ರಾಜ್ಯದಲ್ಲೇ ಅತಿ ಹೆಚ್ಚು ಟೆಸ್ಟ್‌; ಪಾಸಿಟಿವ್‌ ಪ್ರಮಾಣ ಇಳಿಕೆ!

By Kannadaprabha NewsFirst Published Oct 22, 2020, 7:21 AM IST
Highlights

ರಾಜ್ಯದಲ್ಲೇ ಅತಿ ಹೆಚ್ಚು ಟೆಸ್ಟ್‌; ಪಾಸಿಟಿವ್‌ ಪ್ರಮಾಣ ಇಳಿಕೆ| 1 ವಾರದಿಂದ ಇಳಿಕೆ ಹಾದಿಯಲ್ಲಿ ಕೊರೋನಾ| ಪಾಸಿಟಿವಿಟಿ ದರ ಶೇ.6.51ಕ್ಕೆ ಕುಸಿತ| ಸಾವಿನ ದರ ಶೇ.1.06ಕ್ಕೆ ಇಳಿಮುಖ| ರಾಜ್ಯದಲ್ಲಿ ದೇಶದಲ್ಲೇ ಅಧಿಕ ಕೊರೋನಾ ಟೆಸ್ಟ್‌| ಆದರೂ ಸೋಂಕು, ಸಾವು ಇಳಿಕೆ

ಬೆಂಗಳೂರು(ಅ.22): ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಸೋಂಕು ಹಾಗೂ ಸಾವಿನ ದರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸರಾಸರಿ ಶೇ.11.25 ರಷ್ಟಿರುವ ಕೊರೋನಾ ಪಾಸಿಟಿವಿಟಿ ದರ ಕಳೆದ ಒಂದು ವಾರದ ಪ್ರಕರಣಗಳಲ್ಲಿ ಶೇ.6.51ಕ್ಕೆ ಕುಸಿದಿದೆ. ಅಲ್ಲದೆ, ಕೊರೋನಾ ಸೋಂಕಿತರ ಸಾವಿನ ದರ ಶೇ.1.06 ರಷ್ಟುಮಾತ್ರ ವರದಿಯಾಗಿದೆ.

ರಾಜ್ಯದಲ್ಲಿ ಈವರೆಗೆ ರಾಜ್ಯದಲ್ಲಿ ಬರೋಬ್ಬರಿ 69.52 ಲಕ್ಷ ಮಂದಿಗೆ ಸೋಂಕು ಪರೀಕ್ಷೆ ನಡೆಸಲಾಗಿದ್ದು ಈ ಪೈಕಿ 7.82 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಪಾಸಿಟಿವಿಟಿ ದರ ಶೇ.11.25ರಷ್ಟುದಾಖಲಾಗಿತ್ತು. ಬುಧವಾರದ 88 ಸೇರಿ ಒಟ್ಟು 10,696 ಮಂದಿ ಸಾವನ್ನಪ್ಪಿದ್ದು ಸಾವಿನ ದರ ಶೇ.1.36 ರಷ್ಟಿತ್ತು.

ಆದರೆ, ಕಳೆದ ಒಂದು ವಾರದಿಂದ ಸಾವಿನ ದರ ಹಾಗೂ ಪಾಸಿಟಿವಿಟಿ ದರ ಕಡಿಮೆಯಾಗಿದೆ. ಪ್ರತಿ 100 ಮಂದಿಯ ಪರೀಕ್ಷೆಯಲ್ಲಿ 6.51 ಮಂದಿಗಷ್ಟೇ ಸೋಂಕು ದೃಢಪಟ್ಟಿದ್ದು, ಸಾವಿನ ದರವು ಶೇ.1.06ಕ್ಕೆ ಕಡಿಮೆಯಾಗಿದೆ.

ಅ.15ರಿಂದ ಅ.21ರವರೆಗೆ ಒಂದು ವಾರದಲ್ಲಿ 5,97,032 ಪರೀಕ್ಷೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ 38,925 ಮಂದಿಗೆ ಸೋಂಕು ದೃಢಪಟ್ಟಿದೆ. ಏಳು ದಿನಗಳಲ್ಲಿ 413 ಮಂದಿ ಕೊರೋನಾದಿಂದ ಬಲಿಯಾಗಿದ್ದಾರೆ.

ಬುಧವಾರ 5,872 ಮಂದಿಗಷ್ಟೇ ಸೋಂಕು:

ರಾಜ್ಯದಲ್ಲಿ ದೇಶಕ್ಕೇ ಅಧಿಕ ಕೊರೋನಾ ಪರೀಕ್ಷೆಗಳನ್ನು ನಡೆಸುತ್ತಿದ್ದರೂ ಕಳೆದ ಒಂದು ವಾರದಿಂದ ಕೊರೋನಾ ಸೋಂಕಿನ ಪಾಸಿಟಿವಿಟಿ ದರ ಹಾಗೂ ಸಾವಿನ ದರ ಗಣನೀಯವಾಗಿ ಇಳಿಕೆಯಾಗಿರುವುದು ಆಶಾದಾಯಕ ಬೆಳವಣಿಗೆ.

ಬುಧವಾರ ರಾಜ್ಯದಲ್ಲಿ 1.08 ಲಕ್ಷ ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಿದ್ದು ಕೇವಲ 5,872 ಮಾತ್ರ ಸೋಂಕು ದೃಢಪಟ್ಟಿದೆ. ಈ ಮೂಲಕ ಪರೀಕ್ಷೆಗೆ ಒಳಪಟ್ಟಪ್ರತಿ 100 ಮಂದಿಗೆ ಶೇ.5.42 ಮಂದಿಗೆ ಮಾತ್ರ ಸೋಂಕು ದೃಢಪಡುತ್ತಿದೆ.

ಮೈಸೂರಿನ ಕೊರೋನಾ ಪರಿಸ್ಥಿತಿಯೂ ಕಳೆದ ಒಂದು ವಾರದಿಂದ ಗಣನೀಯ ಸುಧಾರಣೆ ಕಂಡಿದೆ. ಪ್ರತಿದಿನ ನಡೆಸುತ್ತಿರುವ ಸರಾಸರಿ ಆರ್‌ಟಿ-ಪಿಸಿಆರ್‌ ಪರೀಕ್ಷೆ 2,241 ರಿಂದ 3,509 ಕ್ಕೆ ಹೆಚ್ಚಳವಾಗಿದೆ. ಪಾಸಿಟಿವಿಟಿ ದರ ಶೇ.9 ರಿಂದ 7.8ಕ್ಕೆ ಇಳಿಕೆಯಾಗಿದೆ. ಮರಣ ಪ್ರಮಾಣ ಶೇ.1.8 ರಿಂದ ಶೇ.1.1ಕ್ಕೆ ಇಳಿಕೆಯಾಗಿದೆ.

ರಾಜ್ಯದಲ್ಲಿ ದೇಶದಲ್ಲೇ ಅತಿ ಹೆಚ್ಚು ಪರೀಕ್ಷೆ ನಡೆಸುತ್ತಿದ್ದರೂ ಕಳೆದ ಒಂದು ವಾರದಿಂದ ಪಾಸಿಟಿವಿಟಿ ದರ ಹಾಗೂ ಸಾವಿನ ದರ ಗಣನೀಯವಾಗಿ ಕಡಿಮೆಯಾಗುತ್ತಿದೆ. ಬುಧವಾರ ಶೇ.5.42 ರಷ್ಟುಮಾತ್ರ ಪಾಸಿಟಿವಿಟಿ ದರ ವರದಿಯಾಗಿದ್ದು, ಸಾವಿನ ದರವೂ ಗಣನೀಯವಾಗಿ ಇಳಿಕೆಯಾಗಿದೆ.

- ಡಾ.ಕೆ. ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು

click me!