
ಗೆಳೆಯನನ್ನು ನಂಬಿ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದಕ್ಕೆ 3.5 ಲಕ್ಷ ರೂಪಾಯಿ ಕಳೆದುಕೊಂಡೆ ಅಂತ ಯುವಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ಈಗ ಸಖತ್ ಚರ್ಚೆಯಲ್ಲಿದೆ. ಮುಂಬೈನಲ್ಲಿ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುವ ತನ್ನ ಫ್ರೆಂಡ್ ಈ ಕಾರ್ಡ್ ಬಳಸಿದ್ದಾನೆ ಎಂದು ರೆಡ್ಡಿಟ್‌ನಲ್ಲಿ (Reddit) ಹಂಚಿಕೊಂಡ ಪೋಸ್ಟ್‌ನಲ್ಲಿ ಆತ ಹೇಳಿಕೊಂಡಿದ್ದಾನೆ. ಹಣ ವಾಪಸ್ ಬಾರದ ಕಾರಣ, ಕಾರ್ಡ್ ಮಾಲೀಕ ಈಗ ಕಾನೂನು ಕ್ರಮಕ್ಕೆ ಮುಂದಾಗಿದ್ದಾನೆ.
ಈ ಹಿಂದೆಯೂ ತನ್ನ ಕ್ರೆಡಿಟ್ ಕಾರ್ಡ್ ಅನ್ನು ಆ ಗೆಳೆಯ ಬಳಸಿದ್ದ, ಪ್ರತಿ ಬಾರಿಯೂ ಸರಿಯಾದ ಸಮಯಕ್ಕೆ ಹಣ ವಾಪಸ್ ಕೊಟ್ಟಿದ್ದ ಎಂದು ಯುವಕ ಹೇಳಿದ್ದಾನೆ. ಇದೇ ನಂಬಿಕೆಯಿಂದ ಈ ಸಲವೂ ಕಾರ್ಡ್ ಬಳಸಲು ಕೊಟ್ಟಿದ್ದ. ಆದರೆ, ಈ ಬಾರಿ ಆತನ ಗೆಳೆಯ ಅಂತರಾಷ್ಟ್ರೀಯ ವಿಮಾನ ಟಿಕೆಟ್‌ಗಳು, ಪ್ರಯಾಣದ ಖರ್ಚುಗಳು ಮತ್ತು ಹಳೆಯ ಕೆಲವು ಖರೀದಿಗಳನ್ನು ಸೇರಿಸಿ ಒಟ್ಟು ಸುಮಾರು 3.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. 'ಹಣ ವಾಪಸ್ ಕೊಡುತ್ತೇನೆ, ಸ್ವಲ್ಪ ದಿನ ಕಾಯಬೇಕು' ಎಂದು ಮೊದಲು ಆ ಗೆಳೆಯ ಭರವಸೆ ನೀಡಿದ್ದ. ಆದರೆ, ದಿನಗಳು ಕಳೆದಂತೆ ಆತ ಫೋನ್ ಕಾಲ್‌ಗಳಿಗೂ ಉತ್ತರ ನೀಡುವುದನ್ನು ನಿಲ್ಲಿಸಿದ. ಮೆಸೇಜ್‌ಗಳಿಗೂ ರಿಪ್ಲೈ ಮಾಡಲಿಲ್ಲ ಎಂದು ಯುವಕ ಪೋಸ್ಟ್‌ನಲ್ಲಿ ಆರೋಪಿಸಿದ್ದಾನೆ.
ಆದರೆ, ಆ ಗೆಳೆಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು, ಫೋಟೋಗಳೊಂದಿಗೆ ಆಕ್ಟಿವ್ ಆಗಿದ್ದಾನೆ, ಹೊರಗಡೆ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದಾನೆ ಎಂದು ಯುವಕ ಆರೋಪಿಸಿದ್ದಾನೆ. ಇದೇ ಕಾರಣಕ್ಕೆ ಬೇರೊಬ್ಬ ಗೆಳೆಯನ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅದು ವಿಫಲವಾಯಿತು ಎಂದಿದ್ದಾನೆ. ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವ ಸಮಯ ಬಂದಾಗ ಆರ್ಥಿಕ ಒತ್ತಡ ಹೆಚ್ಚಾಗಿ, ತನ್ನ ನೆಮ್ಮದಿಯೇ ಹಾಳಾಗಿದೆ ಎಂದು ಯುವಕ ಬರೆದುಕೊಂಡಿದ್ದಾನೆ. ಡಿಸೆಂಬರ್‌ನಲ್ಲಿ ತನ್ನ ಮದುವೆ ಇರುವುದರಿಂದ ಈ 3.5 ಲಕ್ಷ ರೂಪಾಯಿಯ ಹೆಚ್ಚುವರಿ ಹೊರೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದೂ ಹೇಳಿದ್ದಾನೆ. ಹಣಕಾಸು ವಹಿವಾಟಿನ ದಾಖಲೆಗಳು ಮತ್ತು ಹಣ ವಾಪಸ್ ನೀಡುವುದಾಗಿ ಹೇಳಿದ ಮೆಸೇಜ್‌ಗಳು ತನ್ನ ಬಳಿ ಇವೆ ಎಂದು ಹೇಳಿರುವ ಆತ, ಮುಂದೆ ಏನು ಮಾಡಬೇಕೆಂದು ಸೋಶಿಯಲ್ ಮೀಡಿಯಾ ಬಳಕೆದಾರರ ಬಳಿ ಸಲಹೆ ಕೇಳಿದ್ದಾನೆ.
ನಂತರ, ತನ್ನ ಬೇರೆ ಸ್ನೇಹಿತರ ಬಳಿ ಈ ಗೆಳೆಯನ ಬಗ್ಗೆ ವಿಚಾರಿಸಿದಾಗ, ಅವರಿಗೂ ಇದೇ ರೀತಿ ನಂಬಿಸಿ ಹಣ ಪೀಕಿದ್ದಾನೆ ಎಂಬುದು ಗೊತ್ತಾಗಿದೆ. ಹೀಗೆ ಮೋಸ ಮಾಡುವುದು ಆತನ ಹಳೇ ಚಾಳಿ ಎಂಬುದು ಸ್ಪಷ್ಟವಾಗಿದೆ ಎಂದು ಯುವಕ ಬರೆದಿದ್ದಾನೆ. ಆದರೆ, ಇಷ್ಟೆಲ್ಲಾ ಆದರೂ ಆ ಗೆಳೆಯ ತನ್ನನ್ನು ಯಾವುದೇ ಸೋಶಿಯಲ್ ಮೀಡಿಯಾ ಖಾತೆಯಿಂದ ಅನ್‌ಫಾಲೋ ಅಥವಾ ಬ್ಲಾಕ್ ಮಾಡಿಲ್ಲ ಎಂದೂ ಯುವಕ ಹೇಳಿದ್ದಾನೆ.
ಯುವಕನ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಅನೇಕರು ಸಲಹೆಗಳೊಂದಿಗೆ ಮುಂದೆ ಬಂದಿದ್ದಾರೆ. ಆ ಗೆಳೆಯನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಲವರು ಬರೆದಿದ್ದಾರೆ. ಲೀಗಲ್ ನೋಟಿಸ್ ಕಳುಹಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಇದೇ ವೇಳೆ, ಬೇರೆಯವರಿಗೆ ಕ್ರೆಡಿಟ್ ಕಾರ್ಡ್ ಬಳಸಲು ಕೊಟ್ಟಿದ್ದೇ ದೊಡ್ಡ ತಪ್ಪು, ಯಾರನ್ನೂ ಕಣ್ಮುಚ್ಚಿ ನಂಬಬಾರದು ಎಂದು ಇನ್ನು ಕೆಲವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ