ತರಾಗಿದ್ದು, ಕೃತ್ಯ ಎಸಗಲು ಆರೋಪಿಗಳಿಗೆ ಸಹಾಯ ಮಾಡಿದ ಆರೋಪ ಇವರ ಮೇಲಿದೆ.