
ಬೆಂಗಳೂರು (ಅ.19): ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಉತ್ಪಾದನೆ ಹೆಚ್ಚಿಸುವಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳ ಪಾತ್ರ ಮಹತ್ತರವಾಗಿದೆ. ಕೃಷಿಗೆ ಸಂಬಂಧಿಸಿದ ಸಂಶೋಧನೆ, ಅಧ್ಯಯನ ಕಾರ್ಯಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಬೆಂಗಳೂರು ಕೃಷಿ ವಿವಿ, ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ (ಮ್ಯಾನೇಜ್) ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ದೇಸಿ ಸಮ್ಮೇಳನವನ್ನಉದ್ಘಾಟಿಸಿ ಅವರು ಮಾತನಾಡಿದರು.
ಜನಸಂಖ್ಯೆಯಲ್ಲಿ ನಾವು ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದ್ದೇವೆ. ಆದರೆ ಅಭಿವೃದ್ಧಿ, ತಲಾ ಆದಾಯ, ಜಿಡಿಪಿಯಲ್ಲಿ ಚೀನಾ ನಮಗಿಂತ ಮುಂದಿದೆ. ಎಲ್ಲ ಜನರಿಗೂ ಆಹಾರ ಒದಗಿಸುವಲ್ಲಿ ಕೃಷಿ ವಿವಿಗಳ ಪಾತ್ರ ಮಹತ್ವದ್ದಾಗಿದೆ. ಬರಗಾಲದಲ್ಲಿ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಕೃಷಿ ಸಂಶೋಧನೆ, ಅಧ್ಯಯನ, ವಿಸ್ತರಣಾ ಕಾರ್ಯಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಭಯ ನೀಡಿದರು.
ನಮಗೆ ಕಾವೇರಿ ಸಂಕಷ್ಟ ಸೂತ್ರ ಬೇಕು: ಕರವೇ ನಾರಾಯಣ ಗೌಡ
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬೇರೆ ದೇಶಗಳಲ್ಲಿ ಆಹಾರಕ್ಕಾಗಿ ಕೈ ಒಡ್ಡುವ ಪರಿಸ್ಥಿತಿ ಇತ್ತು. ಆದರೆ ಹಸಿರು ಕ್ರಾಂತಿಯ ಬಳಿಕ ದೇಶ ಆಹಾರ ಸ್ವಾವಲಂಬನೆ ಸಾಧಿಸಿತು. ಇತ್ತೀಚೆಗೆ ನಿಧನರಾದ ಕೃಷಿ ತಜ್ಞ ಡಾ.ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಗೆ ಬಹಳಷ್ಟು ಕೊಡುಗೆ ನೀಡಿದ್ದರು. ಮುಂದೆ ಆಹಾರಕ್ಕೆ ಅಭಾವ ಉಂಟಾಗದಂತೆ ಕೃಷಿ ವಿವಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ರೈತರಿಗೆ ತಲುಪದಿದ್ದರೆ ಪ್ರಯೋಜನವಿಲ್ಲ: ಮಳೆಯಾಶ್ರಿತ ಭೂಮಿ ಹೆಚ್ಚಾಗಿರುವ ರಾಜ್ಯ ನಮ್ಮದಾಗಿದ್ದು ವಾತಾವರಣ ಬದಲಾವಣೆಯಿಂದ ನಿರಂತರವಾಗಿ ಅತಿವೃಷ್ಟಿ, ಅನಾವೃಷ್ಟಿಗೆ ತುತ್ತಾಗುತ್ತಿದೆ.
ಇದರಿಂದಾಗಿ ನಮ್ಮ ರೈತರಿಗೆ ತಂತ್ರಜ್ಞರ ನೆರವು ಅತ್ಯಗತ್ಯವಾಗಿದೆ. ಆದ್ದರಿಂದ ಕೃಷಿ ವಿವಿಗಳು ಹೆಚ್ಚು ಸಂಶೋಧನೆ ನಡೆಸಬೇಕು. ಸಂಶೋಧನೆಗಳು ರೈತರಿಗೆ ಪರಿಣಾಮಕಾರಿಯಾಗಿ ತಲುಪಬೇಕು ಎಂದು ಆಶಿಸಿದರು. ಪ್ರಯೋಗಶಾಲೆಗಳಿಂದ ಕೃಷಿ ಭೂಮಿಗೆ ಏನು ತಲುಪಿದೆ, ಕೃಷಿ ಭೂಮಿಯ ಅನುಭವಗಳು ಮತ್ತು ಅಗತ್ಯಗಳು ಪ್ರಯೋಗ ಶಾಲೆಗಳಿಗೆ ಗೊತ್ತಾಗಬೇಕು. ಆಗ ಮಾತ್ರ ಸುಸ್ಥಿರ ಕೃಷಿ ಸಾಧ್ಯವಾಗುತ್ತದೆ. ಅಭಿವೃದ್ಧಿಪಡಿಸಿದ ಹೊಸ ತಳಿಗಳು ರೈತರಿಗೆ ತಲುಪಿರುವ ಬಗ್ಗೆ ಕಾಲಕಾಲಕ್ಕೆ ಪರಿಶೀಲಿಸಿಕೊಳ್ಳಬೇಕು. ಇಲ್ಲದಿದ್ದರೆ ಹೊಸ ತಳಿಗಳನ್ನು ಅಭಿವೃದ್ಧಿ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಕೃಷಿಕರ ಸಬಲೀಕರಣಕ್ಕೆ ರಾಜ್ಯ ಸರ್ಕಾರವು ಕೃಷಿ ಭಾಗ್ಯ, ಕೃಷಿ ನವೋದ್ಯಮ ಪ್ರೋತ್ಸಾಹ, ಕಡಿಮೆ ಬಡ್ಡಿ ದರದ ಸಾಲ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಜೊತೆಗೆ ಕೃಷಿ ವಿವಿಗಳೂ ನಿರಂತರ ಸಂಶೋಧನೆ ನಡೆಸುತ್ತಿವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆಯ ಮಹಾ ನಿರ್ದೇಶಕ ಡಾ.ಪಿ.ಚಂದ್ರಶೇಖರ್, ಶಾಸಕರಾದ ನರೇಂದ್ರ ಸ್ವಾಮಿ, ಶರತ್ ಬಚ್ಚೆಗೌಡ, ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಾಟೀಲ್, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಸುರೇಶ್, ಕುಲಸಚಿವ ಡಾ.ಬಸವೇಗೌಡ ಮತ್ತಿತರರು ಹಾಜರಿದ್ದರು.
ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ 15000 ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ್
ಬೇಕರಿ ಸಂಸ್ಥೆ ಲೋಕಾರ್ಪಣೆ: ಜಿಕೆವಿಕೆಯಲ್ಲಿ 4 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಬೇಕರಿ ತರಬೇತಿ ಮತ್ತು ಮೌಲ್ಯವರ್ಧನ ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಿದ ಸಿದ್ದರಾಮಯ್ಯ ಅವರು, ಬೇಕರಿ ತಿನಿಸುಗಳನ್ನು ವೀಕ್ಷಿಸಿದರು. ನ.17 ರಿಂದ 4 ದಿನ ನಡೆಯಲಿರುವ ಕೃಷಿ ಮೇಳದ ಲಾಂಛನ, ಜೈವಿಕ ಸಿರಿ ಗೊಬ್ಬರ, ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿಗಳು ಕೃತಿಯನ್ನೂ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ