ಬೆಂಗಳೂರು (ನ.12) : ಭಾರತ್ ಗೌರವ್ ರೈಲು ಸಂಚಾರ ಸೌಲಭ್ಯ ಪಡೆದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಈ ರೈಲು ಕಾಶಿಯನ್ನು ಕರ್ನಾಟಕಕ್ಕೆ ಹತ್ತಿರವಾಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಮತ್ತು ರೈಲ್ವೆ ಇಲಾಖೆ ಸಹಯೋಗದ ‘ಭಾರತ್ ಗೌರವ್ ಕಾಶಿಯಾತ್ರೆ ರೈಲಿ’ಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಧಾನಿ ಚಾಲನೆ ನೀಡಿದರು. ಬಳಿಕ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಮ್ಮ ಪರಂಪರೆಯು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾಗಿದೆ. ಭಾರತ್ ಗೌರವ್ ರೈಲು ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಸ್ಥಳಗಳನ್ನು ಸಂಪರ್ಕಿಸುತ್ತಿದೆ. ಈ ಮೂಲಕ ‘ಏಕ ಭಾರತ ಶ್ರೇಷ್ಠ ಭಾರತ’ದ ಸ್ಫೂರ್ತಿಯನ್ನು ಬಲಪಡಿಸುತ್ತಿದೆ. ಇಂತಹ ವಿಶೇಷತೆಗಳನ್ನು ಒಳಗೊಂಡಿರುವ ಭಾರತ್ ಗೌರವ್ ಕಾಶಿಯಾತ್ರೆ ರೈಲು ಸಂಚಾರ ಸೌಲಭ್ಯವನ್ನು ಪಡೆದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ರೈಲು ಕಾಶಿಯನ್ನು ಕರ್ನಾಟಕಕ್ಕೆ ಹತ್ತಿರವಾಗಿಸುತ್ತದೆ. ಇನ್ನು ಮುಂದೆ ಯಾತ್ರಿಗಳು ಮತ್ತು ಪ್ರವಾಸಿಗರು ಕಾಶಿ, ಅಯೋಧ್ಯಾ ಹಾಗೂ ಪ್ರಯಾಗ್‌ರಾಜ್‌ಗೆ ಭೇಟಿ ನೀಡುವುದು ಸುಲಭವಾಗಲಿದೆ’ ಎಂದರು.
ಕಾಶಿಯಾತ್ರೆ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ, ಸೀಟುಗಳು ಭರ್ತಿ
ಈವರೆಗೆ ದೇಶದ ವಿವಿಧ ಭಾಗಗಳಲ್ಲಿ ಶಿರಡಿ ದೇವಾಲಯ ಯಾತ್ರೆ, ಶ್ರೀರಾಮಾಯಣ ಯಾತ್ರೆ, ದಿವ್ಯ ಕಾಶಿ ಯಾತ್ರೆ ಹೆಸರಿನಲ್ಲಿ ಭಾರತ್ ಗೌರವ್ ರೈಲಿನ ಒಂಭತ್ತು ಪ್ರಯಾಣಗಳು ನಡೆದಿವೆ. ಆ ಎಲ್ಲಾ ರೈಲುಗಳು ಪ್ರಯಾಣಿಕರಿಗೆ ಅತ್ಯಂತ ಆಹ್ಲಾದಕರ ಅನುಭವವನ್ನು ನೀಡಿವೆ. ಇಂತಹ ಭಾರತ್ ಗೌರವ್ ಕಾಶಿಯಾತ್ರೆ ರೈಲು ಆರಂಭಿಸಿದ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆಗಳು ಎಂದು ಶ್ಲಾಘನೆ ವ್ಯಕ್ತಪಡಿಸಿದರು. ದೇಶದ ವಿವಿಧ 9 ಕಡೆ ಖಾಸಗಿ ಕಂಪನಿಗಳು ಭಾರತ್ ಗೌರವ್ ರೈಲು ನಿರ್ವಹಿಸುತ್ತಿದ್ದರೆ, ರಾಜ್ಯದಲ್ಲಿ ಸರ್ಕಾರವೇ ಈ ಹೊಣೆ ಹೊತ್ತುಕೊಂಡಿರುವುದು ಗಮನಾರ್ಹ.
547 ಯಾತ್ರಾರ್ಥಿಗಳಿಂದ ಮೊದಲ ಯಾತ್ರೆ: ಪ್ರಧಾನಿ ಮೋದಿ ಚಾಲನೆ ನೀಡಿದ ‘ಭಾರತ್ ಗೌರವ್ ಕಾಶಿಯಾತ್ರೆ’ ರೈಲಿನಲ್ಲಿ ರಾಜ್ಯದ ನಾನಾ ಭಾಗಗಳ 547 ಮಂದಿ ಯಾತ್ರಾರ್ಥಿಗಳು ಕಾಶಿಯಾತ್ರೆಗೆ ತೆರಳಿದರು.
ಯಾತ್ರಾರ್ಥಿಗಳು ಮುಂದಿನ ಎಂಟು ದಿನಗಳ ಕಾಲ ಕಾಶಿ, ಅಯೋಧ್ಯೆ ಹಾಗೂ ಪ್ರಯಾಗ್‌ರಾಜ್‌ನ ಹಿಂದು ಧಾರ್ಮಿಕ ಸ್ಥಳಗಳ ಪುಣ್ಯದರ್ಶನ ಪಡೆಯಲಿದ್ದಾರೆ. 20 ಸಾವಿರ ರು. ವೆಚ್ಚದ ಈ ಯಾತ್ರೆಗೆ ರಾಜ್ಯ ಸರ್ಕಾರ ಐದು ಸಾವಿರ ರು. ಸಹಾಯಧನ ನೀಡುತ್ತಿದ್ದು, 15 ಸಾವಿರ ರು. ಯಾತ್ರಾರ್ಥಿಗಳು ಪಾವತಿಸಿದ್ದಾರೆ. ಸ್ಲೀಪರ್ 3ಎಸಿ ಆಸನ ನೀಡಲಾಗಿದ್ದು, ಊಟ, ವಸತಿ, ಸ್ಥಳಗಳ ಭೇಟಿ ಎಲ್ಲವನ್ನು ಐಆರ್‌ಸಿಟಿಸಿ ಸಿಬ್ಬಂದಿಯೇ ನಿರ್ವಹಿಸಲಿದ್ದಾರೆ.
ಕರ್ನಾಟಕದ ಕಾಶಿ ಯಾತ್ರೆ ರೈಲಿಗೂ ಮೋದಿ ಚಾಲನೆ?
ರೈಲು ಬೋಗಿಗಳ ಮೇಲೆ ರಾಜ್ಯದ ದೇವಾಲಯಗಳ ಚಿತ್ರ
ಈ ರೈಲು 14 ಬೋಗಿಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಬೋಗಿಯ ಮೇಲೂ ರಾಜ್ಯದ ದೇವಸ್ಥಾನಗಳ ಛಾಯಾಚಿತ್ರಗಳನ್ನು ಹಾಕಲಾಗಿದೆ. ಪ್ರಮುಖವಾಗಿ ಹಂಪಿ ವಿರೂಪಾಕ್ಷ, ಕುಕ್ಕೆ ಸುಬ್ರಮಣ್ಯ, ಮೈಸೂರು ಚಾಮುಂಡೇಶ್ವರಿ, ಮೇಲುಕೋಟೆ ಚೆಲುವನಾರಾಯಣ ಸ್ವಾಮಿ, ಸಿಗಂಧೂರು ಚೌಡೇಶ್ವರಿ, ಸೌದತ್ತಿ ಯಲ್ಲಮ್ಮ, ಬಾದಾಮಿ ಬನಶಂಕರಿ ದೇವಸ್ಥಾನ ಸೇರಿದಂತೆ 28 ದೇವಸ್ಥಾನಗಳ ಬ್ರಾಂಡಿಂಗ್ ಮಾಡಲಾಗಿದೆ. ರಾಜ್ಯದ ದೇವಸ್ಥಾನಗಳನ್ನು ಭಾರತದ ಉದ್ದಗಲಕ್ಕೂ ಸಂಚರಿಸಲಿರುವ ಟ್ರೈನ್ ಮೂಲಕ ಪ್ರಚಾರ ಮಾಡುವುದು ನಮ್ಮ ಉದ್ದೇಶವನ್ನು ಧಾರ್ಮಿಕ ದತ್ತಿ ಇಲಾಖೆ ಹೊಂದಿದೆ